ದೇಬಾಸಿಶ್ ಪಟ್ನಾಯಕ್ ಅವರ ಒಡಿಸ್ಸಿ ಮತ್ತು ಕೂಚಿಪುಡಿ ಕಲಾವಿದೆ ವೈಜಯಂತಿ ಕಾಶಿ ಹಾಗೂ ಪ್ರತೀಕ್ಷಾ ಕಾಶಿಯವರ ವಸ್ತು ಪ್ರಧಾನ ಯುಗಳ ನೃತ್ಯ ಎಲ್ಲರಿಗೂ ಮೆಚ್ಚುಗೆಯಾಯಿತು.
ನೃತ್ಯ ವಿದ್ವಾನ್ ಶ್ರಾವಣ್ ಉಳ್ಳಾಲ್ ಅವರ ಸಾರಥ್ಯದ ಮಂತ್ರ ನಾಟ್ಯಕಲಾ ಗುರುಕುಲ ಇತ್ತೀಚೆಗೆ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಗುರುಕುಲ ಉತ್ಸವ -2018 ಆಯೋಜಿಸಿತ್ತು. ಖ್ಯಾತ ಕಲಾವಿದ ದೇಬಾಸಿಶ್ ಪಟ್ನಾಯಕ್ ಒರಿಸ್ಸಾ ಇವರ ಒಡಿಸ್ಸಿ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರಾರಂಭಿಕ ನೃತ್ಯವಾಗಿ ಕೀರವಾಣಿ ರಾಗದ ಪಲ್ಲವಿ ಪ್ರಸ್ತುತಗೊಂಡಿತು. ಗುರು ದುರ್ಗಾ ಚರಣ್ ರಣಬೀರ್ ಅವರ ಸಂಯೋಜನೆಯ ಈ ಸುಂದರ ಪಲ್ಲವಿ ಒಡಿಸ್ಸಿಯ ಲಾಸ್ಯಭರಿತ ಮೃದುವಾದ ನೃತ್ಯದಿಂದ ಆರಂಭಗೊಂಡು ವೈಭವದಿಂದ ಮುಕ್ತಾಯಗೊಂಡಿತು. ಮುಂದೆ ಅಭಿನಯ ಪ್ರಧಾನವಾದ ಚಂದ ನೃತ್ಯದಲ್ಲಿ ಕೃಷ್ಣನ ವಿವಿಧ ಲೀಲೆಗಳಿಂದ ಪೂತನಿ ಸಂಹಾರ ಹಾಗೂ ಬಾಯಲ್ಲಿ ಬ್ರಹ್ಮಾಂಡ ದರ್ಶನದ ಭಾಗ, ಅತ್ಯುತ್ತಮ ಸಂಗೀತ ಹಾಗೂ ಆಕರ್ಷಕ ಅಭಿನಯಗಳಿಂದ ಮನ ಮುಟ್ಟಿತು. ಕೊನೆಯಲ್ಲಿ ಪ್ರಸ್ತುತಗೊಂಡ ಶಿವಾಷ್ಟಕಂ ರಭಸವಾದ ನೃತ್ಯ ಹಾಗೂ ಪರಿಣಾಮಕಾರಿ ಅಭಿನಯಗಳಿಂದ ರೋಚಕವಾಗಿ ಮೂಡಿಬಂತು.
ಕಾರ್ಯಕ್ರಮದ ಮುಖ್ಯಭಾಗವಾಗಿ ಮೂಡಿಬಂದ ಹಿರಿಯ ಕೂಚಿಪುಡಿ ಕಲಾವಿದೆ ಗುರು ವೈಜಯಂತಿ ಕಾಶಿ ಹಾಗೂ ಪ್ರತೀಕ್ಷಾ ಕಾಶಿಯವರ ವಸ್ತು ಪ್ರಧಾನ ಯುಗಳ ನೃತ್ಯ ಪಂಡಿತ, ಪಾಮರರೆಲ್ಲರಿಗಗೂ ಮೆಚ್ಚುಗೆಯಾಯಿತು. ಸಂತ ನಾರಾಯಣ ತೀರ್ಥರ ಕೃಷ್ಣಲೀಲಾ ತರಂಗಿಣಿಯಿಂದ ಆಯ್ದ ಕೂಚಿಪುಡಿ ಶೈಲಿಯ ಅತ್ಯಂತ ಆಕರ್ಷಕ ನೃತ್ಯ ತರಂಗಂನೊಂದಿಗೆ ಕಾರ್ಯಕ್ರಮ ಆರಂಭಿಸಿದ ಕಲಾವಿದರು ಅತ್ಯಂತ ನಾಜೂಕು ಹಾಗೂ ವೈವಿಧ್ಯತೆಯ ನೃತ್ಯ ಸಂಯೋಜನೆಯೊಂದಿಗೆ ಪ್ರಬುದ್ಧತೆಯನ್ನು ಮೆರೆದರು. ವೈಜಯಂತಿ ಕಾಶಿಯವರು ಸಾಹಿತ್ಯದ ಹಲವು ಭಾಗಗಳನ್ನು ಮುಖ್ಯ ವಸ್ತುವಾಗಿಸಿ ಅಲ್ಲಿ ಕಲಾಗಾರಿಕೆ ತೋರುತ್ತಿದ್ದುದು ಅಪ್ಯಾಯಮಾನವಾಗಿತ್ತು. ಪಾಹಿ ಪಾಹಿ ಎಂಬ ಸಾಹಿತ್ಯವನ್ನು ಕರ್ನಾಟಕ ಸಂಗೀತದ ಸ್ವರ ಕಲ್ಪನೆ ಹಾಗೂ ತಾನಂನೊಂದಿಗೆ ಬಳಸಿಕೊಂಡಿದ್ದು ವೈಶಿಷ್ಟ್ಯಪೂರ್ಣ.
ಮುಂದಿನ ಪ್ರಸ್ತುತಿ ಎಂ.ಆರ್.ಸತ್ಯನಾರಾಯಣ ವಿರಚಿತ ಗಾಂಧಾರಿ ಕೂಚಿಪುಡಿಯ ನೃತ್ಯ ನಾಟಕ ಶೈಲಿಯಲ್ಲಿ ಪ್ರಸ್ತುತಗೊಂಡಿತು. ಮಹಾಭಾರತದ ಒಂದು ಪ್ರಭಾವಿ ಸ್ತ್ರೀ ಪಾತ್ರ ಗಾಂಧಾರಿಯ ವಿವಾಹಪೂರ್ವ ಸಂಭ್ರಮ ತನ್ನ ಇನಿಯನ ಬಗೆಗಿನ ಕಲ್ಪನೆಗಳು ಸಂಪೂರ್ಣವಾಗಿ ಛಿದ್ರವಾಗಿ ಹುಟ್ಟು ಕುರುಡ ದೃತರಾಷ್ಟ್ರನಿಗಾಗಿ ತಾನೂ ಸ್ವಇಚ್ಛೆಯಿಂದ ಕಣ್ಣನ್ನು ಕುರುಡಾಗಿಸಿಕೊಳ್ಳುವ ಆಕೆಯ ದಿಟ್ಟ ನಿರ್ಧಾರದ ಭಾಗದಲ್ಲಿ ಕಲಾವಿದೆ ವೈಜಯಂತಿಯವರು ತಮ್ಮ ಪರಿಣತೆ ಹಾಗೂ ತಲ್ಲೀನತೆಯ ಮೂಲಕ ಹೃದಯ ತಟ್ಟಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ನೃತ್ಯ ವಿದ್ಯಾರ್ಥಿಗಳ ಸಮೂಹ ನೃತ್ಯಗಳು ಪ್ರದರ್ಶನಗೊಂಡವು. ತಮ್ಮ ಪ್ರತಿಭಾ ಪೋ›ತ್ಸಾಹಕ್ಕಾಗಿ ತಮಗೆ ಸಿಕ್ಕಿದ ಅವಕಾಶವನ್ನು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಬಳಸಿಕೊಂಡರು. ಸಂಸ್ಥೆಯ ವೆಬ್‌ಸೈಟ್ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉತ್ಸವದ ಮತ್ತೂಂದು ಪ್ರಮುಖ ಅಂಶ ಶ್ರಾವಣ್ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಉಳ್ಳಾಲ್ ಅಧ್ಯಕ್ಷೆ ಶಕೀಲಾ ಜನಾರ್ಧನ್, ಟ್ರಸ್ಟಿಗಳಾದ ಶೈನಾ ಶ್ರಾವಣ್ ಮತ್ತು ಬಬಿತಾ ಕಿರಣ್ ಒಟ್ಟಾಗಿ ನೃತ್ಯ ಗುರುಗಳಾದ ಶಾಂತಲಾ ಪ್ರಶಸ್ತಿ ವಿಜೇತ ಉಳ್ಳಾಲ ಮೋಹನ್ ಕುಮಾರ್ ಮತ್ತು ನಾಟ್ಯ ನಿಕೇತನದ ನಿರ್ದೇಶಕಿ ರಾಜಶ್ರೀ ಉಳ್ಳಾಲ್ ಅವರಿಗೆ ಮತ್ತು ಯಕ್ಷ ಗುರುಗಳಾದ ಸಬ್ಬಣಕೋಡಿ ರಾಮಭಟ್ ಅವರಿಗೆ ಗುರುವಂದನೆ ಮಾಡಿದರು. ಸಂಸ್ಕಾರ ಭಾರತೀಯ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿಯವರಿಂದ ಉದ್ಘಾಟಿಸಲ್ಪಟ್ಟ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರರ ಅಧ್ಯಕ್ಷತೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ವಿದ್ಯಾಶ್ರೀ ರಾಧಾಕೃಷ್ಣ