Advertisement

ಜಿಎಸ್‌ಬಿ ಸೇವಾ ಮಂಡಲ ಸಯಾನ್‌: 64ನೇ  ಗಣೇಶೋತ್ಸವ ಪೂರ್ವಭಾವಿ ಸಭೆ

03:39 PM Aug 10, 2018 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ಇದರ 64 ನೇ ವಾರ್ಷಿಕ ಗಣೇಶೋತ್ಸವವು ಕಿಂಗ್‌ ಸರ್ಕಲ್‌ ಸುಕೃತೀಂದ್ರ ನಗರದಲ್ಲಿ ಸೆ. 13 ರಿಂದ ಸೆ. 17 ರವರೆಗೆ ಜರಗಲಿದ್ದು, ಇದರ ತೃತೀಯ ಪೂರ್ವಭಾವಿ ಸಭೆಯು ಆ. 4 ರಂದು ಸಂಜೆ ಸಯಾನ್‌ನಲ್ಲಿರುವ ಶ್ರೀ ಗುರು ಗಣೇಶ ಪ್ರಸಾದ ಸಭಾಗೃಹದಲ್ಲಿ ನಡೆಯಿತು.

Advertisement

ಆಯೋಜನಾ ಸಮಿತಿಯ ಸಹ ಸಂಚಾಲಕ ಜಿ. ಡಿ. ರಾವ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಕೇಶ್ವರ ಶ್ರೀ ಕಾಶೀಮಠದಲ್ಲಿದ ಮಾಧವೇಂದ್ರ ತೀರ್ಥ ಸ್ವಾಮೀಜಿ ಹರಿದ್ವಾರದಲ್ಲಿನ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ  ಹಾಗೂ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ವಂದಿಸಿದರು. ಬಳಿಕ ಕಳೆದ ವರ್ಷ ಗಣೇಶೋತ್ಸವ ಮೂರನೇ ಪೂರ್ವಭಾವಿ ಸಭೆಯ ದಿನದಿಂದ ಈವರೆಗಿನ ಕಾರ್ಯಕರ್ತರ ಪೂಜೆ, ಸೇವೆ ಇತ್ಯಾದಿ ಮೂಲಕ ಸಂಗ್ರಹಿಸಿದ ಗಳಿಕೆಯ ವಿವರ ಮತ್ತು ಪ್ರಸಕ್ತ ಸಭೆಯ ದಿನದವರೆಗಿನ ವಿವರ ನೀಡಿದರು.

ಗಣೇಶೋತ್ಸವದ ಪ್ರಧಾನ ಅರ್ಚಕ ವೇದಮೂರ್ತಿ ಕೃಷ್ಣ ಭಟ್‌ ಇವರು ಪ್ರಾರ್ಥನೆಗೈದರು. ಸೇವಾ ಮಂಡಳದ ಹಿರಿಯ ಸದಸ್ಯ ಸತೀಶ್‌ ರಾಮ ನಾಯಕ್‌ ಅವರು ಮಾತನಾಡಿ, ಗಣೇಶೋತ್ಸವ ಮಂಟಪದ ಕಾಮಗಾರಿಯ ವಿವರ ನೀಡಿ, ಗಣಪತಿಯ ವಿಸರ್ಜನ ಟ್ರಾಲಿಯನ್ನು ತಜ್ಞ ಎಂಜಿನೀಯರ್‌ಗಳಿಂದ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ವರ್ಷ ಸಮುದ್ರದಲ್ಲಿ ಟ್ರಾಲಿಯು ದೋಣಿಯಂತೆ ತೇಲಿ ಗಣಪತಿ ವಿಸರ್ಜನೆಯನ್ನು ಮಾಡಲಿದೆ ಎಂದು ನುಡಿದರು. ಸೇವಾ ಮಂಡಳದ ಮಾಜಿ ಅಧ್ಯಕ್ಷ ಆರ್‌. ಜಿ. ಭಟ್‌ ಅವರು ತನ್ನ ಅನಿಸಿಕೆಯಲ್ಲಿ ಗಣೇಶೋತ್ಸವ ಮಂಟಪದಲ್ಲಿ ವಿವಿಧ ರೀತಿಯ ಪ್ರಚಾರದ ಮೂಲಕ ಗಳಿಕೆಯನ್ನು ಹೆಚ್ಚು ಮಾಡಬಹುದು ಎಂದರು.

ಗುರುದತ್ತ್ ಪ್ರಭು ಅವರು ಮಾತನಾಡಿ, ಕಟ್ಟಡ ನಿರ್ಮಾಣ ವ್ಯವಹಾರವು ಕುಸಿತದ ಕಾರಣದಿಂದ ಇದರ ಉದ್ಯಮದವರಿಂದ ಗಳಿಕೆ ಸ್ವಲ್ಪ ಕಡಿಮೆಯಾಗಲು ಸಾಧ್ಯವಿದೆ. ಆದರೂ ತಾನು ತನ್ನ ಪರಿಚಯದವರಿಂದ ಆದಷ್ಟು ಹೆಚ್ಚು ಗಳಿಕೆಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯೆ ವಿಜಯ ಭಟ್‌ ಅವರು ಮೊಬೈಲ್‌ ಆ್ಯಪ್‌ ಮೂಲಕ ಧನ ಸಂಗ್ರಹ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಆಗಿರುವುದಾಗಿ ಹೇಳಿದರು. ಕಾರ್ಯಕರ್ತರಿಗೆ ಮೊಬೈಲ್‌ ಆ್ಯಪ್‌ನ ಬಗ್ಗೆ ಸಮಸ್ಯೆಯಿದ್ದರೆ ತಾನು ಸಹಕರಿಸುವುದಾಗಿ ತಿಳಿಸಿದರು.

ಸೇವಾ ಮಂಡಳದ ಉಪಾಧ್ಯಕ್ಷ ಯಶವಂತ್‌ ಕಾಮತ್‌ ಅವರು ಮಾತನಾಡಿ, ಈ ವರ್ಷದ ಗಣೇಶೋತ್ಸವದಲ್ಲಿ ನಮಗೆ ಬೇಕಾಗುವ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಈ ವರ್ಷ ಗಣೇಶೋತ್ಸವದ ಖರ್ಚು ಹೆಚ್ಚಲು ಸಾಧ್ಯವಿದೆ. ಆದರಿಂದ ಕಾರ್ಯಕರ್ತರು ಗಳಿಕೆಯನ್ನು ಹೆಚ್ಚು ಮಾಡಲು ವಿನಂತಿಸಿದರು. ಕೋಶಾಧಿಕಾರಿ ಕೃಷ್ಣ ಪೈ ಅವರು ತಮ್ಮ ಅನಿಸಿಕೆಯಲ್ಲಿ ಕಾರ್ಯಕರ್ತರು, ಸ್ವಯಂ ಸೇವಕರು ಧನ ಸಂಗ್ರಹ ಮಾಡಿದ ರಶೀದಿ ಪುಸ್ತಕಗಳನ್ನು ಕ್ಲಪ್ತ ಸಮಯದಲ್ಲಿ ಹಿಂದಿರುಗಿಸಿ ಸಹಕರಿಸಬೇಕು ಎಂದು ನುಡಿದರು.

Advertisement

ದಿಲೀಪ್‌ ಪೈ ಅವರು ಭದ್ರತೆಯ ಬಗ್ಗೆ ಮಾತನಾಡಿದರು. ಪ್ರಶಾಂತ್‌ ಮಲ್ಯ ಅವರು ಸ್ವಯಂ ಸೇವಕರು ತನ್ನ ವೈಕ್ತಿಕ ವಿವರ ನೀಡಿ ಆದಷ್ಟು ಬೇಗ ಪರಿಚಯ ಪತ್ರ ಪಡೆಯಲು ವಿನಂತಿಸಿದರು. ಮಂಡಳದ ಕೋಶಾಧಿಕಾರಿ ಕೃಷ್ಣ ಪೈ ವಂದಿಸಿದರು. ಮುಂದಿನ ಪೂರ್ವಭಾವಿ ಸಭೆಯು ಆ. 11 ರಂದು ಸಂಜೆ ಜಿಎಸ್‌ಬಿ ಸೇವಾ ಮಂಡಲ, ಶ್ರೀ ಗುರು ಗಣೇಶ ಪ್ರಸಾದ್‌ ಸಭಾಗೃಹ, ಸಯಾನ್‌ ಪೂರ್ವ ಇಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next