ಶರಣ್ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ, “ಗುರು ಶಿಷ್ಯರು’. ಇದು ಶರಣ್ ನಟನೆಯ ಚಿತ್ರ. ಇಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. ಸಹಜವಾಗಿಯೇ ಶರಣ್‌ಗೆ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.
ಈ ಚಿತ್ರದಲ್ಲಿ ಖೋಖೋ ತರಬೇತುದಾರನಾಗಿ ಕಾಣಿಸಿಕೊಂಡಿರುವ ಶರಣ್ ಜೊತೆ ಹತ್ತಾರು ಹುಡುಗರ ಬಳಗವಿದೆ. ಒಬ್ಬೊಬ್ಬರದ್ದೂ ಒಂದೊಂದು ಮ್ಯಾನರಿಸಂ. ಏನೂ ಗೊತ್ತಿರದ ಅವರಿಗೆ ಖೋಖೋ ಕಲಿಸುವ ಚಾಲೆಂಜ್ ಶರಣ್ ಅವರದ್ದು… ಈ ಹಿನ್ನೆಲೆಯಲ್ಲಿ ಚಿತ್ರ ಸಾಗುತ್ತದೆ. ಜಡೇಶ್ ನಿರ್ದೇಶನದ ಈ ಚಿತ್ರವನ್ನು ಶರಣ್ ಹಾಗೂ ತರುಣ್ ಜಂಟಿಯಾಗಿ ನಿರ್ಮಿಸಿದ್ದಾರೆ. ಶರಣ್ ಜೋಡಿಯಾಗಿ ನಿಶ್ವಿಕಾ ನಾಯು ಕಾಣಿಸಿಕೊಂಡಿದ್ದು, ದತ್ತಣ್ಣ ಪ್ರಮುಖ ಪಾತ್ರದಲ್ಲಿದ್ದಾರೆ.
ಇನ್ನು, ಚಿತ್ರದ ಕಥೆ ಬಗ್ಗೆ ಹೇಳುವುದಾದರೆ 1990ರ ದಶಕದ ಹಿನ್ನೆಲೆಯಲ್ಲಿ “ಗುರು ಶಿಷ್ಯರು’ ಸಿನಿಮಾದ ಕಥಾಹಂದರ ಸಾಗುತ್ತದೆ. ರೆಟ್ರೋ ಶೈಲಿಯಲ್ಲಿ ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಕಥೆಯಲ್ಲಿ ನಾಯಕ ನಟಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯಾಗಿರುತ್ತಾಳೆ. ಅಷ್ಟೇ ಅಲ್ಲದೇ ರವಿಚಂದ್ರನ್ ಅವರ “ಹಳ್ಳಿ ಮೇಷ್ಟ್ರು’ ಸಿನಿಮಾದಂತೆಯೇ, ನಾಯಕಿ ಹಳ್ಳಿ ಶಾಲೆಯ ಪಿ. ಟಿ ಮಾಸ್ಟರ್ ಹಿಂದೆ ಬೀಳುತ್ತಾಳಂತೆ. ಹೀಗಾಗಿ ಸಿನಿಮಾದ ಕಥಾಹಂದರಕ್ಕೆ ತಕ್ಕಂತೆ ಚಿತ್ರತಂಡ, 90ರ ದಶಕದ ರೆಟ್ರೋ ಶೈಲಿಯಲ್ಲಿಯೇ ಸಿನಿಮಾದ ಹಾಡನ್ನು ಸಂಯೋಜಿಸಿ, ಅದಕ್ಕೆ ದೃಶ್ಯರೂಪ ನೀಡಿದೆ. ಖೋ ಖೋ ಕ್ರೀಡೆಯನ್ನು ಮೂಲವಾಗಿಟ್ಟುಕೊಂಡು ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ:ಬಂಟ್ವಾಳದ ನಾವೂರಿನಲ್ಲಿ ಮಹಜರು ವಿಚಾರ: ದಿನಗಳ ಹಿಂದೆ ಕೇಳಿದ್ದು ಬಾಂಬ್ ರಿಹರ್ಸಲ್ ಶಬ್ದವೇ?
ಚಿತ್ರದಲ್ಲಿ 12 ಮಂದಿ ಮಕ್ಕಳು ನಟಿಸಿದ್ದು, ಅವರನ್ನು ಸಿನಿಮಾಕ್ಕಾಗಿಯೇ ಸಿದ್ಧಪಡಿಸಿದ್ದಾರೆ. ಇದು ಇಡೀ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತಂತೆ. ಈ ಬಗ್ಗೆ ಮಾತನಾಡುವ ತರುಣ್, “ಸಿನಿಮಾದ ಕಥೆ ಲಾಕ್ ಆದ ನಂತರ ನಮಗಿದ್ದ ದೊಡ್ಡ ಸವಾಲೆಂದರೆ 95ರ ಪರಿಸರ ಕಟ್ಟಿಕೊಡೋದು. ರೆಟ್ರೋ ಸಿನಿಮಾ ಮಾಡುವಾಗ ಅದಕ್ಕೆ ಹೆಚ್ಚಿನ ತಯಾರಿ ಬೇಕಾಗುತ್ತದೆ. ನಮಗೆ ಪಕ್ಕಾ ಹಳ್ಳಿ ವಾತಾವರಣ ಬೇಕಿತ್ತು. ಮಣ್ಣಿನ ರಸ್ತೆ, ಗಿಡ- ಮರ, ಹೊಲ-ಗದ್ದೆ, ಹಸು, ಎತ್ತಿನ ಗಾಡಿ… ಇಂತಹ ವಾತಾವರಣ ಬೇಕಾಗಿತ್ತು. ಆದರೆ, ಈಗ ಎಲ್ಲಿ ನೋಡಿದರೂ ಮೊಬೈಲ್ ಟವರ್, ಕಾಂಕ್ರೀಟ್ ರಸ್ತೆ ಕಾಣಿಸುತ್ತಿತ್ತು. ಮುಖ್ಯವಾಗಿ ನಮಗೆ ಎತ್ತಿನ ಗಾಡಿ ಬೇಕಾಗಿತ್ತು. ಅದನ್ನು ತಗೊಂಡು ಶೂಟಿಂಗ್ ಸ್ಪಾಟ್‌ಗೆ ಸಾಗಿಸೋದು ಒಂದು ಸವಲಾದರೆ, ಅದರ ಖರ್ಚು ಮತ್ತೂಂದು. ಈಗ ಅವೆಲ್ಲವನ್ನು ದಾಟಿ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಸೆಲೆಬ್ರೆಟಿಗಳ ಮಕ್ಕಳು ನಟಿಸಿದ್ದಾರೆ. ಹಾಗಂತ ಯಾರನ್ನೂ ನೇರವಾಗಿ ಆಯ್ಕೆ ಮಾಡಿಲ್ಲ. ಎಲ್ಲರನ್ನು ಆಡಿಷನ್ ಮೂಲಕವೇ ಫೈನಲ್ ಮಾಡಿದ್ದು’ ಎನ್ನುತ್ತಾರೆ.
ಮಕ್ಕಳು ತರಬೇತಿ ಪಡೆದ ಹಿನ್ನೆಲೆಯಲ್ಲಿ ಯಾವುದೇ ಪ್ರೊಫೆಷನಲ್ ಪ್ಲೇಯರ್ ಗಳಿಗೆ ಕಡಿಮೆ ಇಲ್ಲದಂತೆ ಆಡಿದ್ದಾರೆ ಎನ್ನಲು ಅವರು ಮರೆಯುವುದಿಲ್ಲ. ಖೋ ಖೋ ಜೊತೆಗೆ ಶರಣ್ ಅವರ ಅಭಿಮಾನಿಗಳಿಗಾಗಿ ಕಾಮಿಡಿ ಕೂಡಾ ಇದೆ. ಜೊತೆಗೊಂದು ಲವ್‌ಸ್ಟೋರಿಯೂ ಇದೆ. ಶರಣ್, ಪ್ರೇಮ್, ರವಿಶಂಕರ್ ಗೌಡ, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್ ಹಾಗೂ ಶಾಸಕ ರಾಜು ಗೌಡ ಪುತ್ರರು “ಗುರು ಶಿಷ್ಯರು’ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸೆಲೆಬ್ರಿಟಿ ಮಕ್ಕಳು ಇಷ್ಟು ಪ್ರಮಾಣದಲ್ಲಿ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ.
ರವಿಪ್ರಕಾಶ್ ರೈ