ವೈಶಾಖಕ್ಕೆ ಮಳೆ ಸೋಂಕುವ ಹೊತ್ತು. ಮಧ್ಯಾಹ್ನವು ಸಂಜೆಯನ್ನಪ್ಪುವ ವೇಳೆಗೆ ಗುಡುಗು ಸಹಿತ ದಿಬ್ಬಣದಲ್ಲಿ ಮಳೆರಾಯ ಇನ್ನೇನು ಬರುವನು. ಬೇಸಗೆಯು ಭಾರವಾಗುವ ಹೊತ್ತಲ್ಲಿ ಮೇ ತಿಂಗಳ ಮೊದಲ ಸೊಗಸು ಮಳೆ, ಮತ್ತೂಂದು ನಾನೇ. ನಾನು ಮೇ ಹೂವ ಮರ.
ಗುಲ್ಮೊಹರೆಂಬ ಹಮ್ಮಿನ ದ್ರುಮ. ಕತ್ತಿಕಾಯಿ ಮರ, ಸೀಮೆ ಸಂಕೇಶ್ವರ, ಚನ್ನಕೇಶರಿ, ಕೆಂಪು ತುರಾಯಿ, ಕೃಷ್ಣಾಚೂಡ, ಗಂಟಿಗೆಹೂವು ಇನ್ನೂ ನೂರಾರು ಹೆಸರುಗಳು ನನಗೆ. ರತ್ನಗಂಧಿಯಂತೆ ಹೂಬಿಡುವುದಕ್ಕೋ, ಎಲೆಯಿರುವುದಕ್ಕೋ ನಾನು ಅವುಗಳ ಅಕ್ಕ- ದೊಡ್ಡರತ್ನಗಂಧಿ.
ನನ್ನ ಕಾಯಿಗಳು ಕತ್ತಿ-ಖಡ್ಗದಂತಿರುವುದಕ್ಕೆ ಜನರು ಕತ್ತಿಕಾಯಿ ಮರವೆಂದರು. ಅವರಿಗೆ ನನ್ನ ನಲುಮೆಯ ಹೂವಿಗಿಂತ ಕಾಯಿಯೇ ಹೆಚ್ಚೆನಿಸಿರಬಹುದು. ವಸಂತನ ಎಪ್ರಿಲ್ ಗಾಳಿ ತಾಕುವಲ್ಲಿ ನನಗೇ ಗೊತ್ತಾಗದಂತೆ ಅರಳಲಾರಂಭಿಸುತ್ತೇನೆ. ಮೇಯಲ್ಲಿ ಅರಳುವ ಕಾರಣಕ್ಕೆ ಮೇ ಫ್ಲವರ್ ಎಂಬ ನಾಮಕರಣವನ್ನೂ ಮಾಡಿಬಿಟ್ಟಿದ್ದಾರೆ. ಆದರೆ ನನಗಿಷ್ಟವಾದ ನನ್ನ ಹೆಸರು-ಹೂಗಳಲ್ಲೇ ನವಿಲಿನಂತಹ ನವಿರಿರುವ-ಗುಲ್ಮೊಹರ್.
ರಾಯಲ್ ಪೊಯೆನ್ಸಿಯಾನಾ ಎಂಬುದೂ ನನ್ನ ಹೆಸರುಗಳಲ್ಲೊಂದು. ಫ್ಲಾಮ್ ಬಯಂಟ್ ಮರ ಅರ್ಥಾತ್ ಅಬ್ಬರದ ಮರವೆನ್ನುವ ನಸು ಹೆಗ್ಗಳಿಕೆಯೂ ನನಗಿದೆ. ಎಷ್ಟಾದರೂ ಅವೆಲ್ಲವೂ ನನ್ನ ಹೂಗಳಿಗೇ ಸಲ್ಲಬೇಕು. ಹಸುರಿದ್ದಾಗ ಅವರೆಯಂತಹ ಮೆತ್ತನೆಯ ಕೋಡುಗಳು. ಒಣಗಿದಾಗ ಅದು ತಟ್ಟುವಷ್ಟು ಗಟ್ಟಿ, ಧೃಡ.
ಮಡಗಾಸ್ಕರ್ ಕಾನನದಲ್ಲಿ ಸ್ಥಿತಪ್ರಜ್ಞನಂತಿದ್ದ ನನ್ನನ್ನು ಊರಿಗೆಲ್ಲವೂ ತಿಳಿಸಿ ಪ್ರಪಂಚಪರ್ಯಟನೆ ಮಾಡುವಂತೆ ಖ್ಯಾತನನ್ನಾಗಿಸಿದ್ದು ಹತ್ತೂಂಬತ್ತನೆಯ ಶತಮಾನದ ಆದಿಯಲ್ಲಿ ಸಸ್ಯಶಾಸ್ತ್ರಜ್ಞ ವೆನ್ಸೆಲ್ ಬೋಜರ್. ಕಾಡಿನಲ್ಲಿ ವನಸುಮದಂತಿದ್ದೆ, ಖಂಡಾವರಣಗಳನ್ನು ದಾಟಿಸಿ ಹೆದ್ದಾರಿಯ ಇಕ್ಕೆಲಗಳಲ್ಲಿ, ಉದ್ಯಾನ, ಉಪವನಗಳಲ್ಲಿ ನೆಟ್ಟರು. ತದನಂತರ ಪ್ರಪಂಚದ ಅತ್ಯಂತ ವರ್ಣರಂಜಿತ ಮರವಾಗಿಬಿಟ್ಟೆ ನಾನು. ಗುಲ್ಮೊಹರ ಗಾರ್ಡನ್, ಗುಲ್ಮೊಹರ ಅವೆನ್ಯೂ, ಗುಲ್ಮೊಹರ ಮಾರ್ಗ, ಗುಲ್ಮೊಹರ ಲೇನ್, ಗುಲ್ಮೊಹರ ಕಾಲನಿಗಳು ದೇಶದಾದ್ಯಂತ ಇವೆ. ಹೇಳುವುದಕ್ಕೇನೂ ಬಿಗುಮಾನವಿಲ್ಲ ನನಗೆ. ಬೇಸಗೆಯ ಬಿಸಿಯನ್ನು, ಬಿಸಿಯ ಕೆನ್ನಾಲಗೆಗಳನ್ನು ನನ್ನ ಹೂದಳಗಳಿಗೆ ಹೋಲಿಸುತ್ತಾರೆ.
ಒಮ್ಮೆ ಅರಳಿದರೆ ಹಲವಾರು ವಾರಗಳವರೆಗೆ ಕಣ್ಣಿಗೆ ಜಾಜ್ವಲ್ಯಮಾನವಾದ ಜ್ವಾಲೆ ನೀಡುವ ಹೂಗಳು. ನನ್ನ ಹೂಗಳಿಗೆ ಐದು ದಳಗಳು. ಮೂರು ಇಂಚಿನಷ್ಟು ಉದ್ದದ ನಾಲ್ಕು ಚಮಚದ ಆಕಾರದ ಕಡುಗೆಂಪು ಅಥವಾ ಕಿತ್ತಳೆ-ಕೆಂಪು ದಳಗಳು ಮತ್ತು ಇನ್ನೊಂದು ಹಳದಿ-ಬಿಳಿ ಬಣ್ಣ ಮಿಶ್ರಿತ ನೇರವಾದ ಸ್ವಲ್ಪ ದೊಡ್ಡ ದಳ. ನನ್ನ ಮರವಿಡೀ ಇವೇ ಹೂವುಗಳು. ಕಿತ್ತಳೆಯ ಸಾಗರದಲ್ಲಿ ಬಿಳಿ-ಹಳದಿ ನಕ್ಷತ್ರಗಳಂತಿರುವ ಅಪ್ಯಾಯಮಾನ ಹೂಹಂದರ.
ನನ್ನ ಎಲೆಗಳ ರಚನೆಯೂ ಬಹಳ ಸುಂದರ. ಸಣ್ಣನೆಯ ಜರಿ ಗಿಡದಂತಹ ಎಲೆಗಳು, ಚಿಕ್ಕ ಚಿಕ್ಕ ಚಿಗುರೆಲೆಗಳು ಮುಂದೆ. ಮುಸ್ಸಂಜೆಯ ಪ್ರಾರಂಭದಲ್ಲಿ ಅವು ಮಡಚಿಕೊಳ್ಳುತ್ತವೆ. ಹೂವರಳುವ ಮೊದಲು ಹಸುರ ರೇಷ್ಮೆ ಗುಂಡುಗಳಂತಹ ಮೊಗ್ಗು ಅಂದವನ್ನು ಇಮ್ಮಡಿಗೊಳಿಸುತ್ತವೆ. ಇಂತಿಪ್ಪ ನನ್ನನ್ನು 2011ರಲ್ಲಿ IUCN ರೆಡ್ ಲಿಸ್ಟ್‌ನ ಅಪಾಯಕ್ಕೆ ಒಳಗಾದ ಪ್ರಭೇದದ ಪಟ್ಟಿಗೂ ಸೇರಿಸಿಬಿಟ್ಟಿದ್ದಾರೆ. ಸಂರಕ್ಷಣೆಗೆ ತುಸು ಆಲೋಚಿಸಿದ್ದಾರೆ ಎನ್ನುವ ನಿಟ್ಟುಸಿರು ನನಗೆ.
ಬೇಸಗೆಯ ಮಳೆಯೇ ವಿಚಿತ್ರ. ಬರಲಿ ಎಂದು ಅಲವತ್ತುಕೊಂಡರೆ ಬಾರದು. ಸುರಿದರೆ ಗುಡುಗು ಮಿಂಚಿನ ಪರಿವಾರ ಸಮೇತವಾಗಿಯೇ. ಬಿಸಿಯನ್ನು ಬಾಡಿಸುವ ವೈಶಾಖದ ಮಳೆ ಬರಲೆಂದು ಸಂಭ್ರಮದ ಸುಸ್ವಾಗತ ನೀಡುವೆ ನಾನು. ಮಳೆಯ ಹನಿಗಳು ಧೇನಿಸುವಾಗ ಚಪ್ಪರದಂತಹ ನನ್ನ ಎಲೆಗಳು ಹನಿಗಳಿಂದ ಸಿಂಗರಿಸಿಬಿಡುತ್ತವೆ. ಎಲೆಯ ಒಂದೊಂದು ದಳದಲ್ಲೂ ಮಳೆನೀರು ಜಿನುಗಲಾರಂಭಿಸುತ್ತದೆ.
ಗಿಳಿಹಸುರು ಎಲೆದಾನಿಗಳು ಆಗಾಗ ಗಾಳಿಗೆ ಸರಿದು ನೀರಿನ ಓಕುಳಿಯನ್ನೇ ಹರಿಸುತ್ತವೆ. ಮಳೆ ನಿಂತ ಮೇಲೂ ಎಲೆಗಳಿಂದ ನೀರು ಹನಿಗಳಾಗಿ ಸುರಿಯುತ್ತಿರುತ್ತದೆ. ನನ್ನ ಕೆಂಪು ಹೂವುಗಳಂತೂ ಮಳೆ ಹನಿಸಿದಾಗ ತೊಳೆದು ಮಿರಿಮಿರಿ ಮಿಂಚುತ್ತವೆ. ಮಳೆ ನಿಂತ ಮೇಲೂ ಚಿಣ್ಣರು, ಯುವಕರು ನನ್ನ ಟೊಂಗೆಗಳನ್ನಾಡಿಸಿ ಮತ್ತೆ ಮಳೆಸೇಚನದ ಅನುಭವವನ್ನು ಪಡೆಯುವುದುಂಟು.
ಅದ್ಯಾಕೋ ಕಾಣೆ, ಮಳೆಗೆ ನನ್ನ ಟೊಂಗೆಗಳು ಭಾರವಾಗುವುದು, ಬೇರು ಸಡಿಲವಾಗುವುದು. ಕೆಲವೊಮ್ಮೆ ಹೆದ್ದಾರಿಯ ಇಕ್ಕೆಲದಲ್ಲಿ ನಾನು ಬಾಗುವುದುಂಟು, ಬೇಸರದಿ ಬೀಳುವುದೂ ಇದೆ. ಈ ಕಾರಣಕ್ಕೇ ಏನೋ ಮಳೆಗಾಲಕ್ಕೆ ಮೊದಲೇ ನನ್ನ ಕೈಕಾಲುಗಳನ್ನು ಕಡಿಯುವ ಕೆಲಸ ಭರದಿಂದಲೇ ಸಾಗುತ್ತದೆ. ಬೇಸಗೆಯ ಸಂತಸ ವರ್ಷೆಯವರೆಗೆ ನನಗೆ ನಿಲ್ಲದು. ಹೂ ಉದುರಿದರೇನು? ನಾನು ಚಿಗುರುವೆ ಮತ್ತೆ, ಹೊಸ ಆಸೆಗಳನ್ನು ಅಂಕುರಿಸಿಕೊಂಡು, ಬರುವ ವರ್ಷದಲ್ಲಿ ಮತ್ತೆ ರಕ್ತಾಕ್ಷಿಯಾಗಿ ಅರಳಲು.
–
ವಿಶ್ವನಾಥ ಭಟ್
ಧಾರವಾಡ