ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದ ಮೈತ್ರಿ ಸರ್ಕಾರ ಪತನಕ್ಕೆ ಕೈ ಹಾಕುತ್ತಿಲ್ಲ. ಯಾರ ರಾಜೀನಾಮೆ ಕೊಡಿಸೋಕೂ ಹೋಗಿಲ್ಲ. ನಮ್ಮ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸವನ್ನು ಅವರು ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಮೈತ್ರಿ ಸರ್ಕಾರವನ್ನು ಬೀಳಿಸುವ ಅಧಿಕಾರ ರಾಜ್ಯ ಬಿಜೆಪಿ ನಾಯಕರ ಕೈಯಲ್ಲಿಲ್ಲ. ಅದೇನಿದ್ದರೂ ಮೋದಿ, ಅಮಿತ್ ಶಾ ಅವರ ಕೈಯಲ್ಲಿದೆ. ಬಿಜೆಪಿಯವರು “ಆಪರೇಷನ್ ಕಮಲ’ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿರುತ್ತದೆ ಎಂದರು.
“ಮೋದಿ ಹಾಗೂ ಅಮಿತ್ ಶಾ ಅವರು ಬಜೆಟ್ ಹಾಗೂ ಅಧಿವೇಶನದತ್ತ ಗಮನ ಹರಿಸಿದ್ದಾರೆ. ಕಾಶ್ಮೀರ ಸಮಸ್ಯೆ, ಅಮೆರಿಕ, ಚೀನಾ ದೇಶಗಳ ಜತೆ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ. ಹಾಗಾಗಿ ಅವರಿಬ್ಬರೂ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿಲ್ಲ’ ಎಂದರು.
ಜೆಡಿಎಸ್ ಶಾಸಕರೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ ಅವರು, “ಜೆಡಿಎಸ್‌ನಲ್ಲಿ ಯಾರೂ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್‌ನಲ್ಲಿ ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಹೊಸದಲ್ಲ. ಅವರು ರಾಜೀನಾಮೆ ನೀಡಿದರೆ, ಅದು ಅಂಗೀಕಾರವಾಗುತ್ತಾ?. ಅವರು ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರಾ ಎಂದು ಪ್ರಶ್ನಿಸಿದರು.
“ಆನಂದ್ ಸಿಂಗ್ ಅವರ ಕ್ಷೇತ್ರದಲ್ಲಿ ಏನೋ ಸಮಸ್ಯೆ ಇದೆ. ಜತೆಗೆ, ವೈಯಕ್ತಿಕ ಕಾರಣವೂ ಇರಬಹುದು. ಅದಕ್ಕೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಈ ಎರಡೂ ರಾಜೀನಾಮೆಗಳು ಅಂಗೀಕಾರವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
ನಾನು ಮಾರಾಟದ ವಸ್ತುವಲ್ಲ. ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ. ಜತೆಗೆ ನಾನು ಅತೃಪ್ತ ಶಾಸಕನೂ ಅಲ್ಲ. ನನ್ನ ಪಕ್ಷದ ನಡೆ ಬಗ್ಗೆ ಅಸಮಾಧಾನವಿದೆ ನಿಜ. ಏನೆ ಸಮಸ್ಯೆಗಳಿದ್ದರೂ ಪಕ್ಷದ ಮುಖಂಡರ ಜತೆ ಕುಳಿತು ಬಗೆಹರಿಸಿಕೊಳ್ಳುತ್ತೇನೆ.
-ತನ್ವೀರ್ ಸೇಠ್, ಶಾಸಕ