Advertisement

ಗುಜರಾತ್‌ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ: ವೈಜನಾಥ

10:28 AM Dec 19, 2017 | Team Udayavani |

ಚಿಂಚೋಳಿ: ಗುಜರಾತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿ ಸಿದರು ಸಹ ಆ ಫಲಿತಾಂಶದಿಂದಾಗಿ ನಮ್ಮ ರಾಜ್ಯದಲ್ಲಿ ಮುಂದೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಸಚಿವ ವೈಜನಾಥ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾ ಧಿಸುವ ಬಗ್ಗೆ ಎಲ್ಲ ನಿರೀಕ್ಷೆಯಿತ್ತು. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ನಿರಂತರ ಚುನಾವಣಾ ಪ್ರಚಾರ ನಡೆಸಿದ್ದರಿಂದ ಹೆಚ್ಚಿನ ಸ್ಥಾನಗಳಿಸುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ವಿಶ್ವಾಸ ಮೂಡಿದೆ.

ಗುಜರಾತ ರಾಜ್ಯದ ಸಮಸ್ಯೆಗಳೇ ಬೇರೆ. ನಮ್ಮ ರಾಜ್ಯದ ಸಮಸ್ಯೆಗಳೇ ಬೇರೆ ಬೇರೆ ಆಗಿವೆ. ಹಾಗಾಗಿ ನಮ್ಮ ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. 

ಗುಜರಾತ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ವಲ್ಪಮಟ್ಟಿಗೆ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದರಿಂದ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಅವರ ಪ್ರಭಾವ ಜನರ ಮೇಲೆ ಹೆಚ್ಚಾಗಲಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚು ಸ್ಥಾನ ಗಳಿಸಬಹುದು ಎಂದು ವಿಶ್ವಾಸವ್ಯಕ್ತಪಡಿಸಿದರು.

ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಆಗಿದ್ದರು ಸಹ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಬಿಜೆಪಿಯನ್ನು ತಡೆಯಿತು. ಚುನಾವಣೆ ಹತ್ತಿರ ಬಂದಾಗ ಎಲ್ಲ ಪಕ್ಷದವರು ಯಾತ್ರೆ ನಡೆಸುವುದು ಸಹಜ. ಆದರೆ ಯಾತ್ರೆಯಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ.

Advertisement

ಗ್ರಾಪಂಗಳಲ್ಲಿ ಡಾಟಾ ಎಂಟ್ರಿ ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದೆ. ಇದರಲ್ಲಿ ನಮ್ಮ ಹಿಂದುಳಿದ ಭಾಗದ ಜನರಿಗೆ ಮೀಸಲಾತಿ ಸಿಗುತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಹ ನೀಡಲಾಗಿದೆ. ಸರಿಪಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. 371ನೇ (ಜೆ) ಕಲಂ ಅನ್ವಯದಂತೆ ಮೀಸಲಾತಿ ನೀಡದಿದ್ದರೆ ಮುಂದೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಕಲಬುರಗಿ ಈಶಾನ್ಯ ವಲಯ ಪದವಿ ಮತಕ್ಷೇತ್ರಕ್ಕಾಗಿ ಡಾ| ವಿಕ್ರಮ ಪಾಟೀಲ ಅವರಿಗೆ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಹಸಿರು ನಿಶಾನೆ ತೋರಿದೆ. ಅವರು ಕಲಬುರಗಿ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಡಾ| ಉಮೇಶ ಜಾಧವ ಮಾತನಾಡಿ, ಈಶಾನ್ಯ ಪದವಿಧರ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವಂತೆ ಡಾ| ವಿಕ್ರಮ ಪಾಟೀಲ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದಾರೆ. ಹಾಗಾಇ ಟಿಕೆಟ್‌ ಸಂಬಂಧ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು. ಜಿಪಂ ಸದಸ್ಯ ಗೌತಮ ಪಾಟೀಲ, ಕೆ.ಎಂ. ಬಾರಿ, ಮಧುಸೂಧನರೆಡ್ಡಿ ಪಾಟೀಲ, ಸತೀಶ ಇಟಗಿ, ಇಬ್ರಾಹಿ ದೇಗಲಮಡಿ, ಜಗನ್ನಾಥ ತುಮಕುಂಟಾ ಸುದ್ದಿಗೋಷ್ಠಿಯಲ್ಲಿದ್ದರು.  

ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ನಾಲ್ಕೂವರೆ ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಭ್ರಷ್ಟಾಚಾರರಹಿತ, ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಜನಪರ ಯೋಜನೆ ಜಾರಿಗೊಳಿಸುವ ಮೂಲಕ ಅವರು ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next