ಬೀದರ್: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ್ ಗ್ಯಾರಂಟಿಗಳು ದೆಹಲಿ ಆಪ್ ಸರ್ಕಾರದ ನಕಲು ಆಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಘೋಷಿತ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ, ನುಡಿದಂತೆ ಸರಿಯಾಗಿ ಅನುಷ್ಠಾನಕ್ಕೆ ತರುವ ಪ್ರಯಾಣಿಕ ಪ್ರಯತ್ನ ಮಾಡುತ್ತಿಲ್ಲ. ಇಂದು ರಾಜ್ಯದಲ್ಲಿ ಮೂಲಭೂತ ಅಗತ್ಯತೆಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಒತ್ತು ಕೊಡಬೇಕಾದ ಅಗತ್ಯವಿತ್ತು. ಆ ಕೆಲಸ ನಮ್ಮ ಕೇಜ್ರಿವಾಲ್ ಸರ್ಕಾರ ಮಾಡುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಕಸಿದುಕೊಂಡು ಗ್ಯಾರಂಟಿಗಳಿಗೆ ಬಳಸಿ ಕೊಳ್ಳಲಾಗುತ್ತಿದೆ. ಆದರೆ, ಸಿಎಂ ಇದನ್ನು ನಿರಾಕರಿಸುತ್ತಿದ್ದಾರೆ. ಹಾಗಾದರೆ, ಯೋಜನೆಗಳ ಜಾರಿ ಮತ್ತು ಬಳಕೆ ಅನುದಾನ ಕುರಿತಂತೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯ ಬಿಟ್ಟು ಭಾವನಾತ್ಮಕ ಮೂಲಕ ಮತ ಕೇಳುತ್ತಿದೆ. ನಮಗೆ ರಾಮ ಮಂದಿರಕ್ಕಿಂತ ರಾಮ ರಾಜ್ಯದ ಅವಶ್ಯಕತೆ ಇದೆ ಎಂದು ಹೇಳಿದ ಚಂದ್ರು, ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ದೆಹಲಿ ಸರ್ಕಾರದ ಅಧಿಕಾರ ದುರ್ಬಲಗೊಳಿಸುವ ಹುನ್ನಾರ ಮಾಡಲಾಗಿದೆ. ಪರಿವಾರವಾದ ಮತ್ತಿತರ ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಪ್ರಧಾನಿ ಮೋದಿ ಈಗಲಾದರೂ ಬಿಡಲಿ ಎಂದರು.
ರಾಜ್ಯದಲ್ಲಿ ಆಪ್ ಪಕ್ಷದ ಹೊಸ ಪಡೆ ಕಟ್ಟಿಕೊಂದು ವಿಭಿನ್ನ ರೂಪ ಕೊಡುವ ಪ್ರಯತ್ನ ನಡೆದಿದೆ. ಸಧ್ಯದ ಪರಿಸ್ಥಿಯಲ್ಲಿ ಬಲಾಢ್ಯ ಪಕ್ಷಗಳ ವಿರುದ್ಧ ಆಪ್ ನಿಲ್ಲುವುದು ಅಷ್ಟು ಸುಲಭವಲ್ಲ. ಹಾಗಾಗಿ ಆಪ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಮುಂದಿನ ಸ್ಥಳಿಯ ಸಂಸ್ಥೆ ಚುನಾವಣೆಗೆ ತಯಾರಿ ನಡೆದಿದೆ. ಇದಕ್ಕಾಗಿ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಪ್ರವಾಸ ಆರಂಭಿಸಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಫ್ ರಾಜ್ಯ ಉಪಾಧ್ಯಕ್ಷ ನಸೀಮ್ ಪಟೇಲ್, ಯುವ ಘಟಕದ ಅಧ್ಯಕ್ಷ ಅವಿನಾಶ ಮತ್ತು ಬ್ಯಾಂಕ್ ರೆಡ್ಡಿ ಇದ್ದರು.