Advertisement

“ಶಕ್ತಿ”ಗೆ ಶತಕೋಟಿ ಸಂಭ್ರಮ: ಗ್ಯಾರಂಟಿ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ದಿಕ್ಸೂಚಿ- ಸಿಎಂ

10:35 PM Nov 24, 2023 | Team Udayavani |

ಬೆಂಗಳೂರು: ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗುವುದಿಲ್ಲ; ಬದಲಿಗೆ ಆರ್ಥಿಕ ಬೆಳವಣಿಗೆಗೆ ದಿಕ್ಸೂಚಿ ಆಗಲಿದೆ. ಇದಕ್ಕೆ ಅಲ್ಪಾವಧಿಯಲ್ಲೇ ಶತಕೋಟಿ ಮಹಿಳೆಯರು ಪ್ರಯಾಣಿಸುವ ಮೂಲಕ ಯಶಸ್ವಿಯಾಗಿ ನಡೆಯುತ್ತಿರುವ “ಶಕ್ತಿ’ ಯೋಜನೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ “ಶಕ್ತಿ’ ಗ್ಯಾರಂಟಿಗೆ ಶತಕೋಟಿ ಸಂಭ್ರಮ ಮತ್ತು ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಲಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಸಹಿತ ವಿಪಕ್ಷ ನಾಯಕರು ಆರಂಭದಿಂದಲೂ ಟೀಕೆ ಮಾಡುತ್ತಾ ಬಂದರು. ಆದರೆ ಬಡ ಮತ್ತು ದುರ್ಬಲ ವರ್ಗಗಳಿಗಾಗಿ ಜಾರಿಗೊಳಿಸಿದ ಈ ಗ್ಯಾರಂಟಿಗಳಿಂದ ಆರ್ಥಿಕ ಚಟುವಟಿಕೆಗಳು ಅಧಿಕವಾಗುತ್ತಿದ್ದು, ಅದರಿಂದ ರಾಜ್ಯದ ಆಂತರಿಕ ವೃದ್ಧಿ ದರ(ಜಿಡಿಪಿ)ವೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಆರ್ಥಿಕ ವೃದ್ಧಿಗೆ ದಿಕ್ಸೂಚಿಯಾಗಿವೆ. ಇದಕ್ಕೆ ಕೇವಲ ಐದೂವರೆ ತಿಂಗಳಲ್ಲಿ ಅತ್ಯಧಿಕ ಜನಪ್ರಿಯತೆ ಗಳಿಸಿದ “ಶಕ್ತಿ’ ಯೋಜನೆಯೇ ಸಾಕ್ಷಿ ಎಂದರು.

ಬೆಂಬಲ ಸಿಕ್ಕಿದರೆ ಮತ್ತಷ್ಟು ಉತ್ತಮ ಸೇವೆ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಒಂದೆಡೆ ಸಮರ್ಪಕ ಬಸ್‌ಗಳು ಇರಲಿಲ್ಲ, ಮತ್ತೂಂದೆಡೆ 2016ರಿಂದ ಒಂದೇ ಒಂದು ನೇಮಕಾತಿಯಾಗದೆ ಸಿಬಂದಿಯೂ ಇರಲಿಲ್ಲ. ಈ ಮಧ್ಯೆ ಸಾಲದ ಹೊರೆ ನಮ್ಮ ಮೇಲಿತ್ತು. ಇಂತಹ ಸಂದರ್ಭದಲ್ಲಿ “ಶಕ್ತಿ’ ಯೋಜನೆ ಜಾರಿಗೊಳಿಸಲಾಗಿತ್ತು. ಆ ಎಲ್ಲ ಸವಾಲುಗಳನ್ನು ಮೀರಿ ಯೋಜನೆ ಯಶಸ್ವಿಯಾಗಿದೆ. ನೇಮಕಾತಿ ಪ್ರಕ್ರಿಯೆ ಜತೆಗೆ ಹೊಸ ಬಸ್‌ಗಳನ್ನೂ ರಸ್ತೆಗಿಳಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಇನ್ನಷ್ಟು ಬೆಂಬಲ ನೀಡಿದರೆ, ಪುರುಷ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.

ಚಿನ್ನದ ಪದಕ ಪ್ರದಾನ
ಕಳೆದ 15 ವರ್ಷಗಳಲ್ಲಿ ಅಪಘಾತರಹಿತ ಬಸ್‌ ಚಾಲನೆ ಮಾಡಿದ 83 ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಅಲ್ಲದೆ “ಶಕ್ತಿ’ ಯೋಜನೆ ಜಾರಿಯಾದ ಮೊದಲ ದಿನ ಪೂಜೆ ಮಾಡಿ, ನಮಸ್ಕರಿಸಿ ಬಸ್‌ ಏರಿದ್ದ ಸಂಗೊಳ್ಳಿಯ ನಿಂಗವ್ವ ಸಿಂಗಾಡಿ ಅವರನ್ನು ಅಭಿನಂದಿಸಲಾಯಿತು.
ಸಾರಿಗೆ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಕಾಂಗ್ರೆಸ್‌ ಯಾವಾಗಲೂ ಮಹಿಳೆಯರ ದನಿಯಾಗಿದೆ. ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ ಸಹಿತ ಈ ಹಿಂದೆ ಅಧಿಕಾರಕ್ಕೆ ಬಂದಾಗಲೂ ಅನೇಕ ಪೂರಕ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಾರಿಯೂ ಗ್ಯಾರಂಟಿಗಳ ಮೂಲಕ ಮಹಿಳೆಯರ ಸಬಲೀಕರಣ ಮಾಡುತ್ತಿದೆ. ನೂರು ಕೋಟಿಗೂ ಮಹಿಳೆಯರು ಲಕ್ಷಾಂತರ ಕಿ.ಮೀ. ಪ್ರಯಾಣಿಸಿದ್ದಾರೆ. ಈ ಯೋಜನೆಗೆ ಮುಖ್ಯಮಂತ್ರಿಗಳು ಇನ್ನಷ್ಟು ಶಕ್ತಿ ತುಂಬುವ ಮೂಲಕ ಉತ್ತೇಜನ ನೀಡಬೇಕು.
-ಡಾ| ಜಿ.ಪರಮೇಶ್ವರ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next