Advertisement

ಸರ್ಕಾರಿ ಶಾಲಾ ಶಿಕ್ಷಕರಿಗೆ “ಗುರು ಚೇತನ’

11:46 AM Aug 03, 2017 | |

ಬೆಂಗಳೂರು: ಸರ್ಕಾರಿ ಶಾಲೆಯ ಶಿಕ್ಷಕರ ಜ್ಞಾನ ಹಾಗೂ ಬೋಧನಾ ಕ್ರಮದ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿನೂತನ ಕಾರ್ಯತಂತ್ರ ರೂಪಿಸಿದೆ. ಸರ್ಕಾರಿ ಶಾಲಾ ಶಿಕ್ಷಕರ ಬಲವರ್ಧನೆಗೆ ಇಲಾಖೆಯಿಂದ ಆಗಾಗ ತರಬೇತಿಗಳನ್ನು ನೀಡಲಾಗುತ್ತದೆ.

Advertisement

ವಿಶೇಷ ಯೋಜನೆಗಳು ಬಂದಾಗ ಪ್ರತ್ಯೇಕ ತರಬೇತಿ ನೀಡುವ ವ್ಯವಸ್ಥೆಯೂ ಇದೆ. ಇಲಾಖೆಯಿಂದ ನೀಡುವ ಇಂಥ ತರಬೇತಿ ಬಹುತೇಕ ಶಿಕ್ಷಕರಿಗೆ ಇಷ್ಟವೇ ಇರುವುದಿಲ್ಲ. ಇಲಾಖೆಯ ಅಧಿಕಾರಿಗಳ ಒತ್ತಡಕ್ಕೆ ಅನಿವಾರ್ಯವಾಗಿ ತರಬೇತಿಗೆ ಹೋಗಲೇ ಬೇಕಾಗುತ್ತದೆ.

ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ ತುಂಬುವ ನೆಲೆಯಲ್ಲಿ ಅವರ ಜ್ಞಾನ ಮತ್ತು ಬೋಧನಾ ವಿಧಾನ ಇರಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲು “ಗುರು-ಚೇತನ’ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುತ್ತಿದೆ. ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಏನಿದು ಗುರು-ಚೇತನ?
ನಿತ್ಯವೂ ಹೊಸ ವಿಷಯ ಹಾಗೂ ವಿಚಾರಗಳೊಂದಿಗೆ ಪಾಠ ಕಲಿಸುವ ಗುರುಗಳು ಚೇತನ ಶೂನ್ಯರಾಗದೇ, ಚಲನಶೀಲತೆ ಹಾಗೂ ಚೈತನ್ಯ ತುಂಬುವವರಾಗಿರಬೇಕು. ಹಳೆಯ ಬೋಧನಾ ವಿಧಾನವನ್ನೇ ಅನುಸರಿಸದೇ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯನ್ನು  ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟು ಮಾಡುವ ನಿಟ್ಟಿನಲ್ಲಿ ಹೊಸ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕು. ಹಾಗೆಯೇ  ಜ್ಞಾನದ ವೃದ್ಧಿಗೂ ಸಹಕಾರಿಯಾಗಲು ಗುರು-ಚೇತನ ವೃತ್ತಿಪರ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ.

ಈ ಕಾರ್ಯಕ್ರಮದಡಿ ಶಿಕ್ಷಕರ ಅಭಿಪ್ರಾಯ ಹಾಗೂ ಆಸಕ್ತಿಗೆ ಅನುಸಾರವಾಗಿ ತರಬೇತಿ ನೀಡಲಾಗುತ್ತದೆ. ಕನ್ನಡ, ಇಂಗ್ಲಿಷ್‌, ಹಿಂದಿ, ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ತರಬೇತಿಯನ್ನು ಶಿಕ್ಷಕರ ಮೂಲಕವೇ ನೀಡಲಾಗುತ್ತದೆ. ಇಲ್ಲಿ ಶಿಕ್ಷಕರಿಗೆ ಮುಕ್ತ ಆಯ್ಕೆ ಇರುತ್ತದೆ. ಅವರ ಆಸಕ್ತಿಯ ವಿಷಯವನ್ನು ತೆಗೆದುಕೊಂಡು ತರಬೇತಿ ಪಡೆಯಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲೋತ್ಸವ
ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಅದರ ವೈವಿದ್ಯತೆಯ ಅರಿವು ಮೂಡಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ರಾಷ್ಟ್ರಮಟ್ಟದ ಸಂಗೀತ, ರಂಗಕಲೆ, ನೃತ್ಯ, ದೃಶ್ಯಕಲೆಗಳಲ್ಲಿ ಕಲಾ ಉತ್ಸವ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಂದಿಕೋಲು ಕುಣಿತ, ಪೂಜಾಕುಣಿತ, ಡೊಳ್ಳುಕುಣಿತ, ತೊಗಲುಗೊಂಬೆಯಾಟ, ಗಾಂಜೀಫಾ ಕಲೆ, ಯಕ್ಷಗಾನ, ಐತಿಹಾಸಿಕ ನಾಟಕ, ಭೂತಕುಣಿತ, ದೊಡ್ಡಾಟ, ಸಣ್ಣಾಟ, ವೀರಗಾಸೆ, ಬಯಲಾಟ ಮೊದಲಾದ ವಿಷಯ ವಸ್ತು ಆಧಾರಿತವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲೋತ್ಸವ ಏರ್ಪಡಿಸಿದೆ.

ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ತಂಡ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಕಲಾ ಉತ್ಸವ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ. ಶಾಲಾ ತಂಡದಲ್ಲಿ ವಿಶೇಷ ಚೇತನ ಮಕ್ಕಳಿಗೂ ಆದ್ಯತೆ ಇರುತ್ತದೆ. ಆ.15ರೊಳಗೆ ತಾಲೂಕು ಮಟ್ಟದ, ಆ.30ರೊಳಗೆ ಜಿಲ್ಲಾಮಟ್ಟದ ಹಾಗೂ ಅಕ್ಟೋಬರ್‌ 15ರೊಳಗೆ ರಾಜ್ಯಮಟ್ಟದ ಸ್ಪರ್ಧೆ ಪೂರ್ಣಗೊಳ್ಳಲಿದೆ. ರಾಜ್ಯಮಟ್ಟದಲ್ಲಿ ಆಯ್ಕೆಯಾದವರು ರಾಷ್ಟ್ರಮಟ್ಟಕ್ಕೆ ಹೋಗಲಿದ್ದಾರೆ.

ಶಿಕ್ಷಕರಿಗೆ ಅವಶ್ಯಕತೆ ಆಧಾರದಲ್ಲಿ(ನೀಡ್‌ ಬೇಸ್ಡ್ ) ತರಬೇತಿ ನೀಡುವ ಉದ್ದೇಶದಿಂದ ಮತ್ತು ಅವರ ಜ್ಞಾನ ಹಾಗೂ ಬೋಧನಾ ಕೌಶಲತೆ ಸುಧಾರಣೆಗೆ ಪೂರಕವಾಗುವ ನಿಟ್ಟಿನಲ್ಲಿ ಗುರು-ಚೇತನ ಕಾರ್ಯಕ್ರಮ ರೂಪಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲಾ ಶಿಕ್ಷಕರಿಗೆ ವಿಷಯವಾರು ವೃತ್ತಿಪರ ತರಬೇತಿ ನೀಡಲಿದ್ದೇವೆ.
-ಬಿ.ಕೆ.ಬಸವರಾಜು, ನಿರ್ದೇಶಕ ಪ್ರಾಥಮಿಕ ಶಿಕ್ಷಣ

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸೂಚನೆಯಂತೆ ಕಲೋತ್ಸವ ನಡೆಸುತ್ತಿದ್ದೇವೆ. ಪ್ರತಿಭಾಕಾರಂಜಿ ಕೇವಲ ರಾಜ್ಯ ಮಟ್ಟಕ್ಕೆ ಸೀಮಿತವಾಗಿದೆ. ಕಲೋತ್ಸವ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮವಾಗಿದೆ. ಈ ಸಂಬಂಧ ಎಲ್ಲಾ ಶಾಲಾ ಮುಖ್ಯಶಿಕ್ಷಕರಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳ ಏಳ್ಗೆಗೆಗೂ ಇದು ಪೂರಕವಾಗಲಿದೆ.
-ಫಿಲೋಮಿನಾ ಲೋಬೊ, ನಿರ್ದೇಶಕಿ ಪ್ರೌಢ ಶಿಕ್ಷಣ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next