ಜನರು ಉದ್ಯೋಗವನ್ನು ಅರಸಿಕೊಂಡು, ಬದುಕನ್ನ ಅರಸಿಕೊಂಡು ಒಂದು ಕಡೆಯಿಂದ ಮತ್ತೂಂದು ಕಡೆ “ಗುಳೆ’ ಹೋಗುವುದನ್ನು ನೀವು ನೋಡಿರಬಹುದು. ಅನಾದಿ ಕಾಲದಿಂದಲೂ ಹತ್ತಾರು ಕಾರಣಗಳನ್ನು ಇಟ್ಟುಕೊಂಡು ಜನರು “ಗುಳೆ’ ಹೋಗುವುದು ನಡೆದುಕೊಂಡೇ ಬರುತ್ತಿದೆ. ಈಗ ಇದೇ “ಗುಳೆ’ ಎನ್ನುವ ಹೆಸರಿನಲ್ಲೇ ಕಿರುಚಿತ್ರವೊಂದು ನಿರ್ಮಾಣವಾಗಿದೆ. ಸುಮಾರು 20 ನಿಮಿಷದ ಅವಧಿಯ ಈ ಕಿರುಚಿತ್ರದಲ್ಲಿ ಉತ್ತರ ಕರ್ನಾಟಕದ ಬಡ ಜನರ ಜೀವನವನ್ನು ತೆರೆಮೇಲೆ ತರುವ ಪ್ರಯತ್ನ ಮಾಡಲಾಗಿದೆ.
ಉತ್ತರ ಕರ್ನಾಟಕದ ಭಾಗದವರೇ ಆಗಿರುವ ಶ್ರೀನಾಥ್ ಎಸ್. ಹಡಗಲಿ ತನ್ನ ಜೀವನದಲ್ಲಿ ನಡೆದ ಮತ್ತು ತಾನು ಕಣ್ಣಾರೆ ಕಂಡ ಕೆಲ ಘಟನೆಗಳಿಗೆ ಚಿತ್ರರೂಪ ನೀಡಿ ಈ ಕಿರುಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ತಮ್ಮ ಕಿರುಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಶ್ರೀನಾಥ್ ಎಸ್. ಹಡಗಲಿ,”ಕುಡುಕ ಗಂಡ, ಕಟ್ಟಡದಲ್ಲಿ ಕೆಲಸ ಮಾಡುವ ಹೆಂಡತಿ. ಇವರಿಬ್ಬರಿಗೊಬ್ಬ ಮಗ. ಅವನಿಗೆ ಶಾಲೆಗೆ ಹೋಗುವ ಬಯಕೆ. ಇದಕ್ಕೆ ಅಪ್ಪನಿಂದ ವಿರೋಧ.
ಸರ್ಕಾರದ ಆದೇಶದಂತೆ ಶಿಕ್ಷಕಿ ಮಗುವನ್ನು ಶಾಲೆಗೆ ಕಳುಹಿಸಲು ಕೋರಿದಾಗ ಅವನಿಂದ ಸ್ಪಂದನೆ ಸಿಗುವುದಿಲ್ಲ. ಅವಳಿಗೆ ಮಗು ವಿದ್ಯೆ ಕಲಿಯಬೇಕು ಎನ್ನುವ ಆಸೆ. ಕೊನೆಗೆ ಆ ಹುಡುಗನಿಗೆ ಶಿಕ್ಷಣ ಸಿಗುತ್ತದೆಯಾ, ಎನ್ನುವುದೇ ಈ ಕಿರುಚಿತ್ರ’ ಎಂದು ಕಥೆಯ ಎಳೆಯನ್ನು ತೆರೆದಿಟ್ಟರು. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ, ಯೋಗರಾಜ್ ಭಟ್, ನಟ ಸಂಚಾರಿ ವಿಜಯ್ ಮೊದಲಾದವರು ಹಾಜರಿದ್ದು “ಗುಳೆ’ ಕಿರುಚಿತ್ರವನ್ನು ಅನಾವರಣಗೊಳಿಸಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಪಿ. ಶೇಷಾದ್ರಿ, “ನಮ್ಮ ಬದುಕಿನಲ್ಲಿ ಗುಳೆ ಯಾವಾಗಲೂ ನಡೆಯುತ್ತದೆ ಎನ್ನಬಹುದು. ಚಿತ್ರದ ಯಶಸ್ಸಿಗೆ ಇಲ್ಲಿಯವರೆವಿಗೂ ಯಾರೂ ಸೂತ್ರ ಕಂಡುಹಿಡಿದಿಲ್ಲ. ಭಾಷೆ, ಪ್ರಾದೇಶಿಕ, ನೈಜ ಸ್ಥಳ ಜೊತೆಗೆ ಶಿಕ್ಷಣದ ಬಗ್ಗೆ ಸಂದೇಶ ಮೂಡಿಸಿರುವುದು ಶ್ಲಾಘನೀಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕ ಯೋಗರಾಜ್ ಭಟ್, ನಟ ಸಂಚಾರಿ ವಿಜಯ್ “ಗುಳೆ’ ಕಿರುಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಇನ್ನು “ಗುಳೆ’ ಕಿರುಚಿತ್ರದಲ್ಲಿ ಮಾಸ್ಟರ್ ಮುತ್ತು ಶಾಲಾ ಬಾಲಕನಾಗಿ ಕಾಣಿಸಿಕೊಂಡರೆ, ಪುಟ್ಟಣ್ಣ ವಿಜಯಪುರ್ ಮತ್ತು ಶೃತಿ ಶಿವಶಂಕರ್ ಬಾಲಕನ ಪೋಷಕರಾಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಶಾಲಾ ಶಿಕ್ಷಕಿಯಾಗಿ ಅಭಿನಯಿಸಿದ್ದಾರೆ. ಸಂಗೀತ ರಾಜೀವ್ “ಗುಳೆ’ ಕಿರುಚಿತ್ರದ ಹಾಡಿಗೆ ಧ್ವನಿಯಾಗಿ, ರಾಗ ಸಂಯೋಜಸಿದ್ದಾರೆ. ಪ್ರಶಾಂತ್ ಗೌಡ ಛಾಯಾಗ್ರಹಣ, ಗೌತಮ್ ಎ. ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. “ಅಯ್ಯರ್ ಟಾಕೀಸ್’ ಬ್ಯಾನರ್‌ನಲ್ಲಿ ಮನೋಹರ್ ಅಯ್ಯರ್ “ಗುಳೆ’ ಕಿರುಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.