ಹೊಸದಿಲ್ಲಿ: ಬಹುನಿರೀಕ್ಷಿತ, ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಇಂದು ಪ್ರಕಟವಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಗುಜರಾತ್ ಚುನಾವಣೆ ಪ್ರಕಟ ಮಾಡಿದ್ದು, ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಮೊದಲ ಹಂತದ ಮತದಾನವು ಡಿಸೆಂಬರ್ 1ರಂದು, ಎರಡನೇ ಹಂತದ ಮತದಾನವು ಡಿ.5ರಂದು ನಡೆಯಲಿದೆ. ಮತ ಎಣಿಕೆ ಕಾರ್ಯವು ಡಿ.8ರಂದು ನಡೆಯಲಿದೆ. ಇದೇ ದಿನದಂದು ಹಿಮಾಚಲ ಪ್ರದೇಶ ಚುನಾವಣೆಯ ಮತ ಎಣಿಕೆಯೂ ನಡೆಯಲಿದೆ.
ಶಿಪ್ಪಿಂಗ್ ಕಂಟೈನರ್ ನಲ್ಲಿ ಒಂದು, ಕೇವಲ ಒಬ್ಬ ಮತದಾರರಿಗೆ ಮತ್ತು ಜಫ್ರಾಬಾದ್ ಪಟ್ಟಣದ ಸಮೀಪವಿರುವ ಅರಬ್ಬಿ ಸಮುದ್ರದ ದ್ವೀಪದಲ್ಲಿ ಒಂದು ಸೇರಿದಂತೆ ಹಲವಾರು ವಿಶಿಷ್ಟ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ್ದರಿಂದ ಗುಜರಾತ್ ಚುನಾವಣೆ ಭಾರೀ ಮಹತ್ವ ಪಡೆದಿದೆ. ಸದ್ಯ ಬಿಜೆಪಿ ಆಡಳಿತವಿರುವ ಪಶ್ಚಿಮದ ರಾಜ್ಯದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಗೆ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವೂ ಸ್ಪರ್ಧೆ ನೀಡಲಿದೆ.
1998ರಿಂದ ಗುಜರಾತ್ ನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. 182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ 2017ರ ಚುನಾವನೆಯಲ್ಲಿ ಬಿಜೆಪಿಯು 99 ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಪಕ್ಷವು 77 ಮತ್ತು ಇತರರು ಆರು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು.