ಸೂರತ್: ಸಿಂಹವೊಂದು ಕಂಬಕ್ಕೆ ಕಟ್ಟಿದ್ದ ಹಸುವನ್ನು ಕೊಂದು ಹಬ್ಬದೂಟ ನಡೆಸುತ್ತಿರುವ ‘ಕಾನೂನು ಬಾಹಿರ ಕಾರ್ಯಕ್ರಮ’ ವೀಕ್ಷಿಸಲು ನೆರೆದಿದ್ದ ಜನರ ಗುಂಪೊಂದರ ವಿಡಿಯೋ ವೈರಲ್ ಆದ ಬಳಿಕ ಗುಜರಾತ್ ಅರಣ್ಯ ಇಲಾಖೆ 12 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಜುನಾಗತ್‌ನ ಗಿರ್ ಅರಣ್ಯದ ಹಳ್ಳಿಯಲ್ಲಿ ಸಿಂಹಕ್ಕೆ ಗೋವಿನ ಆಮಿಷ ಒಡ್ಡಿ, ವಿಕೃತ ಆನಂದ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಘಟನೆಯ ಕುರಿತು ಇದುವರೆಗೆ ನಡೆಸಲಾದ ತನಿಖೆಯ ಪ್ರಕಾರ, ನವೆಂಬರ್ 8 ರಂದು ಗಿರ್ ಅರಣ್ಯದ ದೇವಲಿಯಾ ವ್ಯಾಪ್ತಿಯ ಹಳ್ಳಿಯಲ್ಲಿ ಈ ಅಕ್ರಮ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯವನ್ನು ಸಾಸನ್-ಗಿರ್ ಎಂದೂ ಕರೆಯುತ್ತಾರೆ, ಇದು ಏಷ್ಯಾಟಿಕ್ ಸಿಂಹಗಳ ಅತೀ ದೊಡ್ಡ ವಾಸಸ್ಥಾನವಾಗಿದೆ.
ನಾವು 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ. ಏಷಿಯಾಟಿಕ್ ಸಿಂಹವೊಂದು ಕಂಬಕ್ಕೆ ಕಟ್ಟಿದ್ದ ಹಸುವನ್ನು ಕೊಂದು ಹಾಕುವುದನ್ನು ವೀಕ್ಷಿಸಲು ನೆರೆದಿದ್ದ ಜನರ ಗುಂಪೊಂದರ ವಿಡಿಯೋದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಪ್ರದರ್ಶನಕ್ಕೆ ಸಿಂಹವನ್ನು ಆಕರ್ಷಿಸಲು ಸಂಘಟಕರು ಹಸುವನ್ನು ಆಮಿಷವಾಗಿ ಬಳಸಿಕೊಂಡಿದ್ದರು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಜುನಾಗಢ್) ಎಸ್. ಕೆಬರ್ವಾಲ್ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ಗಿರ್ ಸೋಮನಾಥ ನ್ಯಾಯಾಲಯವು ಇಂತಹ ಪ್ರದರ್ಶನವನ್ನು ಆಯೋಜಿಸುವ ಮೂಲಕ ಏಷ್ಯಾಟಿಕ್ ಸಿಂಹಕ್ಕೆ ಕಿರುಕುಳ ನೀಡಿದ ಆರು ಜನರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆಮಿಷವಾಗಿ ಕೋಳಿಯನ್ನು ನೇತುಹಾಕುವ ಮೂಲಕ ವ್ಯಕ್ತಿಯೊಬ್ಬ ಸಿಂಹಿಣಿಗೆ ಆಮಿಷವೊಡ್ಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.