Advertisement

ಗುರು ಪೂರ್ಣಿಮೆ ಪೂರ್ಣತೆಯ ಸಂಕೇತ

12:17 PM Jul 10, 2017 | |

ಹುಬ್ಬಳ್ಳಿ: ಗುರುಪೂರ್ಣಿಮೆ ಎಂಬುದು ಪೂರ್ಣತೆಯ ಸಂಕೇತವಾಗಿದೆ. ಗುರು ಸನ್ನಡತೆ ಜತೆಗೆ ಬದುಕಿಗೆ ಸನ್ಮಾರ್ಗ ತೋರುತ್ತಾರೆ ಎಂದು ಮೈಸೂರಿನ ಡಾ| ಅನಂತರಾಮು ಅಭಿಪ್ರಾಯಪಟ್ಟರು. ಇಲ್ಲಿನ ಕಲ್ಯಾಣ ನಗರದಲ್ಲಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರು ಮಹಿಮೆ ಕುರಿತ ಪ್ರವಚನ ನೀಡಿದರು.

Advertisement

ಅಕ್ಷರ ಜ್ಞಾನದೊಂದಿಗೆ ಸಂಸ್ಕಾರ ಕಲಿಸಿದ, ಉತ್ತಮ ಜೀವನದ ಮಾರ್ಗ ತೋರಿದ ಗುರುವಿಗೆ ನಮನ ಸಲ್ಲಿಕೆ ಮಹತ್ವದ್ದಾಗಿದೆ ಎಂದರು. ಒಂದೇಯಾಗಿದ್ದ ವೇದಗಳನ್ನು ನಾಲ್ಕು ವೇದಗಳಾಗಿ ವಿಂಗಡಿಸಿದವರು ವ್ಯಾಸಮುನಿ. ಅದಕ್ಕಾಗಿಯೇ ಅವರಿಗೆ ವೇದವ್ಯಾಸ ಎಂದು ಕರೆಯಲಾಗುತ್ತದೆ. ನಾಲ್ಕು ವೇದಗಳನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗುತ್ತಿದೆ ಎಂಬುದನ್ನು ಅರಿತು ವ್ಯಾಸಮುನಿ ನಾಲ್ಕು ವೇದಗಳಾಗಿ ವಿಂಗಡಿಸಿದರು.

ವೇದಗಳಲ್ಲಿ ವೈದಿಕ ಸಂಸ್ಕೃತಿ ಇದೆ. ಅದು ಸಂಸ್ಕೃತ ಅಲ್ಲ ಅದಕ್ಕೆ ವ್ಯಾಕರಣ ಬೇರೆಯೇ ಇದೆ ಎಂದರು. ಕೆಲವರು ನಾಲ್ಕು ವೇದಗಳನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಇದಕ್ಕಾಗಿಯೇ ಉತ್ತರ ಭಾರತದಲ್ಲಿ ಚತುರ್ವೇದಿ ಎಂಬ ಹೆಸರಿದೆ. ನಾಲ್ಕು ವೇದಗಳನ್ನು ಸ್ಮರಣೆಯಲ್ಲಿಟ್ಟುಕೊಳ್ಳುವ ವಂಶಸ್ಥರಿಗೆ ಈ ಹೆಸರು ಇದೆ.

ಮೂರು ವೇದಗಳ ಸ್ಮರಣೆಯವರಿಗೆ ತ್ರಿವೇದಿ, ಎರಡು ವೇದಗಳ ಸ್ಮರಣೆಯವರಿಗೆ ದ್ವಿವೇದಿ ಎಂದು ಕರೆಯಲಾಗುತ್ತಿದೆ. ಪ್ರತಿಯೊಬ್ಬರು ಕನಿಷ್ಠ ಒಂದು ವೇದವನ್ನಾದರೂ ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕಿದೆ ಎಂದರು. ನಾಲ್ಕು ವೇದಗಳ ಸಾರವೇ ವ್ಯಾಸ ಮುನಿಗಳಿಂದ ರಚಿತಗೊಂಡ 18 ಪುರಾಣಗಳಾಗಿವೆ.

ಪುರಾಣಗಳು ಭಾರತೀಯ ಸಂಸ್ಕೃತಿಯ ವಿಶ್ವಕೋಶವಾಗಿವೆ. ಅದೇ ರೀತಿ ಜಗತ್ತಿನಲ್ಲಿ ಅತಿ ದೊಡ್ಡ ಮಹಾಕಾವ್ಯವೆಂದರೆ ಮಹಾಭಾರತವಾಗಿದೆ. ಇದರಲ್ಲಿ 18 ಪರ್ವ, 1ಲಕ್ಷ ಶ್ಲೋಕಗಳಿವೆ. ಜತೆಗೆ ವ್ಯಾಸ ಮುನಿ ಮಹಾಭಾರತದಲ್ಲಿಯೇ ಪ್ರತ್ಯೇಕ ಅಧ್ಯಾಯ ಮಾಡಿ 18 ಅಧ್ಯಾಯಗಳ ಭಗವದ್ಗೀತೆಯನ್ನು ನೀಡಿದ್ದಾರೆ. 

Advertisement

ಭಾರತೀಯ ಸಂಸ್ಕೃತಿಯಲ್ಲಿ 18 ಸಂಖ್ಯೆಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು. ಪುರಾಣಗಳಲ್ಲಿ ಬರುವ ಶಿವ, ವಿಷ್ಣು ಇನ್ನಿತರ ದೇವಾನುದೇವತೆನಗಳ ಪ್ರಸ್ತಾಪಗಳಿವೆ. ಶಿವ ಅವತಾರ ಪುರುಷನಲ್ಲ ಸ್ವಯಂಭು. ಶಿವನ 25 ಲೀಲೆಗಳಿವೆ. ವಿಷ್ಣು ಅವತಾರ ಪುರುಷ ದಶಾವತಾರ ತಾಳಿದ್ದಾನೆ.

ಕಾಲ ಕಾಲಕ್ಕೆ ದೇವರು ಅವತರಿಸುವ ನಿಟ್ಟಿನಲ್ಲಿ ರಾಮ-ಕೃಷ್ಣರ ಸ್ವರೂಪಿಯಾಗಿ ಪಶ್ಚಿಮ ಬಂಗಾಲದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ಜಗನ್ಮಾತೆ ಅವತಾರದಲ್ಲಿ ಮಾತೆ ಶಾರದಾ ದೇವಿ ಅವತರಿಸಿದ್ದರು. ಅದೇ ರೀತಿ ಶಿವ ಸ್ವರೂಪಿಯಲ್ಲಿ ವಿವೇಕಾನಂದರು ಅವತರಿಸಿದ್ದರು. 

ಭಾರತೀಯ ಸಂಸ್ಕೃತಿ ಪುನರುತ್ಥಾನ ನಿಟ್ಟಿನಲ್ಲಿ ಅನೇಕ ಮಹಾತ್ಮರು ಅವತರಿಸಿದ್ದಾರೆ ಎಂದರು. ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ರಘುವೀರಾನಂದ ಮಹಾರಾಜ್‌ ಇನ್ನಿತರ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಇದಕ್ಕೂ ಮೊದಲು ರಾಮಕೃಷ್ಣ ಹೋಮ ಸಂಕೀರ್ತನೆ, ಭಜನೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next