ಧಾರವಾಡ: ಗುರು ಕರುಣಾಮಯ, ದಯಾಮಯ, ಸತ್‌ಕ್ರಿಯೆಯ ಆಗರ, ಸುಜ್ಞಾನ ಸಾಗರ, ಮತಿಗೆ ಮಂಗಲವನೀಯುವ ಮಹಾದೇವನ ಸ್ವರೂಪನಾಗಿರುವನು. ಭಕ್ತಿಯ ಸಾಧಕನ ಅಂತರಂಗದಲ್ಲಿರುವ ಅಜ್ಞಾನ-ಅಂಧಕಾರ ಕಳೆದು ಸುಜ್ಞಾನದ ಜ್ಯೋತಿ ಬೆಳಗಿಸುವವವನು.
ನರಜನ್ಮತೊಡೆದು ಹರಜನ್ಮವನ್ನಾಗಿ ಮಾಡಿ ಪರಮ ಸುಖ ತೋರಿ ಭವಮುಕ್ತಗೊಳಿಸುವನು. ಕಣ್ಣಿಗೆ ಕಾಣದಿರುವ ನಿರ್ಗುಣ, ನಿರಾಕಾರ, ನಿರೂಪಮ, ನಿರಂಜನ ಮೂರ್ತಿಯಾದ ಮಹಾದೇವನನ್ನು ಸಾಕಾರ ಸಗುಣ ರೂಪದಲ್ಲಿ ಕರಸ್ಥಲಕೆ ತಂದು ಕೊಟ್ಟು ಭಕ್ತರ ಅಥವಾ ಸಾಧಕ ಶಿಷ್ಯರ ಹೃದಯದ ತಾಪ ಕಳೆದು ಬದುಕಿನ ತುಂಬಾ ಪ್ರಶಾಂತಿ ಹರಡುವನು.
ಅದಕ್ಕಾಗಿ ಬಸವಣ್ಣನವರು “ಶಿವಪಥವನರಿವೊಡೆ ಗುರುಪಥವೇ ಮೊದಲು’ ಎಂದಿದ್ದಾರೆ. ಅಕ್ಕಮಹಾದೇವಿ “ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ ಶರಣು’ಎಂದಿದ್ದಾಳೆ. ಚನ್ನಬಸವಣ್ಣನವರು “ಗುರು ಕರುಣಿಸಲು ಬಿಟ್ಟಿತ್ತು ಮಾಯೆ, ಮರವೆ, ಪ್ರಪಂಚ, ಕರ್ಮಪಾಶ’ ಎಂದಿದ್ದಾರೆ.
ಗುರುವಾದವನು ಶಿಷ್ಯರ ಅಥವಾ ಭಕ್ತರ ಅಂಗದಾಶ್ರಯದಲ್ಲಿರುವ ಕಾಮ, ಕ್ರೋಧಾದಿಗಳನ್ನು, ಸಪ್ತವ್ಯಸನಗಳನ್ನು ಅಷ್ಟ ಮದಂಗಗಳನ್ನು, ತ್ತೈಮಲಗಳನ್ನು ಕಳೆದು ಲಿಂಗಾದಾಶ್ರದಲ್ಲಿರುವ ಭಕ್ತಿ, ಜ್ಞಾನ ವೈರಾಗ್ಯ, ಸದಾಚಾರ ಸತ್ಪಥದ ಸದ್ಗುಣಗಳನ್ನು ಬೆಳೆಸಿ ಪರಮ ಸುಖ ತೋರುವ ಕರುಣಾ ಸಾಗರನೇ ನಿಜವಾದ ಗುರುವಾಗಿರುವನು.
ಅಂತಹ ಗುರುವಿಗೆ ಶರಣಾಗತರಾಗಿ ಗುರುವಿಗೆ ಶರಣೆಂದು, ಗುರುವಿತ್ತ ಲಿಂಗಕ್ಕೆ ಶರಣೆಂದು ಜೀವಭಾವವಳಿದು ಶಿವಭಾವದಲ್ಲಿ ಬದುಕಿದಾಗ ನಮ್ಮ ಬದುಕು ಭವ್ಯವಾಗುವುದು. ಅಂತಹ ಸದ್ಗುರುವಿನ ಮಹತಿಯನ್ನು ಅಜಗಣ್ಣ ಶರಣರು ಸುಂದರವಾಗಿ ವಚನದಲ್ಲಿ ಚಿತ್ರಿಸಿದ್ದಾರೆ.
ಅಂಗದಾಶ್ರಯವ ಕಳೆದು ಲಿಂಗದಾಶ್ರಯ ಮಾಡಿದ
ಗುರುವೇ ಶರಣು ಶ್ರೀ ಗುರುಲಿಂಗವೇ ಶರಣು
ಪರಮ ಸುಖವ ತೋರಿದೆಯಾಗಿ
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೇ ಶರಣು | ಎಂದಿದ್ದಾರೆ.
-ಸಂಗಮೇಶ್ವರ ದೇವರು, ಅನುಭವ ಮಂಟಪ, ಬಸವಕಲ್ಯಾಣ, ಬೀದರ ಜಿಲ್ಲೆ