ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಅಂಧೇರಿ ವತಿಯಿಂದ 10ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ನ. 11 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಂಧೇರಿ ಪಶ್ಚಿಮದ ಅದಮಾರು ಮಠದಲ್ಲಿ ನಡೆಯಿತು.
ಹ್ಯಾಂಗ್ಯೂ ಐಸ್‌ಕ್ರೀಂ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರದೀಪ್ ಪಿ. ಪೈ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಸಮಾಜ ಪರ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ಪ್ರಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾರ್ಥನೆ, ಭಜನ ಕಾರ್ಯಕ್ರಮ ನಡೆಯಿತು.
ವಿವಿಧ ವಯೋಮಿತಿಗೆ ಅನುಗುಣವಾಗಿ ಸಮಾಜ ಬಾಂಧವರ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿ ಸಲಾಗಿತ್ತು. ರಶ್ಮೀ ಕಾಮತ್ ಮತ್ತು ಭಾರತಿ ಭಟ್ ಅವರು ಚಿತ್ರಕಲಾ ಸ್ಪರ್ಧೆಯನ್ನು ಸಂಯೋಜಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸದಸ್ಯ ಬಾಂಧವರಿಂದ, ಮಕ್ಕಳಿಂದ ವಿವಿಧ ವಿನೋದಾವಳಿಗಳು ಜರಗಿತು. ವಸುಧಾ ಪ್ರಭು ಮತ್ತು ಶೋಭಾ ಭಟ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಬೆಂಗಳೂರಿನ ಕಲಾವಿದರಾದ ಕೈಲಾಶ್ ಕುಲಕರ್ಣಿ ಅವರ ಹಾಡುಗಾರಿಕೆ ಜರಗಿತು. ಸಂಸ್ಥೆಯ ಕಾರ್ಯದರ್ಶಿ ಯು. ಪಿ. ಭಟ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ರಘುನಂದನ್ ಎನ್. ಕಾಮತ್ ಅವರು ಅತಿಥಿಗಳನ್ನು ಪರಿಚಯಿಸಿ ಮಾತನಾಡಿ, ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿ ಪ್ರದೀಪ್ ಪೈ ಅವರು ಮಾತನಾಡಿ, ಸಂಸ್ಥೆಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಉತ್ಸಾಹದಿಂದ ಪಾಲ್ಗೊಂಡಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಆರ್. ಜಿ. ಭಟ್ ಅವರು, ದಹಿಸರ್‌ನಲ್ಲಿ ನಡೆಯಲಿರುವ ಭಕ್ತಿ ಮತ್ತು ನಿಷ್ಠೆ ರ್ಯಾಲಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ನ. 19ರ ರ್ಯಾಲಿಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ್ಯಾಲಿಯ ಯಶಸ್ಸಿಗೆ ಸಹಕರಿಸಬೇಕು. ಕಾಶೀ ಮಠದ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಕ್ಕೆ ನಾವೆಲ್ಲರೂ ಭಾಗಿಗಳಾಗಬೇಕು ಎಂದು ಕರೆ ನೀಡಿದರು. ಸಂಚಾಲಕ ಕೆ. ಶ್ರೀನಿವಾಸ ಪ್ರಭು ಅವರು ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.