ಗಾಂಧಿನಗರ : ಏಕ ದೇಶ ಏಕ ತೆರಿಗೆ ಉದ್ದೇಶದ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ – ಜಿಎಸ್‌ಟಿ – ಯನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ಸಮಾನ ಪಾಲುದಾರ ಪಕ್ಷವಾಗಿದೆ; ಆದರೂ ಕಾಂಗ್ರೆಸ್ ನಾಯಕರು ಇಂದು ಜಿಎಸ್‌ಟಿ ವಿರುದ್ಧ ಸುಳ್ಳುಗಳನ್ನು ಹರಡುತ್ತಿದ್ದಾರೆ; ಅಪಪ್ರಚಾರ ಮಾಡುತ್ತಿದ್ದಾರೆ. ಬಹಳ ಹಿಂದಿನಿಂದಲೂ ಗುಜರಾತ್ ಯಾವತ್ತೂ ಗಾಂಧಿ ಕುಟುಂಬದ ಕಣ್ಣಿನ ಮುಳ್ಳಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ಗೌರವ್ ಮಹಾಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಕೋಮುವಾದ, ಜಾತಿವಾದಗಳು ಹಾಗೂ ಜನರನ್ನು ದಾರಿ ತಪ್ಪಿಸುವ ತಂತ್ರಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್‌ನ ಕುಟಿಲೋಪಾಯಗಳಾಗಿವೆ; ಜನರು ಈ ಬಗ್ಗೆ ಎಚ್ಚರದಿಂದರಬೇಕು ಎಂದು ಹೇಳಿದರು.
ದೇಶದ ಉಕ್ಕಿನ ಮನುಷ್ಯ ಎಂದೇ ಖ್ಯಾತಿವೆತ್ತಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಪುತ್ರಿಗೆ ಕಾಂಗ್ರೆಸ್ ಏನು ಮಾಡಿತು ಎಂಬುದು ಇತಿಹಾಸಕ್ಕೆ ಗೊತ್ತಿದೆ. ಮೊರಾರ್ಜಿ ದೇಸಾಯಿ ಅವರು ದೇಶದ ಪ್ರಧಾನಿಯಾಗಿದ್ದಾಗ ಅವರನ್ನು ನಾಶ ಮಾಡಲು ಕಾಂಗ್ರೆಸ್ ಬಯಸಿತ್ತು. ಅವರು ಯಾವತ್ತೂ ಗುಜರಾತನ್ನು ಇಷ್ಟಪಡುತ್ತಿರಲಿಲ್ಲ ಎಂದು ಮೋದಿ ಹೇಳಿದರು.
ದೇಶಕ್ಕೆ ಅನೇಕ ಮುಖ್ಯಮಂತ್ರಿಗಳನ್ನು, ನಾಯಕರನ್ನು ನೀಡಿದ್ದ ಕಾಂಗ್ರೆಸ್ ಪಕ್ಷ ಇಂದು ಕೇವಲ ಸುಳ್ಳುಗಳನ್ನು ಹರಡುವುದಕ್ಕೇ ಮಹತ್ವ ನೀಡುತ್ತಿದೆ. ಅವರು ನಿರಾಶಾವಾದದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಪಕ್ಷ ತಾನು ಅಧಿಕಾರದಲ್ಲಿ ಇದ್ದಾಗ 12 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ನನೆಗುದಿಗೆ ಹಾಕಿತ್ತು. ಕಳೆದ ಅನೇಕ ವರ್ಷಗಳಲ್ಲಿ ಅಮೇಥಿಗೆ ಕನಿಷ್ಠ ಒಂದು ಕಲೆಕ್ಟರೇಟ್ ಕಚೇರಿಯನ್ನು ದೊರಕಿಸಲು ಅಸಮರ್ಥರಾದ ರಾಹುಲ್ ಗಾಂಧಿ ಗುಜರಾತ್ ನಲ್ಲಿ ನಾವು ಮಾಡಿರುವ ಕೆಲಸಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಜನಸಂದೋಹವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಟೀಕಿಸಿದರು.