ಗುರುಮಠಕಲ್: ಮನುಷ್ಯ ಜೀವನದಲ್ಲಿ ಘಟಿಸಿ ಹೋದ ಸಿಹಿ ಘಟನೆಗಳನ್ನು ಸದಾ ನೆನಪಿನಲ್ಲಿ ಇರುವಂತೆ ಮಾಡುವುದು ಛಾಯಾಚಿತ್ರಗಳು, ಹಾಗಾಗಿ ಅವು ನಮ್ಮ ಬದುಕಿಗೆ ಅವಶ್ಯವಾಗಿವೆ ಎಂದು ವಿಶೇಷ ಉಪನ್ಯಾಸಕ ಹಣಮಂತರಾವ್ ಗೋಂಗ್ಲೆ ಹೇಳಿದರು.
ಪಟ್ಟಣದ ಹೀರಾ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಛಾಯಾ ಗ್ರಾಹಕರ ಸಂಘದ ವತಿಯಿಂದ ನಡೆದ ವಿಶ್ವ ಛಾಯಾ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವ ಬದುಕುಗಳನ್ನು ಇಂದು ಪೋಟೋ ಹಾಗೂ ವಿಡಿಯೋಗಳ ಮೂಲಕ ನೋಡಿ ತಿಳಿದುಕೊಳ್ಳಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ನಲೇ ಕ್ಯಾಮರಾ ಇರುವುದರಿಂದ ಜನ ಸಾಮಾನ್ಯರು ತಮ್ಮ ಮೊಬೈಲ್ನಲೇ ಪೋಟೋ ತೆಗೆದುಕೊಳ್ಳುತ್ತಿದ್ದು, ಛಾಯಾಗ್ರಾಹಕರ ಕೆಲಸಕ್ಕೆ ಕತ್ತರಿ ಬಿಳುವ ಸಾಧ್ಯತೆಗಳಿದೆ. ಛಾಯಾ ಗ್ರಾಹಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸಲುವಾಗಿ ಅವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದರು.
ಪಟ್ಟಣದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ವೈಜ್ಞಾನಿಕ ಕ್ಷೇತ್ರ ಅಭಿವೃದ್ಧಿ ಹೊಂದಲು ಛಾಯಾಚಿತ್ರದ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬ ಛಾಯಾ ಗ್ರಾಹಕನಿಗೆ ಉತ್ತಮ ಕಲಾ ಹಾಗೂ ಪರಿಸರ ಪ್ರೀತಿಯ ಜ್ಞಾನವಿದ್ದರೆ ಸುಂದರ ಪೋಟೋ ತೆಗೆಯಲು ಸಾಧ್ಯವಾಗುತ್ತದೆ ಎಂದರು. ವಲಯ ಅಧ್ಯಕ್ಷ ತಾಯಪ್ಪ ಬೊಮ್ಮನಳ್ಳಿ, ಮೋಹನ ಕುಮಾರ್ ಮೋಂಗ್ಲಿ, ಚಂದ್ರಕಾಂತ, ಬಸಪ್ಪ, ಛಾಯಾಚಿತ್ರ ಗ್ರಾಹಕರು ಇದ್ದರು.