ಬೆಂಗಳೂರು: ಕೇಂದ್ರ ಸರ್ಕಾರ ಕಳೆದ 4 ತಿಂಗಳ ಜಿಎಸ್‌ಟಿ ಪರಿಹಾರ 13,764 ಕೋಟಿ ರೂ.ಗಳನ್ನು ಕೂಡಲೇ ರಾಜ್ಯಕ್ಕೆ ನೀಡಬೇಕು ಎಂದು ರಾಜ್ಯ ಸರ್ಕಾರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯಿಸಿದೆ.
ಗುರುವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಪಾಲ್ಗೊಂಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಒತ್ತಾಯ ಮಾಡಿದ್ದಾರೆ. ಕೋವಿಡ್-19 ಹಾವಳಿ ನಡುವೆಯೂ ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇ.71.61 ಗುರಿ ಸಾಧನೆಯಾಗಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಉತ್ತಮವಾಗಿದೆ. ಆದರೆ ಕಳೆದ 4 ತಿಂಗಳಿನಿಂದ ಒಟ್ಟು 13,764 ಕೋಟಿ ರೂ. ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಬಿಡುಗಡೆಯಾಗಬೇಕಿದೆ. ಸಂವಿಧಾನದ 101ರ ತಿದ್ದುಪಡಿ ಸೆಕ್ಷನ್ 18ರಲ್ಲಿ ಜಿಎಸ್‌ಟಿ ಕೌನ್ಸಿಲ್ ರಾಜ್ಯಗಳಿಗೆ ತೆರಿಗೆ ಸಂಗ್ರಹ ಕೊರತೆ ನಿವಾರಿಸುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಅದರಂತೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
ತೆರಿಗೆ ಪರಿಹಾರಕ್ಕಾಗಿ ವಿಧಿಸುವ ಸೆಸ್ ಕೇಂದ್ರ ಸರ್ಕಾರದ ಪರಿಹಾರ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಇದರಿಂದ ರಾಜ್ಯಗಳು ಸಾಲ ಪಡೆಯಲು ಕಷ್ಟವಾಗುತ್ತದೆ. ಈ ಸಾಲ ಮರು ಪಾವತಿಸಲು ಕೇಂದ್ರ ಸರ್ಕಾರ ವಿಶೇಷ ತೆರಿಗೆ ವಿಧಿಸುವ ಅಧಿಕಾರವಿದ್ದು, 2023ರ ನಂತರ ಅದರ ಅವಧಿ ವಿಸ್ತರಿಸಲು ಅಧಿಕಾರವಿದೆ. ಹಾಗಾಗಿ ಕೇಂದ್ರ ಸರ್ಕಾರ ಸಾಲ ಪಡೆದು ತೆರಿಗೆ ಪರಿಹಾರ ಕೊಡುವುದು ಸೂಕ್ತ ಎಂಬುದಾಗಿಯೂ ಅಭಿಪ್ರಾಯ ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಒಟ್ಟು ತೆರಿಗೆ ರಾಜಸ್ವದಲ್ಲಿ 1.80 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕೋವಿಡ್-19 ಮಹಾಮಾರಿ ಹಾಗೂ ಪ್ರವಾಹದಿಂದ ಇದರಲ್ಲಿ ಕೊರತೆಯಾಗುವ ಎಲ್ಲ ಸಾಧ್ಯತೆಯಿದ್ದು, ಇದರಿಂದ ರಾಜ್ಯ ಆರ್ಥಿಕ ಪ್ರಗತಿ ಕಷ್ಟ. ಕೋವಿಡ್-19 ಎದುರಿಸಲು ಹೆಚ್ಚುವರಿ ಹಣಕಾಸಿನ ಅಗತ್ಯವಿದೆ ಎಂಬುದನ್ನು ಕೌನ್ಸಿಲ್‌ನ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ. ಹೆಚ್ಚು ತೆರಿಗೆ ವಿಧಿಸಲು ಸಲಹೆ: ಐಷಾರಾಮಿ ವಸ್ತುಗಳ ಮೇಲೆ ಹಾಗೂ ತಂಬಾಕು, ಪಾನ್ ಮಸಾಲ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಸದ್ಯದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವುದು ಒಕ್ಕೂಟ ವ್ಯವಸ್ಥೆಯಲ್ಲಿ ಅನಿರ್ವಾಯ. ಹೀಗಾಗಿ ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಸಭೆಯಲ್ಲಿ ತಿಳಿಸಲಾಯಿತು ಎಂದು ತಿಳಿಸಿದ್ದಾರೆ.
ಸಭೆ ಅಂತ್ಯದಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಾತನಾಡಿದರು. ಕೇಂದ್ರ ರಾಜ್ಯಗಳಿಗೆ ಯಾವುದೇ ಹೊರೆ ಇಲ್ಲದೆ ಸಾಲ ಪಡೆಯುವ ವ್ಯವಸ್ಥೆ ಕಲ್ಪಿಸಲಿದೆ ಹಾಗೂ ಈ ಸಾಲವನ್ನು 3 ವರ್ಷ ಪರಿಹಾರ ಸೆಸ್ ವಿಸ್ತರಿಸುವ ಮುಖಾಂತರ ಸಾಲ ಮರುಪಾವತಿಸಲಾಗುತ್ತದೆ ಎಂದು ಪ್ರಸ್ತಾವನೆ ಮಂಡಿಸಿದರು. ಈ ಬಗ್ಗೆ ಒಪ್ಪಿಗೆ ಸೂಚಿಸಲು ರಾಜ್ಯಗಳಿಗೆ 7ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು ಎಂಬುದಾಗಿ ಬಸವರಾಜ ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.