ನವದೆಹಲಿ: ಕಳೆದ ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಒಂದು ಲಕ್ಷ ಕೋಟಿಗಿಂತ ಕಡಿಮೆ ಸರಕು ಮತ್ತು ಸೇವಾ ತೆರಿಗೆ ಹಣ ಸಂಗ್ರಹವಾಗಿರುವುದಾಗಿ ಮಂಗಳವಾರ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಚಿತ್ರದುರ್ಗ: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಪಿಡಿಒ
ಜೂನ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ ಟಿ( ಸರಕು ಮತ್ತು ಸೇವಾ ತೆರಿಗೆ) ಆದಾಯ 92,849 ಕೋಟಿ ರೂಪಾಯಿ. ಇದರಲ್ಲಿ ಸಿಜಿಎಸ್ ಟಿ(ಕೇಂದ್ರ ಸರ್ಕಾರ ಸಂಗ್ರಹಿಸಿದ ಆದಾಯ) 16,424 ಕೋಟಿ, ಎಸ್ ಜಿಎಸ್ ಟಿ (ರಾಜ್ಯ ಸರ್ಕಾರದ ಆದಾಯ) 20,397 ಕೋಟಿ, ಐಜಿಎಸ್ ಟಿ 49,079 ಕೋಟಿ ಹಾಗೂ ಸರಕು ಆಮದಿನಿಂದ ಸಂಗ್ರಹಿಸಿದ 25,762 ಕೋಟಿ ರೂಪಾಯಿ ಸೇರಿದೆ. ಸರಕು ಆಮದಿನಿಂದ ಸಂಗ್ರಹಿಸಿದ 809 ಕೋಟಿ ಸೇರಿದಂತೆ ಒಟ್ಟು 6,949 ರೂಪಾಯಿ ಸೆಸ್ ಸಂಗ್ರಹವಾಗಿದೆ ಎಂದು ವರದಿ ವಿವರಿಸಿದೆ.
ಮೇಲಿನ ಅಂಕಿಅಂಶವು 2021ರ ಜೂನ್ 5ರಿಂದ ಜುಲೈ 5ರ ನಡುವಿನ ದೇಶೀಯ ವಹಿವಾಟಿನ ಜಿಎಸ್ ಟಿ ಸಂಗ್ರಹವನ್ನು ಒಳಗೊಂಡಿದೆ. ಅಷ್ಟೇ ಅಲ್ಲ ತೆರಿಗೆ ಪಾವತಿದಾರರಿಗೂ ಕೂಡಾ ಹಲವಾರು ವಿನಾಯ್ತಿಯ ನಿರ್ಧಾರಗಳನ್ನು ಘೋಷಿಸಲಾಗಿತ್ತು.
ಕಳೆದ ಎಂಟು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿಗಿಂತ ಕಡಿಮೆ ಪ್ರಮಾಣದಲ್ಲಿ ಜಿಎಸ್ ಟಿ ಸಂಗ್ರಹವಾಗಿದೆ. ಮೇ ತಿಂಗಳಿನಲ್ಲಿ 1.02 ಲಕ್ಷ ಕೋಟಿ ಜಿಎಸ್ ಟಿ ಆದಾಯ ಸಂಗ್ರಹವಾಗಿತ್ತು. ಜೂನ್ ತಿಂಗಳಿನಲ್ಲಿ ಒಂದು ಲಕ್ಷ ಕೋಟಿಗಿಂತ ಕಡಿಮೆ ಜಿಎಸ್ ಟಿ ಸಂಗ್ರಹವಾಗಿದೆ ಎಂದು ವರದಿ ತಿಳಿಸಿದೆ.