Advertisement

ಸ್ಮಾರ್ಟ್‌ ನಗರಿಗೂ ಬರಲಿ ಗೆರಿಲ್ಲಾ ತೋಟಗಾರಿಕೆ

09:27 AM Mar 10, 2019 | Team Udayavani |

ಸ್ವಲ್ಪ ಜಾಗವಿದ್ದರೂ ಸಾಕು ಅಲ್ಲೊಂದು ಫ‌ಲ ಪುಷ್ಪಗಳ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು ಕೆಲವರ ನೆಚ್ಚಿನ ಹವ್ಯಾಸ. ನಗರ ಸೌಂದರ್ಯ ಹೆಚ್ಚಿಸುವಲ್ಲೂ ನಾವು ಈ ನೀತಿಯನ್ನು ಅನುಸರಿಸಿದರೆ ನಗರ ಹೆಚ್ಚು ಸುಂದರ, ಸ್ವಚ್ಛವಾಗಲು, ಕಾಂಕ್ರೀಟ್‌ ಕಾಡಿನಲ್ಲೂ ಹಚ್ಚಹಸುರು ನಳನಳಿಸಲು ಸಾಧ್ಯವಿದೆ.  ಕಾಂಕ್ರೀಟ್‌ ಕಾಡುಗಳ ಮಧ್ಯೆ ಇರುವ ಸಣ್ಣ ಪುಟ್ಟ ಜಾಗಗಳು, ಇಂಟರ್‌ ಲಾಕ್‌ ಹಾದಿಯ ನಡುವೆ ಅಲ್ಲೊಂದು ಇಲ್ಲೊಂದು ಸಿಗುವ ಜಾಗಗಳಲ್ಲಿ ತೋಟಗಾರಿಕೆಯನ್ನು ನಡೆಸಬಹುದು ಎಂಬುದನ್ನು ಅಮೆರಿಕಾದ ಲಾಸ್‌ ಏಂಜಲೀಸ್‌ ನಗರ ನಿವಾಸಿಗಳು ಮಾಡಿ ತೋರಿಸಿದ್ದಾರೆ. ಅಲ್ಲಿ  ಅವರು ಮೊರೆ ಹೋಗಿದ್ದು ಗೆರಿಲ್ಲಾ ತೋಟಗಾರಿಕೆ ನೀತಿಗೆ.

Advertisement

ಏನಿದು ಗೆರಿಲ್ಲಾ ತೋಟಗಾರಿಕೆ?
ಗೆರಿಲ್ಲಾ ತೋಟಗಾರಿಕೆ ಎಂಬುದು ಭೂಮಿಯ ಮೇಲೆ ನಡೆಸಬಹುದಾದ ತೋಟಗಾರಿಕೆ ಪ್ರಕ್ರಿಯೆಯಾಗಿದ್ದು, ತೋಟಗಾರರು ಬೆಳೆಸಿಕೊಳ್ಳುವಂತಹ ಕಾನೂನುಬದ್ಧ ಹಕ್ಕುಗಳನ್ನು ಹೊಂದಿಲ್ಲ. ತೋಟಗಾರಿಕೆಯ ಬಗ್ಗೆ ಆಸಕ್ತಿ ಹೊಂದಿರುವ ಗುಂಪೊಂದು ಗೆರಿಲ್ಲಾ ತೋಟಗಾರಿಕೆ ನಡೆಸುವ ಹೊಣೆ ಹೊತ್ತಿರುತ್ತದೆ. ಕೈಬಿಟ್ಟ ಸ್ಥಳಗಳು, ಕಾಳಜಿ ವಹಿಸದ ಪ್ರದೇಶಗಳು ಅಥವಾ ಖಾಸಗಿ ಆಸ್ತಿಯು ಗೆರಿಲ್ಲಾ ತೋಟಗಾರಿಕೆಗೆ ಒಳಗೊಳ್ಳುತ್ತದೆ. ಉದ್ಯಾನವನದ ಗೆರಿಲ್ಲಾ ಎಂದು ಕರೆಯಲ್ಪಡುವ ಭೂಮಿ ಸಾಮಾನ್ಯವಾಗಿ ಕಾನೂನುಬದ್ಧ ಮಾಲಕರಿಂದ ನಿರ್ಲಕ್ಷಿಸಲ್ಪಟ್ಟ ಕಾರಣ ಇಲ್ಲಿ ಸಸ್ಯಗಳನ್ನು ಬೆಳೆಸಲು ಗೆರಿಲ್ಲಾ ತೋಟಗಾರರು ಆ ಭೂಮಿಯನ್ನು ಬಳಸುತ್ತಾರೆ. ಸೌಂದರ್ಯದ ಉದ್ದೇಶಗಳಿಗಾಗಿ ಹೂವು, ಆಹಾರ ಬೆಳೆಗಳು ಅಥವಾ ಉಪಯೋಗಕಾರಿ ಸಸ್ಯಗಳನ್ನು ನೆಡಲು, ಸಂರಕ್ಷಿಸಲು ಕಾಳಜಿ ವಹಿಸುತ್ತಾರೆ. ನಿರ್ಲಕ್ಷಿಸಲ್ಪಟ್ಟ ಜಾಗವೇ ಆಗಬೇಕೆಂದಿಲ್ಲ. ಉಪಯೋಗಕ್ಕೆ ಬಾರದ ವಾಹನಗಳು, ಇನ್ನಿತರ ಅನಗತ್ಯ ವಸ್ತುಗಳನ್ನು ಬಳಸಿಯೂ ತೋಟಗಾರಿಕೆ ನಡೆಸಬಹುದು ಎಂಬುದನ್ನು ಇವರು ಮಾಡಿ ತೋರಿಸಿದ್ದಾರೆ.

ಗೆರಿಲ್ಲಾ ತೋಟಗಾರಿಕೆ ಎಂಬುದು ಕೇವಲ ಅಮೆರಿಕದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ಕಡೆಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ರಾತ್ರಿ ಹಗಲೆನ್ನದೆ ಕಾರ್ಯ ನಿರ್ವಹಿಸುವ ಸ್ವಯಂ ಸೇವಕರೂ ಇದ್ದಾರೆ. ಇದರಲ್ಲಿ ಹೆಚ್ಚಾಗಿ ಉನ್ನತ ಹುದ್ದೆಯಲ್ಲಿರುವ ವರೂ ತಮ್ಮ ತಮ್ಮ ನಗರವನ್ನೂ ರೂಪಿಸಲು ಗೆರಿಲ್ಲಾ ತೋಟಗಾರಿಕೆಯ ಮೂಲಕ ಪ್ರಯತ್ನಿಸುತ್ತಿದ್ದಾರೆ.

ಸ್ಮಾರ್ಟ್‌ ನಗರಿಗೂ ಬರಲಿ
ಮಂಗಳೂರಿನಲ್ಲಿ ಕೆಲವೊಂದು ಸ್ವಯಂ ಸೇವಕ ತಂಡಗಳು ಈ ಕೆಲಸವನ್ನೂ ಮಾಡುತ್ತಿವೆ. ಇದು ಇನ್ನಷ್ಟು ಪ್ರಭಾವಗೊಳ್ಳಬೇಕು, ಸರಕಾರದಿಂದ ಪ್ರೋತ್ಸಾಹ ಸಿಗಬೇಕು. ಹೀಗಾಗಿ ಗೆರಿಲ್ಲಾ ತೋಟಗಾರಿಕಾ ನಿರ್ಮಾಣ ತಂಡ ಆಸಕ್ತ ಜನರನ್ನು ಸೇರಿಸಿ ಸ್ಥಳೀಯಾಡಳಿತವೇ ಕಟ್ಟಿಕೊಳ್ಳಬೇಕಿದೆ. ಜತಗೆ ಇವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಕ್ರಮಕೈಗೊಂಡರೆ ನಗರದಲ್ಲಿ ಅವ್ಯವಸ್ಥಿತ ಸ್ಥಳಗಳು, ನಿರ್ಲಕ್ಷಿಸಲ್ಪಟ್ಟ ಪ್ರದೇಶಗಳು, ರಸ್ತೆ ಬದಿ, ರಸ್ತೆ ಮಧ್ಯೆ ಇರುವ ಡಿವೈಡರ್‌ ಗಳನ್ನು ಇನ್ನಷ್ಟು ಆಕರ್ಷಕಗೊಳಿಸಲು ಪ್ರಯತ್ನಿಸಬಹುದು.

ವಿಶ್ವಾಸ್‌ ಅಡ್ಯಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next