Advertisement

ಗುಜ್ಜಾಡಿ: ಗ್ರಾಮೀಣ ರಸ್ತೆ, ಕಸ ವಿಲೇವಾರಿ, ಚರಂಡಿ ಸಮಸ್ಯೆ

05:48 PM Jun 30, 2022 | Team Udayavani |

ಗುಜ್ಜಾಡಿ: ಯಾವುದೇ ದೊಡ್ಡ ಮಟ್ಟದ ಕೈಗಾರಿಕೆಗಳಿಲ್ಲದ, ಹೆಚ್ಚಿನ ವಾಣಿಜ್ಯ ಮಳಿಗೆಗಳಿಲ್ಲದ, ಕಡಿಮೆ ಆದಾಯವಿರುವ ಗ್ರಾಮವಿದು ಗುಜ್ಜಾಡಿ. ಇಲ್ಲಿ ಹತ್ತಾರು ಸಮಸ್ಯೆಗಳಿವೆ. ಬೇಸಗೆಯಲ್ಲಿ ನೀರಿನ ಸಮಸ್ಯೆಯೇ ದೊಡ್ಡ ತಲೆನೋವು. ಮಳೆಗಾಲದಲ್ಲಿ ಡಾಮರೀಕರಣವಾಗದ ಕೆಸರುಮಯ ರಸ್ತೆಗಳು ಜನರನ್ನು ಹೈರಾಣಾಗಿಸಿವೆ.

Advertisement

ಗ್ರಾಮದ ಒಂದಷ್ಟು ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದು, ಇದರೊಂದಿಗೆ ಜಟ್ಟಿಗೇಶ್ವರ ದೇವಸ್ಥಾನ, ಚಿಕ್ಕಮ್ಮ ದೇವಸ್ಥಾನಕ್ಕೆ ಹೋಗುವ, ಕೊಡಂಚ ರಸ್ತೆ, ಬೆಣೆYರೆಯ ಗರಡಿ ರಸ್ತೆಯ ಅಭಿವೃದ್ಧಿಗೆ ಜನ ಅನೇಕ ಸಮಯದಿಂದ ಆಗ್ರಹಿಸುತ್ತಿದ್ದಾರೆ. ಮೇಲಂಡಿಗೆ ಹೋಗುವ ರಸ್ತೆ ದ್ವಿಚಕ್ರ ವಾಹನ ಸವಾರ ಸಂಚರಿಸದ ಸಮಸ್ಯೆಯಿದೆ.

ಬೇಸಗೆಯಲ್ಲಿ ನೀರಿನ ಸಮಸ್ಯೆ ಸುತ್ತಲೂ ನೀರಿದ್ದರೂ, 3 ಓವರ್‌ ಹೆಡ್‌ ಟ್ಯಾಂಕ್‌ ಇದ್ದರೂ, ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಬೇಸಗೆಯಲ್ಲಿ ಈ ಗ್ರಾಮದ ಎಲ್ಲ 5 ವಾರ್ಡ್‌ಗಳಲ್ಲಿಯೂ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಗ್ರಾಮದ ಶೇ. 90 ರಷ್ಟು ಮನೆಗಳಿಗೆ ನೀರಿನ ಸಮಸ್ಯೆ ಇದೆ. ಬಾವಿ, ಬೋರ್‌ ವೆಲ್‌ ತೋಡಿದರೂ, ಬಹುಬೇಗ ಬತ್ತಿ ಹೋಗುತ್ತದೆ. ಹೊಸ ಟ್ಯಾಂಕ್‌ಗೆ ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಪಂಚಾಯತ್‌ ಹರಸಾಹಸ ಪಡುತ್ತಲೇ ಇದೆ.

ಕಸ ವಿಲೇ ಸಮರ್ಪಕವಿಲ್ಲ ಮತ್ತೂಂದು ಸಮಸ್ಯೆಯೆಂದರೆ ಸಮರ್ಪಕ ಕಸ ವಿಲೇ ವಾರಿ. ಗುಜ್ಜಾಡಿ ಪಂಚಾಯತ್‌ ಈಗಾಗಲೇ ಹೊಸಾಡು ಗ್ರಾ.ಪಂ.ನೊಂದಿಗೆ ಸೇರಿ ಕಸ ವಿಲೇವಾರಿ ಘಟಕ ನಿರ್ಮಿಸಿದೆ. ಆದರೆ ಗ್ರಾಮದ ಮನೆಗಳು, ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹ ಕಾರ್ಯವಿನ್ನೂ ಆರಂಭವಾಗಿಲ್ಲ. ಈ ಬಗ್ಗೆ ಕೇಳಿದರೆ ವಾಹನ ಬಂದಿದೆ. ಶೀಘ್ರ ಶುರುವಾಗುತ್ತದೆ ಅನ್ನುತ್ತಾರೆ. ಇನ್ನು ಈ ಗ್ರಾಮದವರು ಮಾತ್ರವಲ್ಲದೆ ಗಂಗೊಳ್ಳಿ, ಹೆದ್ದಾರಿ ಕಡೆಯಿಂದ ವಾಹನದಲ್ಲಿ ಬರುವವರು ಮುಳ್ಳಿಕಟ್ಟೆ- ಗುಜ್ಜಾಡಿ ಮಾರ್ಗದ ಬದಿಯಲ್ಲಿ ಕಸ ಎಸೆಯುತ್ತಾರೆ.

ಹೀಗಾಗಿ ಆ ಪ್ರದೇಶವಿಡೀ ಡಂಪಿಂಗ್‌ ಯಾರ್ಡ್‌ ಎನಿಸಿದೆ. ಇದಕ್ಕೆ ಗುಜ್ಜಾಡಿ ಹಾಗೂ ಹೊಸಾಡು ಗ್ರಾ.ಪಂ.ಗಳು ಕಡಿವಾಣ ಹಾಕಬೇಕಿದೆ. ಮೀನಿನ ವಾಹನಗಳು ಬಂದು ಇಲ್ಲಿ ಕೊಳಚೆ ನೀರನ್ನು ಚೆಲ್ಲಿ ಹೋಗುತ್ತಿದ್ದು, ಇತಿಹಾಸ ಪ್ರಸಿದ್ಧ ಗುಹೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರನ್ನು ಈ ದುರ್ನಾತವೇ ಸ್ವಾಗತಿಸುವಂತಿದೆ. ಇದಕ್ಕೂ ಪರಿಹಾರ ಹುಡುಕಬೇಕಿದೆ.

Advertisement

ಸಮುದಾಯ ಭವನವಿಲ್ಲ ಅತೀ ಹೆಚ್ಚು 150ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರಿಗೆ ಸೇರಿದ ಮನೆಗಳಿರುವ ಗ್ರಾಮ ಗುಜ್ಜಾಡಿ. ಆದರೆ ಒಂದೇ ಒಂದು ಸಮುದಾಯ ಭವನವಿಲ್ಲ. ಯುವಕ ಮಂಡಲದ ಜಾಗದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿ ಕೊಡಿ ಎಂದು ದಲಿತ ಮುಖಂಡರು ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ.

ಜಲಜೀವನ್‌ ಯೋಜನೆಯಿಂದ ಪರಿಹಾರ: ನಾವೆಷ್ಟೇ ಬಾವಿ ತೋಡಿದರೂ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಜಲಜೀವನ್‌ ಯೋಜನೆಯಿಂದ ಬಗೆಹರಿಯಬಹುದು. ಕಸ ಸಂಗ್ರಹ ಕಾರ್ಯ ಶೀಘ್ರ ಆರಂಭವಾಗಲಿದೆ. ಈಗಾಗಲೇ ಶಾಸಕರ ಮುತುವರ್ಜಿಯಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿಯಾಗಿದೆ. ಇನ್ನಷ್ಟು ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದೇವೆ. –ರಾಜು ಎನ್‌. ಪೂಜಾರಿ, ಗ್ರಾ.ಪಂ. ಉಪಾಧ್ಯಕ್ಷರು

ಕೃಷಿಗೆ ಕಸವೇ ಕಂಟಕ ತ್ರಾಸಿ- ಕೊಡಪಾಡಿ- ನಾಯಕವಾಡಿ ಮಾರ್ಗ ಅಗಲಗೊಂಡಾಗ ಕೊಡಪಾಡಿ ಭಾಗದಲ್ಲಿ ಚರಂಡಿಯನ್ನು ಮುಚ್ಚಲಾಗಿತ್ತು. ಆದರೆ ಈಗ ಮೇಲಿನಿಂದ ಮಳೆ ನೀರು, ಕಸ ಕಡ್ಡಿಗಳೆಲ್ಲ ಬಂದು ಕೊಡಪಾಡಿ ಪರಿಸರದ ಗದ್ದೆಗಳಿಗೆ ರಾಶಿ-ರಾಶಿಯಾಗಿ ಬೀಳುತ್ತಿದೆ. ಪ್ರತೀ ಸಲ ಗದ್ದೆಯಿಂದ ಕಸ ತೆಗೆಯುವುದೇ ಕೃಷಿಕರಿಗೆ ಸಮಸ್ಯೆ. ಇಲ್ಲಿನ ತೋಡಿನವರೆಗೆ ಚರಂಡಿ ನಿರ್ಮಿಸಿಕೊಟ್ಟರೆ ಅನುಕೂಲವಾಗಲಿದೆ ಎನ್ನುವುದು ರೈತರ ಬೇಡಿಕೆ.

ಅಣೆಕಟ್ಟು ನಿರ್ಮಾಣವಾದರೆ ಒಳಿತು: ಮೂರು ಓವರ್‌ ಹೆಡ್‌ ಟ್ಯಾಂಕ್‌ಗಳಿದ್ದರೂ ನೀರಿನ ಸಮಸ್ಯೆ ಪ್ರತೀ ವರ್ಷವೂ ಇದ್ದದ್ದೇ. ರುದ್ರಭೂಮಿಗೆ ಜಾಗವಿದ್ದರೂ, ಅಭಿವೃದ್ಧಿಯಾಗಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿ ಆಗಬೇಕಿದೆ. ಕೊಡಪಾಡಿಯಲ್ಲಿ ಚರಂಡಿ ನೀರು, ಕಸ ಗದ್ದೆಗಳಿಗೆ ಬಂದು ಬೀಳುತ್ತಿದ್ದು, ತೋಡಿನವರೆಗೆ ಚರಂಡಿ ವಿಸ್ತರಿಸಬೇಕಿದೆ.- ನಾರಾಯಣ ಕೆ. ಗುಜ್ಜಾಡಿ, ತಾ.ಪಂ. ಮಾಜಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next