ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನವೂ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಕೆಲವೆಡೆ ಮರಗಳು ಧರೆಗುರುಳಿದವು. ಕೆಲವು ಪ್ರದೇಶಗಳಲ್ಲಿ ಇಡೀ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಸ್ತೆ, ಅಂಡರ್‌ಪಾಸ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಸಂಚಾರದಟ್ಟಣೆ ಉಂಟಾಯಿತು.
ರಾತ್ರಿ 8 ಗಂಟೆ ಹೊತ್ತಿಗೆ ಶುರುವಾದ ಗುಡುಗು ಸಹಿತ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಇದರಿಂದ ಕೆಲವು ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳು ನೀರಿನಿಂದ ಆವೃತಗೊಂಡವು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.
ಗಾಳಿಸಹಿತ ಮಳೆಯ ರಭಸಕ್ಕೆ ಜಯನಗರ, ಗಿರಿನಗರ, ಎಇಸಿಎಸ್, ಶಿರ್ಕಿ ಮಸೀದಿ ಬಳಿ ತಲಾ ಒಂದು ಮರ ನೆಲಕಚ್ಚಿದ್ದು, ಇದರಿಂದ ವಾಹನಸಂಚಾರಕ್ಕೆ ಸಮಸ್ಯೆಯಾಯಿತು. ಬಿಟಿಎಂ 2ನೇ ಹಂತದ ಗಂಗೋತ್ರಿ ಆಸ್ಪತ್ರೆ ಬಳಿ ಮನೆಯೊಂದಕ್ಕೆ ನೀರು ನುಗ್ಗಿತು. ಕೆಲವೆಡೆ ವಿದ್ಯುತ್ ಕಂಬಗಳು ಹಾಗೂ ಮರದ ರೆಂಬೆಗಳು ವಿದ್ಯುತ್ ಲೈನ್‌ಗಳ ಮೇಲೆ ಬಿದ್ದಿದ್ದರಿಂದ ನಗರದ ಕೆಲವು ಬಡಾವಣೆಗಳು ಕತ್ತಲಲ್ಲಿ ಮುಳುಗುವಂತಾಯಿತು.
10ರ ಸುಮಾರಿಗೆ ಬೆಂಗಳೂರು ನಗರ ಜಿಲ್ಲೆಯ ಗುಟ್ಟಹಳ್ಳಿಯಲ್ಲಿ ಅತಿ ಹೆಚ್ಚು 50 ಮಿ.ಮೀ. ಮಳೆ ದಾಖಲಾಗಿತ್ತು. ಅದೇ ರೀತಿ, ಪುಲಕೇಶಿನಗರದಲ್ಲಿ 43.5 ಮಿ.ಮೀ., ದಯಾನಂದನಗರ 24 ಮಿ.ಮೀ., ಲಾಲ್‌ಬಾಗ್ 20 ಮಿ.ಮೀ., ಆರ್.ಆರ್. ನಗರ 20.5 ಮಿ.ಮೀ., ವನ್ನಾರ್‌ಪೇಟೆ 22.5 ಮಿ.ಮೀ., ಬಿಳೇಕಹಳ್ಳಿ 14 ಮಿ.ಮೀ., ತಾವರೆಕೆರೆ 20 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಅದೇ ರೀತಿ, ಗುಂಡಿಗಳು ತುಂಬಿರುವ ರಸ್ತೆಗಳು, ಕೆಲ ತಗ್ಗುಪ್ರದೇಶಗಳು ಜಲಾವೃತವಾಗಿದ್ದವು. ಇದರಿಂದ ಸಂಚಾರ ದಟ್ಟಣೆಯುಂ ಟಾಗಿ ವಾಹನ ಸವಾರರು ಗಂಟೆಗಟ್ಟಲೆ ಮಳೆಯಲ್ಲಿ ತೊಯ್ದು ತೊಪ್ಪೆಯಾದರು.
ಸಂಚಾರಕ್ಕೆ ಸಂಚಕಾರ
ಕೆ.ಜಿ. ರಸ್ತೆ, ಶೇಷಾದ್ರಿಪುರ, ಓಕಳಿಪುರ, ಕೆ.ಆರ್. ಮಾರುಕಟ್ಟೆ, ಆರ್.ವಿ. ರಸ್ತೆ, ಹೆಬ್ಟಾಳ, ಮೈಸೂರು ರಸ್ತೆ, ನಾಯಂಡಹಳ್ಳಿ, ತುಮಕೂರು ರಸ್ತೆ, ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆ.ಆರ್. ಪುರ ರಸ್ತೆ, ಎನ್‌ಜಿಇಎಫ್, ಪೀಣ್ಯ, ವೆಲ್ಲಾರ ಜಂಕ್ಷನ್ ಮತ್ತಿತರ ಕಡೆಗಳಲ್ಲಿ ಸಂಚಾರದಟ್ಟಣೆ ತೀವ್ರವಾಗಿತ್ತು.
ಇನ್ನೂ 2 ದಿನ ಮಳೆ?
ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತದ ಪರಿಣಾಮ ನಗರದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಇದು ಮುಂದುವರಿಯುವ ಸಾಧ್ಯತೆ ಇದೆ. ಬುಧವಾರ ತುಂತುರು ಹಾಗೂ ಗುರುವಾರ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.