Advertisement

ಜಲಕ್ಷಾಮ ನೀಗಿಸುವ ಭರವಸೆ ಮೂಡಿಸಿದ ಕಿಂಡಿ ಅಣೆಕಟ್ಟು

03:51 PM Dec 29, 2017 | Team Udayavani |

ಆಲಂಕಾರು: ದ.ಕ. ಜಿಲ್ಲಾ ಪಂಚಾಯತ್‌ ಅಧೀನದ ಸಣ್ಣ ನೀರಾವರಿ ಇಲಾಖೆಯ ಅನುದಾನದಿಂದ ನಿರ್ಮಿಸಲಾದ ಆಲಂಕಾರು ಗ್ರಾಮದ ಕಿನ್ನಿಗೋಳಿ ಹಾಗೂ ಬುಡೇರಿಯಾ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಸುವ ಕಾರ್ಯ ಬಹುತೇಕ
ಪೂರ್ಣಗೊಂಡಿದೆ. ಕಿಂಡಿ ಅಣೆಕಟ್ಟುಗಳು ನೀರಿನಿಂದ ತುಂಬಿ ತುಳುಕುತ್ತಿದ್ದು, ಸಾಕಷ್ಟು ನೀರು ನಿಂತು, ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸುವ ಭರವಸೆ ಮೂಡಿಸಿದೆ.

Advertisement

ಆಲಂಕಾರು ಗ್ರಾಮದ ಕಿನ್ನಿಗೋಳಿ ಹಾಗೂ ಬುಡೇರಿಯಾದಲ್ಲಿ ಹರಿಯುವ ಕಿರುತೋಡುಗಳಿಗೆ ಜಿಲ್ಲಾ ಪಂಚಾಯತ್‌ ಅಧೀನದ ಸಣ್ಣ ನೀರಾವರಿ ಇಲಾಖೆ 2015ರಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿತ್ತು. ಬುಡೇರಿಯಾ ಕಿಂಡಿ ಅಣೆಕಟ್ಟು 45 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದರೆ, ಕಿನ್ನಿಗೋಳಿ ಕಿಂಡಿ ಅಣೆಕಟ್ಟಿಗೆ 50 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಸುಮಾರು 12 ಅಡಿ ಎತ್ತರ ಈ ಎರಡು ಕಿಂಡಿ ಅಣೆಕಟ್ಟುಗಳಿಗೆ ಸ್ಥಳಿಯಾಡಳಿತದ ಸಹಕಾರದೊಂದಿಗೆ ಗ್ರಾಮದ ಜನತೆ ಹಲಗೆ ಜೋಡಿಸುವ ಕಾರ್ಯ ಪೂರ್ಣಗೊಳಿಸಿ, ನೀರು ನಿಲ್ಲಿಸುತ್ತಿದ್ದಾರೆ. ಈ ಎರಡೂ ಅಣೆಕಟ್ಟುಗಳಿಂದಾಗಿ ಸಾಕಷ್ಟು ದೂರದ ತನಕ ನೀರು ನಿಂತು, ಕಣ್ಣಿಗೆ ಹಬ್ಬ ಉಂಟುಮಾಡುತ್ತಿದೆ.

ಕಿನ್ನಿಗೋಳಿ ಕಿಂಡಿ ಅಣೆಕಟ್ಟಿನಿಂದ ಸುಮಾರು 3 ಕಿಲೋ ಮೀಟರ್‌ ದೂರದ ಕುಂಡಾಜೆ ವರೆಗೂ ನೀರು ಸಂಗ್ರಹವಾಗಿದೆ. ಬುಡೇರಿಯಾ ಕಿಂಡಿ ಅಣೆಕಟ್ಟಿನಿಂದ ಸಂಗ್ರಹವಾದ ನೀರು 2 ಕಿ.ಮೀ. ದೂರದವರೆಗೆ ನೀರು ಸಂಗ್ರಹ ವಾಗಿದೆ. ಈ ಅಣೆಕಟ್ಟಕ್ಕೆ ಇನ್ನೂ ಎರಡು ಹಲಗೆ ಹಾಸಲು ಬಾಕಿಯಿದೆ. ಈಗಲೇ ಎಲ್ಲ ಹಲಗೆಗಳನ್ನು ಅಳವಡಿಸಿದರೆ ಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಪೈರು ಹಾಳಾಗುವ ಸಂಭವ ಇರುವ ಕಾರಣ, ಅವುಗಳ ಅಳವಡಿಕೆಗೆ ವಿಳಂಬ ಮಾಡಲಾಗುತ್ತಿದೆ. ಈಗಲೇ ಹಲಗೆ ಅಳವಡಿಸಲು ಸಾಧ್ಯವಿದ್ದರೆ ಪುರುಷಬೆಟ್ಟು, ಚಾಮೆತ್ತಡ್ಕ, ಪೊಸೋಣಿ ಭಾಗದ ಜನತೆಯ ನೀರಿನ ಅಭಾವಕ್ಕೆ ಕಿಂಚಿತ್ತು ಪರಿಹಾರ ಸಿಗುವ ಸಂಭವವಿತ್ತು.

ಫೆಬ್ರವರಿಗೆ ಬರಿದಾಗುವ ಭೀತಿ
ಈ ಕಿಂಡಿ ಅಣೆಕಟ್ಟಿನಿಂದಾಗಿ ಆಸುಪಾಸಿನ ರೈತಾಪಿ ಜನತೆ ತಮ್ಮ ತೋಟ ಪಟ್ಟಿಗಳಿಗೆ ನೀರುಣಿಸುವುದನ್ನು ನಿಲ್ಲಿಸಿದ್ದು, ತೋಟದಲ್ಲಿ ತೇವಾಂಶ ಹೆಚ್ಚಾಗಿದೆ. ಡಿಸೆಂಬರ್‌ ತಿಂಗಳಲ್ಲೇ ಅಣೆಕಟ್ಟು ತುಂಬಿರುವುದಿಂದ ಏಪ್ರಿಲ್‌ ತಿಂಗಳ ಅಂತ್ಯದವರೆಗೆ ನೀರು ಉಳಿಯುವ ಸಾಧ್ಯತೆಯಿತ್ತು. ಆದರೆ ಅಣೆಕಟ್ಟದ ಕೆಲ ಭಾಗದ ನದಿಗಳಲ್ಲಿ ನಿರಂತರ ಮರಳುಗಾರಿಕೆ ನಡೆಯುತ್ತಿರುವುದರಿಂದ ನೀರಿನ ಜಲ ಮಟ್ಟವು ಕುಸಿಯುತ್ತಿದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ಆರಂಭಕ್ಕೆ ಕಿಂಡಿ ಅಣೆ ಕಟ್ಟಗಳು ಬರಿದಾಗುವ ಸಂಭವವಿದೆ.

ಈಜು ತರಬೇತಿಗೆ ಪೂರಕ
ನೀರಿನ ಸೆಳೆತ ಇಲ್ಲದ ಕಾರಣ ಈಜು ಅಭ್ಯಾಸ ನಡೆಸುತ್ತಿದ್ದಾರೆ. ಸಂಜೆ ಮತ್ತು ಬೆಳಗ್ಗೆ ಕಟ್ಟದ ನೀರಿನಲ್ಲಿ ಈಜಾಡಿ, ಸ್ನಾನ ಮಾಡಿ ಮಜಾ ಅನುಭವಿಸುತ್ತಿದ್ದಾರೆ. ಕಿಂಡಿ ಅಣೆ ಕಟ್ಟಿನಲ್ಲಿ ಎರಡು ವರ್ಷದಿಂದ ಹಲವರು ಈಜು ಕಲಿತಿದ್ದಾರೆ. ಆದರೆ, ಸದ್ಯ ಎರಡೂ ಅಣೆಕಟ್ಟುಗಳಲ್ಲಿ 11 ಅಡಿಗೂ ಹೆಚ್ಚು ನೀರು ನಿಂತಿದ್ದು, ನುರಿತ ಈಜುಗಾರರಿಲ್ಲದೆ
ಈಜಾಡಲು ಬರುವುದು ಅಪಾಯಕಾರಿಯಾಗಿದೆ.

Advertisement

ತುಂಬಿದ ಕೆರೆ, ಬಾವಿಗಳು
ಈ ಕಿಂಡಿ ಅಣೆಕಟ್ಟುಗಳ ಆಸುಪಾಸಿನ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. 2014ರಲ್ಲಿ ಇಲ್ಲಿನ ಕೆಲವು ಕೆರೆ, ಬಾವಿಗಳಲ್ಲಿ ಡಿಸೆಂಬರ್‌ ತಿಂಗಳ ಆರಂಭಕ್ಕೇ ನೀರು ಬತ್ತಿತ್ತು. ಈಗ 2 ವರ್ಷಗಳಿಂದ ಈ ಕೆರೆ, ಬಾವಿಗಳಲ್ಲಿ ನೀರು ಬತ್ತದಿರುವುದು ಅಂತರ್ಜಲ ಹೆಚ್ಚಾಗಿ ರುವುದಕ್ಕೆ ನಿದರ್ಶನವಾಗಿದೆ.

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next