Advertisement
ಈ ನಿಟ್ಟಿನಲ್ಲಿ ‘ಉದಯವಾಣಿ’ ನಡೆಸಿದ ವಿಶೇಷ ಸಂದರ್ಶನದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ಸೆಂಟ್ರಲ್ ಎಕ್ಸೈಜ್ ಆ್ಯಂಡ್ ಸರ್ವಿಸ್ ಟ್ಯಾಕ್ಸ್ ಕಮಿಷನರೆಟ್‌ನ (ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ) ಆಯುಕ್ತ ಡಾ| ಎಂ. ಸುಬ್ರಹ್ಮಣ್ಯಂ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ವಾಣಿಜ್ಯ ಮತ್ತು ಉದ್ದಿಮೆ ಸಮುದಾಯಕ್ಕೆ ಹಾಗೂ ಗ್ರಾಹಕ ಸಮುದಾಯಕ್ಕೆ ಇದೊಂದು ಮಹತ್ತರ ಅವಕಾಶ. ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಏಕ ತೆರಿಗೆಯ ಹೊಸ ಪರಿಕಲ್ಪನೆಯೊಂದರ ಅನುಷ್ಠಾನವನ್ನು ಇಡೀ ವಿಶ್ವವೇ ಕೌತುಕದಿಂದ ನೋಡುತ್ತಿದೆ. ಈ ತೆರಿಗೆ ವ್ಯವಸ್ಥೆಯ ಲಾಭ ಕೆಲವೇ ಸಮಯದಲ್ಲಿ ಗೋಚರಿಸಲಿದೆ ಎನ್ನುತ್ತಾರೆ ಅವರು.
– ಜಿಎಸ್‌ಟಿ ಎಂದರೆ ಗೂಡ್ಸ್ ಆ್ಯಂಡ್ ಸರ್ವಿಸ್ ಟ್ಯಾಕ್ಸ್ . ಅಂದರೆ ಸರಕು ಮತ್ತು ಸೇವಾ ತೆರಿಗೆ. ಇದನ್ನು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಬಹುದಾದರೆ ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್ (ಉತ್ತಮ ಮತ್ತು ಸರಳ ತೆರಿಗೆ ಪದ್ಧತಿ). ಇದೊಂದು ಸಮರ್ಪಕ ಆರ್ಥಿಕ ಏಕೀಕರಣ. ಕೇಂದ್ರ ಮತ್ತು ರಾಜ್ಯಗಳ ತೆರಿಗೆಗಳು ಸೇರಿದಂತೆ ಮೊದಲು ಹಲವಾರು ತೆರಿಗೆಗಳನ್ನು ಪಾವತಿಸಬೇಕಾಗಿತ್ತು. ಜಿಎಸ್‌ಟಿ ಒಂದು ರಾಷ್ಟ್ರ; ಒಂದು ತೆರಿಗೆ ಎಂಬ ಪರಿಕಲ್ಪನೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಏಕ ತೆರಿಗೆ ಜಾರಿಗೆ ಬಂದಾಗ ಸರಕುಗಳು ಅಗ್ಗವಾಗುತ್ತವೆ. ಇದರ ನೇರ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗುತ್ತದೆ. ಜಿಎಸ್‌ಟಿ ಜಾರಿಯಲ್ಲಿ ಇಲಾಖೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿತ್ತು?
– ಕಳೆದ 6 ತಿಂಗಳುಗಳಿಂದ ಇಲಾಖೆಯ ಅಧಿ ಕಾರಿಗಳಿಗೆ ಜಿಎಸ್‌ಟಿ ಜಾರಿ ಬಗ್ಗೆ ನಿರಂತರ ತರಬೇತಿಗಳನ್ನು ಏರ್ಪಡಿಸಿಕೊಂಡು ಬಂದಿದೆ. ನ್ಯಾಶನಲ್ ಅಕಾಡೆಮಿ ಆಫ್ ಕಸ್ಟಮ್ಸ್ ಆ್ಯಂಡ್ ಇನ್‌ಡೈರೆಕ್ಟ್ ಟ್ಯಾಕ್ಸ್‌ನ ವರಿಷ್ಠ ತರಬೇತುದಾರರ ತಂಡದಿಂದ ತರಬೇತು ಪಡೆದ ಅಧಿಕಾರಿಗಳು ಕೆಳಗಿನ ಹಂತದ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ. ಇದರ ಜತೆಗೆ ಜನರಿಗೆ ಹೊಸ ತೆರಿಗೆ ಪದ್ಧತಿಯ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಮಂಗಳೂರು ವಿಭಾಗ ವ್ಯಾಪ್ತಿಯ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಾರಿಗಳಿಗೆ ಮತ್ತು ಉದ್ದಿಮೆದಾರರಿಗೆ ಮಾಹಿತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು 4,100 ಮಂದಿ ಭಾಗವಹಿಸಿದ್ದರು. ಮಂಗಳೂರಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
Related Articles
– ಜಿಎಸ್‌ಟಿಗೆ ಪೂರಕವಾಗಿ ಮೂರು ಜಿಲ್ಲೆಗಳಲ್ಲಿ ಇಲಾಖೆಯ ಡಿವಿಜನ್ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಪಾಂಡೇಶ್ವರ, ಪಣಂಬೂರು, ಕುಳಾಯಿ, ಪಡೀಲ್, ಕದ್ರಿ ಮುಂತಾದೆಡೆಗಳಲ್ಲಿ ಹೊಸ ರೇಂಜ್ ಕಚೇರಿಗಳು ಇವೆ. ವಿವಿಧೆಡೆಗಳಲ್ಲಿ ಸೇವಾ ಕೇಂದ್ರ, ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಯಾರಿಗಾದರೂ ಸಂದೇಹ, ಅನುಮಾನಗಳಿದ್ದರೆ ಅಥವಾ ನೆರವು ಬೇಕಿದ್ದರೆ ಇಲ್ಲಿಗೆ ಸಂಪರ್ಕಿಸಿ ಪಡೆಯಬಹುದು. ಇದಲ್ಲದೆ ಅವಶ್ಯ ಬಿದ್ದರೆ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ತಾಂತ್ರಿಕ ಸಂದೇಹಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ವಾಣಿಜ್ಯ, ಉದ್ದಿಮೆ ಸಮುದಾಯ ತಮ್ಮ ಯಾವುದೇ ಸಂದೇಹ, ಅನುಮಾನಗಳನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು.
Advertisement
ವ್ಯಾಪಾರಿ, ಉದ್ದಿಮೆದಾರ ಯಾವ ರೀತಿ ಲೆಡ್ಜರ್ ನಿರ್ವಹಿಸಬೇಕು?– ವಿವರ (ರಿಟರ್ನ್) ಸಲ್ಲಿಕೆ ಸರಳವಾಗಿರುತ್ತದೆ. ಕಂಪ್ಯೂಟರ್‌ನಲ್ಲಿ ಎಕ್ಸೆಲ್ ಶೀಟ್‌ನಲ್ಲಿ ದಿನದ ವ್ಯವಹಾರ ನಮೂದಿಸಬೇಕು. ಇದರಲ್ಲಿ ಬಿಸಿನೆಸ್ ಟು ಬಿಸಿನೆಸ್ ಹಾಗೂ ಗ್ರಾಹಕರ ಬಿಲ್ ಎಂಬ ಎರಡು ವಿಭಾಗಗಳಿವೆ. ಬಿಸಿನೆಸ್ ಟು ಬಿಸಿನೆಸ್‌ನಲ್ಲಿ ಕ್ರೆಡಿಟ್ ಇರುತ್ತದೆ. ಆದುದರಿಂದ ಪ್ರತಿಯೊಂದು ವ್ಯವಹಾರದ ಬಿಲ್‌ನ ವಿವರ ನಮೂದಿಸಬೇಕು. ಉಳಿದಂತೆ ಗ್ರಾಹಕರೊಂದಿಗೆ ನಡೆಸುವ ವ್ಯವಹಾರಗಳ ವಿವರವನ್ನು ಒಟ್ಟಾಗಿ ದಿನದ ಕೊನೆಗೆ ನಮೂದಿಸಿ ಅಪ್‌ಲೋಡ್ ಮಾಡಬೇಕು ಮತ್ತು ರಿಟರ್ನ್ಸ್ ಅನ್ನು ಮುಂದಿನ ತಿಂಗಳ 10ನೇ ತಾರೀಕಿನೊಳಗೆ ಸಲ್ಲಿಸಬೇಕು. ಜುಲೈ ತಿಂಗಳಿನಿಂದ ಹೊಸ ಬಿಲ್ ಬುಕ್ ಇರುತ್ತದೆ. ಇದರಲ್ಲಿ ಈಗಾಗಲೇ ವ್ಯಾಪಾರಿಗಳಿಗೆ ನೀಡಲಾಗಿರುವ ಜಿಎಸ್‌ಟಿ ಇನ್ ಕೋಡ್ ನಮೂದಿಸಬೇಕು. ರಿಟರ್ನ್ಸ್ನಲ್ಲಿ ಕೇಂದ್ರ ಜಿಎಸ್‌ಟಿ ಮತ್ತು ರಾಜ್ಯ ಜಿಎಸ್‌ಟಿನಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು. ಸಂಗ್ರಹ ತೆರಿಗೆ ಶೇ. 50ರಷ್ಟು ಕೇಂದ್ರ ಜಿಎಸ್‌ಟಿಗೆ ಹಾಗೂ ಶೇ. 50ರಷ್ಟು ರಾಜ್ಯ ಜಿಎಸ್‌ಟಿ ಖಾತೆಗೆ ಹೋಗುತ್ತದೆ. ಉದಾಹರಣೆಗೆ 100 ರೂ. ತೆರಿಗೆ ಸಂಗ್ರಹವಾದರೆ ಇದರಲ್ಲಿ 50 ರೂ. ಕೇಂದ್ರ ಹಾಗೂ 50 ರೂ. ರಾಜ್ಯ ಖಾತೆಗೆ ಹೋಗುತ್ತದೆ. ಕಂಪ್ಯೂಟರ್ ಬಳಕೆ ಮತ್ತು ಅರಿವು ಪ್ರಮಾಣ ಕಡಿಮೆ ಇರುವಾಗ ಸಮಸ್ಯೆಗಳಾಗುವುದಿಲ್ಲವೆ?
– ಆರಂಭದಲ್ಲಿ ಈ ರೀತಿಯ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಇರಬಹುದು. ಆದರೆ ಇದು ಅಲ್ಪಕಾಲಿಕವಾದುದು. ಈ ಹಂತದಲ್ಲಿ ನೆರವಾಗಲು ಜಿಎಸ್‌ಟಿ ಸುವಿಧಾ ಎಂಬ ವ್ಯವಸ್ಥೆ ಇದೆ. ಅವರು ಆವಶ್ಯಕ ನೆರವು ಒದಗಿಸುತ್ತಾರೆ. ಇದಲ್ಲದೆ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಅತ್ತಾವರ ಕಚೇರಿಯಲ್ಲಿ, ಲಾಲ್‌ಬಾಗ್‌ನಲ್ಲಿ ಸೇವಾ ಕೇಂದ್ರಗಳಿವೆ. ತೆರಿಗೆ ಪ್ರಮಾಣ ಹೆಚ್ಚಾಗುತ್ತದೆ ಎಂಬ ಆತಂಕ ಸರಿಯೇ?
– ಈ ಆತಂಕ ಬೇಕಾಗಿಲ್ಲ. ಮೊದಲು ಒಂದು ವಸ್ತುವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿವಿಧ ರೀತಿಯ ತೆರಿಗೆಗಳು ಜಾರಿಯಲ್ಲಿದ್ದವು. ಇದನ್ನು ಸರಿಯಾಗಿ ಲೆಕ್ಕಚಾರ ಮಾಡಿದರೆ ತೆರಿಗೆ ಪ್ರಮಾಣ ಶೇ. 30ಕ್ಕಿಂತ ಜಾಸ್ತಿ ಆಗುತ್ತದೆ. ಪ್ರಸ್ತುತ ಜಿಎಸ್‌ಟಿ ವ್ಯವಸ್ಥೆಯಲ್ಲಿ ಶೇ. 18 ಜಿಎಸ್‌ಟಿ ಸ್ಲ್ಯಾಬ್‌ನ ಕೆಳಗೆ ಶೇ. 81ರಷ್ಟು ವಸ್ತುಗಳು ಬರುತ್ತವೆ. ಕೆಲವು ವಸ್ತುಗಳಿಗೆ ಜಿಎಸ್‌ಟಿ ಶೂನ್ಯ. ಇನ್ನು ಕೆಲವು ವಸ್ತುಗಳಿಗೆ ಶೇ 5, ಶೇ. 12, ಶೇ. 28 ತೆರಿಗೆ ಪ್ರಮಾಣ ಇದೆ. ಹಿಂದಿನ ತೆರಿಗೆ ಪ್ರಮಾಣಗಳಿಗೆ ಹೋಲಿಸಿದರೆ ಜಿಎಸ್‌ಟಿ ಪ್ರಮಾಣ ಕಡಿಮೆ ಇದೆ. ಕೆಲವು ಲಕ್ಸುರಿ ಐಟಂಗಳಿಗೆ ಶೇ. 28ರಷ್ಟು ಮಾತ್ರ ಸೀಮಿತವಾಗಿರುತ್ತದೆ. ಸಣ್ಣ ವ್ಯಾಪಾರಿಗಳಿಗೆ, ಉದ್ದಿಮೆದಾರರಿಗೆ ಅನನುಕೂಲವೇ?
– ಸಣ್ಣ ವ್ಯಾಪಾರಿಗಳಿಗೆ, ಉದ್ದಿಮೆದಾರರಿಗೆ ಇದು ಅನುಕೂಲಕಾರಿ. ಜಿಎಸ್‌ಟಿಯಲ್ಲಿ 20 ಲಕ್ಷ ರೂ.ವರೆಗೆ ತೆರಿಗೆಯಿಂದ ವಿನಾಯಿತಿ ಇದೆ. ಅವರು ಜಿಎಸ್‌ಟಿಯಲ್ಲಿ ನೋಂದಣಿ ಮಾಡಬೇಕಾಗಿಲ್ಲ. ವ್ಯವಹಾರದ ದಾಖಲೆಗಳನ್ನು ಇರಿಸಿಕೊಂಡರೆ ಸಾಕು. ಇದರಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಯಾವುದೇ ಕಿರುಕುಳಕ್ಕೆ ಅವಕಾಶವಿರುವುದಿಲ್ಲ. 20 ಲಕ್ಷ ರೂ.ಗಿಂತ ಜಾಸ್ತಿ ವ್ಯವಹಾರವಿದ್ದರೆ ನೋಂದಣಿ ಮಾಡಿಸಬೇಕು. ಜಿಎಸ್‌ಟಿಗೆ ಒಳಪಡುವವರು ಪ್ರತಿ ತಿಂಗಳು 10 ತಾರೀಕಿನೊಳಗೆ ಹಿಂದಿನ ತಿಂಗಳ ವ್ಯವಹಾರ ರಿಟರ್ನ್ ಸಲ್ಲಿಕೆ ಮಾಡಬೇಕು. ಸಂಯೋಜಿತ ತೆರಿಗೆ ಸ್ಕೀಂನಲ್ಲಿ 75 ಲಕ್ಷ ರೂ. ಕೆಳಗಿನ ಉತ್ಪಾದಕರು, ವ್ಯಾಪಾರಿಗಳು, ಮಾರಾಟಗಾರರು ಹಾಗೂ ರೆಸ್ಟೋರೆಂಟ್‌ಗಳಿಗೆ ಕೆಲವು ಅವಕಾಶಗಳಿವೆ. ರಿಟರ್ನ್ಸ್ ಅನ್ನು 3 ತಿಂಗಳಿ ಗೊಮ್ಮೆ ಸಲ್ಲಿಸಬಹುದಾಗಿದೆ. ಪ್ರತಿಯೋರ್ವ ವ್ಯಾಪಾರಿ ಕೂಡ ಪ್ರತಿಯೊಂದು ವಸ್ತುವಿನ ಮೇಲಿನ ಜಿಎಸ್‌ಟಿ ದರದ ಬಗ್ಗೆ ಮಾಹಿತಿ ಹೊಂದುವುದು ಅವಶ್ಯ. ಬಿಲ್ ಮಾಡುವಾಗ ಅದರಂತೆ ವಸ್ತುವಿನ ಮೇಲೆ ಜಿಎಸ್‌ಟಿ ವಿಧಿಸಬೇಕು. – ವಿಶೇಷ ಸಂದರ್ಶನ: ಕೇಶವ ಕುಂದರ್