Advertisement

ಪ್ರಕೃತಿ ಮಡಿಲಲ್ಲಿ ಗುರುಕುಲ ವ್ಯವಸ್ಥೆ ವಸತಿ ಶಾಲೆ

05:31 PM Jun 02, 2022 | Team Udayavani |

ಮುಧೋಳ: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಆರ್ಥಿಕ ಹೊರೆಯಾಗುವ ಇಂದಿನ ದಿನಮಾನದಲ್ಲಿ ತಾಲೂಕಿನ ಹಲಗಲಿ ಗ್ರಾಮದಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಸೆಗೆ ನೀರೆರೆಯುವ ಕೆಲಸ ಮಾಡುತ್ತಿದೆ.

Advertisement

2013ರಲ್ಲಿ ಇಂದಿನ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಮುತುವರ್ಜಿಯಿಂದ ತಾಲೂಕಿನ ಹಲಗಲಿ ಗ್ರಾಮದ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯಕ್ಕೆ ಹೊಂದಿಕೊಂಡು ತಲೆಯೆತ್ತಿರುವ ಅಟಲ್‌ ಬಿಹಾರಿ ಸರ್ಕಾರಿ ವಸತಿ ಶಾಲೆ ಗುಣಮಟ್ಟದ ಶಿಕ್ಷಣದಿಂದ ತಾಲೂಕಿನಲ್ಲಿಯೇ ಉತ್ತಮ ಶಾಲೆಯೆಂದು ಗುರುತಿಸಿಕೊಂಡಿದೆ.

ಆರಂಭದಲ್ಲಿ ಕೇವಲ 80 ವಿದ್ಯಾರ್ಥಿಗಳು: ಕೇವಲ 80 ವಿದ್ಯಾರ್ಥಿಗಳಿಂದ ಆರಂಭಗೊಂಡಿದ್ದ ಶಾಲೆಯಲ್ಲಿ ಇಂದು 543 ವಿದ್ಯಾರ್ಥಿಗಳು ವಸತಿಯೊಂದಿಗೆ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ನುರಿತ ಶಿಕ್ಷಕರ ಪಾಠಬೋಧನೆಯಿಂದಾಗಿ ಶಾಲೆಯ ಫಲಿತಾಂಶ ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತ ವಿದ್ಯಾರ್ಥಿಗಳ ಜೀವನಕ್ಕೆ ಭದ್ರಬುನಾದಿ ಹಾಕುವ ಕೆಲಸವಾಗುತ್ತಿದೆ. ಸ್ವತ್ಛ ಪರಿಸರ ಗುಣಮಟ್ಟದ ಶಿಕ್ಷಣ: ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಶಾಲೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. 10 ಎಕರೆ ವಿಶಾಲ ಪ್ರದೇಶದಲ್ಲಿ ತಲೆಯೆತ್ತಿರುವ ಹೊಸ ಕಟ್ಟಡವನ್ನು ಗಿಡಮರಗಳಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ವಿದ್ಯಾರ್ಥಿಗಳಿಗೆ ತಂಪಿನ ವಾತಾವರಣದೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ ಈ ಶಾಲೆ.

ನುರಿತ ಶಿಕ್ಷಕರು: ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಿಸಲು ನಿರಂತರ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳುವ ಶಿಕ್ಷಕರ ಪ್ರತಿಯೋರ್ವ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ವಸತಿ ಶಾಲೆಯಲ್ಲಿ ಒಟ್ಟು 22 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಏಳಿಗೆಗಾಗಿ ನಿರಂತವಾಗಿ ಶ್ರಮಿಸುತ್ತಿದ್ದಾರೆ.

Advertisement

ರಾಜ್ಯಕ್ಕೆ ದ್ವಿತೀಯ: 2020ರಲ್ಲಿ ಶಾಲೆಯ ಕೀರ್ತಿ ದಾಯಗೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡಿದ್ದರು. ಪ್ರಸಕ್ತ ಸಾಲಿನಲ್ಲಿ 45 ಡಿಸ್ಟಿಂಗÕನ್‌, 26 ಫಸ್ಟ್‌ ಕ್ಲಾಸ್‌ನಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದಾರೆ. ಬೆಳಗಿನಿಂದಲೇ ವಿದ್ಯಾಭ್ಯಾಸ: ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಒತ್ತು ನೀಡುವ ಶಿಕ್ಷಕರು ಬೆಳಗ್ಗಿನ 4:30ಕ್ಕೆ ಅವರ ದೈನಂದಿನ ಚಟುವಟಿಕೆ ಆರಂಭಿಸುವಂತೆ ಪ್ರೇರೇಪಿಸುತ್ತಾರೆ. 6ರಿಂದ ಯೋಗ ಬಳಿಕ ಓದುವ ಹವ್ಯಾಸ ರೂಢಿಸಿರುವ ಶಿಕ್ಷಕರ ವಿದ್ಯಾರ್ಥಿಗಳ ಆರೋಗ್ಯಕ್ಕೂ ಒತ್ತು ನೀಡುತ್ತಾರೆ.

2019-20ರಿಂದ ವಿಜ್ಞಾನ ಪದವಿ ಪೂರ್ವ ಕಾಲೇಜು: 2013ರಿಂದ ಕೇವಲ ಪ್ರೌಢಶಾಲೆಗೆ ಸೀಮಿತವಾಗಿದ್ದ ವಸತಿ ಶಾಲೆಯಲ್ಲಿ 2019-20ರಿಂದ ಪದವಿ ಪೂರ್ವ ವಿಜ್ಞಾನ ಕಾಲೇಜನ್ನು ಆರಂಭಿಸಲಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮದ ವಿಜ್ಞಾನ ಪದವಿ ಪೂರ್ವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಆರಂಭವಾಗಿರುವ ಶಾಲೆಯಲ್ಲಿ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ಇದೆ. ಗ್ರಾಮಸ್ಥರ ಪ್ರೋತ್ಸಾಹದೊಂದಿಗೆ ನಮ್ಮ ಶಿಕ್ಷಕರ ತಂಡ ನಿರಂತರವಾಗಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. – ಎಲ್‌.ಎಂ. ನದಾಫ್‌, ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಪ್ರೌಢಾಶಾಲೆ ವಿಭಾಗದ ಮುಖ್ಯ ಶಿಕ್ಷಕ

ಬಡವರ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅಟಲ್‌ ಬಿಹಾರ ವಾಜಪೇಯಿ ವಸತಿ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದ ಕಾಲೇಜು ಇದೊಂದೆ ಇರುವುದರಿಂದ ಮಕ್ಕಳು ಶಾಲೆಯಲ್ಲಿ ನಿಶ್ಚಿಂತರಾಗಿ ವಿದ್ಯಾರ್ಜನೆ ಮಾಡಲಿ.  –ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ಸುಂದರ ಪರಿಸರದ ಮಧ್ಯೆಯಿರುವ ಹಲಗಲಿಯ ಅಟಲ್‌ಬಿಹಾರಿ ವಾಜಪೇಯಿ ವಸತಿ ಶಾಲೆ ಶೈಕ್ಷಣಿಕವಾಗಿಯೂ ಹೆಸರಾಗಿದೆ. ವಿದ್ಯಾರ್ಥಿಗಳ ತಾಂತ್ರಿಕ ಗುಣಮಟ್ಟ ಸುಧಾರಣೆ ಸಲುವಾಗಿ ಶಾಲೆಯಲ್ಲಿ ವ್ಯವಸ್ಥೆ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಇದ್ದು, ಇದರಿಂದ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಲಿದೆ. ನಮಗೆ ಸ್ಥಳೀಯರು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ವೃದ್ಧಿಗೆ ನೆರವಾಗುತ್ತಿದೆ. –ಮಹೇಶ ಪೋತದಾರ, ಉಪನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ ಬಾಗಲಕೋಟೆ

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next