Advertisement

Guledagudda: ಸಂಚಾರ ದುಸ್ತರ- ರಸ್ತೆ ದುರಸ್ತಿ ಯಾವಾಗ?

05:30 PM Nov 29, 2023 | Team Udayavani |

ಗುಳೇದಗುಡ್ಡ: ಪಟ್ಟಣದಿಂದ ಕಮತಗಿಯವರೆಗೆ ಸಂಚರಿಸುವ ರಸ್ತೆ ಮಾರ್ಗ ಮಧ್ಯೆ ಇರುವ ಅಲ್ಲೂರ ಕ್ರಾಸ್‌ದಿಂದ ತಾಲೂಕು ಗಡಿಭಾಗ ಇಂಜಿನವಾರಿ ಗ್ರಾಮದವರೆಗೆ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ದುಸ್ತರವಾಗಿದೆ.

Advertisement

ಇಂಜಿನವಾರಿ ಹಳದೂರ ಮಾರ್ಗದ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರಕಾರ 7 ಕೋಟಿ ಅನುದಾನ ಮಂಜೂರಿ, ಮಾಡಿ, ಟೆಂಡರ್‌
ಕರೆದು, ಗುತ್ತಿಗೆದಾರನಿಗೆ ಟೆಂಡರ್‌ ಸಹ ನೀಡಲಾಗಿದೆ. ಆದರೆ, ರಸ್ತೆ ಕಾಮಗಾರಿ  ಮಾಡಿಲ್ಲ. ಗುತ್ತಿಗೆದಾರ ಟೆಂಡರ್‌ ಪಡೆದು
ಅಲ್ಲೂರ ಕ್ರಾಸ್‌ದಿಂದ 100-200ಮೀಟರ್‌ ರಸ್ತೆ ಸಮತಟ್ಟು ಮಾಡಿ 15 ದಿನ ಕೆಲಸ ಮಾಡಿ, ನಂತರ ಸುಮ್ಮನಾಗಿಬಿಟ್ಟಿದ್ದಾರೆ.

4-5 ತಿಂಗಳ ಹಿಂದೆ ಟೆಂಡರ್‌: ಅಲ್ಲೂರ ಕ್ರಾಸ್‌ದಿಂದ ಇಂಜಿನವಾರಿ ಗ್ರಾಮದ ವರೆಗೆ ರಸ್ತೆ ನಿರ್ಮಾಣಕ್ಕೆ ಕಂಕಾಳೆ ಎನ್ನುವವರಿಗೆ ಕಳೆದ 4-5 ತಿಂಗಳುಗಳ ಹಿಂದೆಯೆ ಟೆಂಡರ್‌ ನೀಡಲಾಗಿದೆ. ಆದರೆ ,ಇದುವರೆಗೂ ಕೆಲಸ ಮಾಡಲು ಮುಂದಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಗುತ್ತಿಗೆದಾರರಿಗೆ ಮೂರು ನೋಟಿಸ್‌ ನೀಡಿದ್ದೇವೆ. ಅವರಿಗೆ ಹಳೆಯ ಬಿಲ್‌ ಬರುವುದು, ಅಲ್ಲದೇ ಕೆಲವು ಸಮಸ್ಯೆ ಉಂಟಾಗಿದ್ದರಿಂದ ಕೆಲಸ ವಿಳಂಬ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಗುತ್ತಿಗೆದಾರರಿಂದ ಕೆಲಸ ಮಾಡಿಸಲು ಮುಂದಾಗಿಲ್ಲ.

ಶಾಲಾ ಮಕ್ಕಳಿಗೂ ಕಷ್ಟ: ಈ ರಸ್ತೆ ನಿರ್ಮಾಣವಾಗದಿರುವುದರಿಂದ ಶಾಲಾ ಮಕ್ಕಳಿಗೂ ಸಹ ತೊಂದರೆಯಾಗಿದ್ದು, ಬಸ್‌ ಗಳು ಸಹ ಸರಿಯಾಗಿ ನಿಲ್ಲುತ್ತಿಲ್ಲ. ಅಲ್ಲದೇ ತೆಗ್ಗುಗಳಿರುವುದರಿಂದ ಸಾಕಷ್ಟು ಧೂಳು  ಬರುತ್ತಿದ್ದು, ಧೂಳಿನಿಂದಲೂ ಸಹ ಜನರು
ಹೈರಾಣಾಗುತ್ತಿದ್ದಾರೆ.

ಇಂಜಿನವಾರಿ ಹಳದೂರ ಮಾರ್ಗವೆಂದರೆ ಸಾಕು ಆ ಕಡೆ ಹೋಗುವುದಿರಲಿ ಮುಖ ಮಾಡಲು ಸಹ ಜನರು ಹಿಂಜರಿಯುತ್ತಿದ್ದಾರೆ.
ಅಷ್ಟರ ಮಟ್ಟಿಗೆ ಇಲ್ಲಿಯ ರಸ್ತೆ ಹಾಳಾಗಿ ಹೋಗಿದೆ. ಇನ್ನೂ ಮಾರ್ಗದ ಇಂಜಿನವಾರಿ, ಹಳದೂರ ಗ್ರಾಮಗಳ ಗ್ರಾಮಸ್ಥರಿಗಂತು ಸಾಕಾಗಿ ಹೋಗಿದೆ. ಸಾಕಷ್ಟು ಪ್ರಮಾಣದಲ್ಲಿ ತೆಗ್ಗು ದಿನ್ನೆಗಳು ಉಂಟಾಗಿದ್ದು, ಇದರಿಂದ ವಾಹನ ಸವಾರರು ಸಾಕಷ್ಟು ಪರದಾಡುವಂತಾಗಿದೆ. ಕಳೆದ ಆರು ತಿಂಗಳುಗಳ ಹಿಂದೆ ಗ್ರಾಮಸ್ಥರು ಪ್ರತಿಭಟನೆ ಮಾಡಿ, ತಹಶೀಲ್ದಾರ್‌ ಅವರಿಗೆ ಮನವಿ ಮಾಡಿ, ರಸ್ತೆ ಮಾಡದಿದ್ದರೇ ರಸ್ತೆ ಬಂದ್‌ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

ರಸ್ತೆ ನಿರ್ಮಾಣ ಮಾಡಿ ಎಂದು ಹೇಳುತ್ತ ಬಂದಿದ್ದೇವೆ. ಬರೀ ಟೆಂಡರ್‌ ಆಗಿದೆ ಎಂದು ಅಧಿ ಕಾರಿಗಳು ಹೇಳುತ್ತಿದ್ದಾರೆ ಹೊರತು ರಸ್ತೆ ಮಾಡಲು ಮುಂದಾಗುತ್ತಿಲ್ಲ. ಇಂಜಿನವಾರಿ, ಹಳದೂರ ಗ್ರಾಮಸ್ಥರಿಗಂತೂ ಸಾಕಾಗಿ ಹೋಗಿದೆ. ಶಾಲಾ ಮಕ್ಕಳಿಗೂ ಸಹ ಸಮಸ್ಯೆಯಾಗಿದೆ. ಸಾಕಷ್ಟು ಧೂಳು ಬರುತ್ತಿದೆ. ಇಲ್ಲಿ ಸಂಚಾರ ಮಾಡುವುದೆಂದರೆ ಜೀವ ಕೈ ಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಕೂಡಲೇ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೇ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ.
ತಿಪ್ಪಣ್ಣ ಗೌಡರ, ಪಿಕೆಪಿಎಸ್‌ ಅಧ್ಯಕ್ಷರು,
ಇಂಜಿನವಾರಿ ಹಳದೂರ

ಕಳೆದ 4 ತಿಂಗಳ ಹಿಂದೆಯೆ ಕಂಕಾಳೆ ಎನ್ನುವವರಿಗೆ ಟೆಂಡರ್‌ ನೀಡಲಾಗಿದೆ.ಕೆಲಸ ಮಾಡಿಕೊಡಲು ನೋಟಿಸ್‌ ಕೊಟ್ಟಿದ್ದೇವೆ. ವೈಯಕ್ತಿಕ ಸಮಸ್ಯೆಗಳಿಂದ ವಿಳಂಬವಾಗಿದೆ ಎಂದು ಹೇಳುತ್ತಿದ್ದು, ಶೀಘ್ರ ಕೆಲಸ ಆರಂಭಿಸಲು ಕ್ರಮವಹಿಸಲಾಗುವುದು.
ಮೇಟಿ, ಎಇಇ, ಲೋಕೊಪಯೋಗಿ ಇಲಾಖೆ, ಬಾದಾಮಿ.

*ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next