Advertisement

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

01:23 PM Sep 20, 2024 | Team Udayavani |

ಮಹಾನಗರ: ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಆಯ್ಕೆಯಾಗಿರುವ ಮನೋಜ್‌ ಕುಮಾರ್‌ ಜನಸ್ನೇಹಿ ಆಡಳಿತ ಮತ್ತು ಸ್ಮಾರ್ಟ್‌ ಸಿಟಿ ಕಾಮಗಾರಿಗೆ ವೇಗ ನೀಡುವುದಾಗಿ ಹೇಳಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಕೈಗೊಳ್ಳಲಿರುವ ಕಾರ್ಯ-ಯೋಜನೆಗಳ ಕುರಿತಂತೆ ಅವರು ‘ಉದಯವಾಣಿ ಸುದಿನ’ ಜತೆಗೆ ತಮ್ಮ ಮನದಾಳ ತೆರೆದಿಟ್ಟಿದ್ದಾರೆ.

Advertisement

1. ಪಾಲಿಕೆ ಆಡಳಿತಾವಧಿ ಕೊನೆಯಾಗಲು ಕೆಲವೇ ತಿಂಗಳು ಬಾಕಿ ಇದೆ. ಮುಂದಿನ ಆಡಳಿತದ ಸವಾಲುಗಳನ್ನು ಯಾವ ರೀತಿ ನಿರ್ವಹಿಸುತ್ತೀರಿ?
ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ನಾಲ್ಕೂವರೆ ವರ್ಷದ ಅವಧಿಯಲ್ಲಿನ ಎಲ್ಲ ಮೇಯರ್‌ಗಳು ಜನಪರ, ಅಭಿವೃದ್ಧಿಶೀಲ, ಪಾರದರ್ಶಕ ಆಡಳಿತ ನೀಡಿದ್ದಾರೆ. ನನಗೆ ಮುಂದಿನ ಅವಧಿ ಕಡಿಮೆ ಇದ್ದರೂ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇನೆ. ನಗರದಲ್ಲಿ ಈಗಾಗಲೇ ಅನುಷ್ಠಾನ ಗೊಂಡ ಯೋಜನೆಗಳನ್ನು ಮುಂದುವರಿಸುವುದಕ್ಕೆ ಮತ್ತು ಬಾಕಿ ಯೋಜನೆ ಆರಂಭಕ್ಕೆ ಪ್ರಥಮ ಆದ್ಯತೆ ನೀಡುತ್ತೇನೆ.

2. ನಗರದ ಅಭಿವೃದ್ಧಿಯ ನೆಲೆಯಲ್ಲಿ ನಿಮ್ಮ ಆದ್ಯತೆ ಯಾವುದು?
ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಮುಖ್ಯವಾಗಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ನಿರ್ವಹಣೆ, ಪ್ರಾಪರ್ಟಿ ಟ್ಯಾಕ್ಸ್‌ ಸಹಿತ ಮಂಗಳೂರು ನಗರದ ಸಾರ್ವಜನಿಕರ ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡುತ್ತೇನೆ.

3. ಜನಸ್ನೇಹಿ ಆಡಳಿತದ ನಿಟ್ಟಿನಲ್ಲಿ ನಿಮ್ಮ ಯೋಜನೆ ಏನು?
ಮುಖ್ಯವಾಗಿ ಪೇಪರ್‌ಲೆಸ್‌ ಆಡಳಿತ ವ್ಯವಸ್ಥೆ, ಆನ್‌ಲೈನ್‌ ನೀರಿನ ಬಿಲ್‌, ಇ-ಖಾತ ಸಹಿತ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಚುರುಕು ಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಆನ್‌ಲೈನ್‌ ವ್ಯವಸ್ಥೆಯಲ್ಲಿರುವ ತಾಂತ್ರಿಕ ದೋಷ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ.

4. ಈಗಾಗಲೇ ನಡೆಯುತ್ತಿದ್ದ ಮೇಯರ್‌ ಫೋನ್‌ ಇನ್‌, ಜನಸ್ಪಂದನ ಕಾರ್ಯಕ್ರಮ, ಅಹವಾಲು ಸಭೆ ಮುಂದುವರಿಯುತ್ತದೆಯೇ?
ಖಂಡಿತವಾಗಿಯೂ. ಹಿಂದಿನ ಅವಧಿಯ ಮೇಯರ್‌ಗಳು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅದರಂತೆ ಎಲ್ಲಾ ಕಾರ್ಯಕ್ರಮಗಳು ನನ್ನ ಅವಧಿಯಲ್ಲಿಯೂ ಮುಂದುವರೆಯಲಿದೆ.

Advertisement

5. ಸ್ಮಾರ್ಟ್‌ಸಿಟಿ, ಜಲಸಿರಿ, ವಿವಿಧ ಯೋಜನೆ ಅರ್ಧದಲ್ಲಿ ಬಾಕಿ ಇವೆ.
ಕೋವಿಡ್‌ ಕಾರಣದಿಂದಾಗಿ ಜಲಸಿರಿ ಯೋಜನೆ ಆರಂಭಿಕ ಹಂತದಲ್ಲೇ ವಿಳಂಬಗೊಂಡಿತ್ತು. ಡಿಸೆಂಬರ್‌ನಲ್ಲಿ ಮುಕ್ತಾಯ ಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅಲ್ಲದೆ ಸ್ಮಾರ್ಟ್‌ಸಿಟಿ ಕಾಮಗಾರಿ ಕುಂಠಿತವಾಗುತ್ತಿದ್ದು, ವೇಗ ನೀಡಲು ಆದ್ಯತೆ ನೀಡುತ್ತೇನೆ. ಅಧಿಕಾರಿಗಳ ಆಗಾಗ್ಗೆ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಯೋಜನೆಗಳಿಗೆ ಚುರುಕು ನೀಡುವ ಕೆಲಸ ಮಾಡುತ್ತೇನೆ.

6. ಮುಂದಿನ ವರ್ಷವೇ ಚುನಾವಣೆ. ಈ ಹೊಣೆಯೂ ನಿಮ್ಮ ಹೆಗಲಿಗಿದೆ. ಹೇಗೆ ನಿಭಾಯಿಸುತ್ತೀರಿ?
ಕೆಲವೇ ತಿಂಗಳಲ್ಲಿ ಪಾಲಿಕೆ ಅವಧಿ ಮುಕ್ತಾಯಗೊಳ್ಳು ತ್ತಿದ್ದು, ಚುನಾವಣೆಗೆ ತಯಾರಿ ನಡೆಸಬೇಕಿದೆ. ಈ ಹಿಂದಿನ ಮೇಯರ್‌ಗಳು ಕೂಡ ಅವರ ಅವಧಿಯಲ್ಲಿ ಉತ್ತಮ ಕಾರ್ಯಚಟುವಟಿಕೆ, ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆ. ಇದರಿಂದಾಗಿ ನಮಗೆ ದೊಡ್ಡ ಸವಾಲು ಇಲ್ಲ. ಪ್ರಸ್ತುತ ಇರುವ ಯೋಜನೆಗಳನ್ನು ಮುಂದುವರೆಸಿ, ಜನರು ಮೆಚ್ಚುವ ರೀತಿ ಆಡಳಿತ ನಡೆಸುತ್ತೇನೆ.

ಮೂಲ ಸೌಕರ್ಯಕ್ಕೆ ಆದ್ಯತೆ
ರಾಜ್ಯದಲ್ಲಿ ಬೆಂಗಳೂರು ಬಳಿಕ ಅತೀ ದೊಡ್ಡ ಹಾಗೂ ಶೀಘ್ರ ಗತಿಯಲ್ಲಿ ಬೆಳೆವಣಿಗೆ ಕಾಣುತ್ತಿರುವ ಮಂಗಳೂರು ನಗರದ ಅಭಿವೃದ್ಧಿಯೇ ಮುಖ್ಯ ಆದ್ಯತೆ. ಮೊದಲ ಅವಧಿಗೆ ಕಾರ್ಪೋರೆಟರ್‌ ಆಗಿರುವ ನನಗೆ ಮೇಯರ್‌ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ಇದಕ್ಕೆ ನನ್ನ ಪಕ್ಷ, ನಾಯಕರು ಹಾಗೂ ಕಾರ್ಯಕರ್ತರಿಗೆ ನಾನು ಅಭಾರಿಯಾಗಿದ್ದೇನೆ. ಈ ಹಿಂದಿನ 4 ಅವಧಿಯ ಮೇಯರ್‌ಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಅದನ್ನು ಮಾದರಿಯಾಗಿಟ್ಟು ಆ ಯೋಜನೆಗಳ ಜತೆ ಮತ್ತಷ್ಟು ರೂಪುರೇಷೆಗಳನ್ನು ರಚಿಸಿ ಮುಂದುವರಿಯುತ್ತೇನೆ. ನಗರದ ರಸ್ತೆ, ನೀರು ಸಹಿತ ಮೂಲ ಸೌಕರ್ಯಕ್ಕೆ ಒತ್ತು ನೀಡುತ್ತೇನೆ ಎಂದು ನೂತನ ಮೇಯರ್‌ ಮನೋಜ್‌ ಕುಮಾರ್‌ ಕೋಡಿಕಲ್‌ ಹೇಳಿದರು.

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next