ಹೊಸದಿಲ್ಲಿ: ಬೆಳೆಯುತ್ತಿರುವ ಭಾರತವನ್ನು ಚೀನಾ ತನ್ನ “ಎದುರಾಳಿ’ ಎಂದು ಭಾವಿಸುತ್ತಿದ್ದು, ಅಮೆರಿಕ ಮತ್ತು ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗಿನ ಭಾರತದ ವ್ಯೂಹಾತ್ಮಕ ಸಹಭಾಗಿತ್ವವನ್ನು ಹತ್ತಿಕ್ಕಲು ಬಯಸುತ್ತದೆ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ವರದಿಯಲ್ಲಿ ಹೇಳಿದೆ.
70 ಪುಟಗಳ ವಿಸ್ತೃತ ವರದಿಯು, ಚೀನಾ ಇತರೆ ರಾಷ್ಟ್ರಗಳ ಭದ್ರತೆ, ಸ್ವಾಯತ್ತತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದೂ ಹೇಳಿದೆ. “”ಬೆಳೆಯುತ್ತಿರುವ ಭಾರತವನ್ನು ತನ್ನ ಎದುರಾಳಿ ಎಂದು ಭಾವಿಸುತ್ತಿರುವ ಚೀನಾ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಭಾರತವು ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗೆ ಹೊಂದಿರುವ ಬಾಂಧವ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ. ಇದೇ ವೇಳೆಯಲ್ಲೇ ಆಸಿಯಾನ್ ರಾಷ್ಟ್ರಗಳ ಸ್ವಾಯತ್ತತೆ ಮತ್ತು ಭದ್ರತೆಗೂ ಧಕ್ಕೆ ತರುತ್ತಿದೆ” ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.
ಇದನ್ನೂ ಓದಿ:ಡೋಕ್ಲಾಮ್ ಬಳಿ ಭೂತಾನ್ ನೆಲದಲ್ಲಿ ಹಳ್ಳಿ ನಿರ್ಮಿಸಿದ ಚೀನಾ! ಏನಿದು ಕೆಂಪು ಸೈನ್ಯದ ಹೊಸ ತಂತ್ರ
ಚೀನಾ ಅಮೆರಿಕದ ಶಕ್ತಿಯನ್ನೂ ಕುಂದಿಸಲು ಪ್ರಯತ್ನಿಸುತ್ತಿದ್ದು, ಅಮೆರಿಕದ ಮಿತ್ರ ರಾಷ್ಟ್ರಗಳಾದ ಜಪಾನ್, ದಕ್ಷಿಣಕೊರಿಯಾ, ಆಸ್ಟ್ರೇಲಿಯಾ, ಥಾಯ್ಲೆಂಡ್, ಫಿಲಿಪ್ಪೀನ್ಸ್ ಹಾಗೂ ಬೆಳೆಯುತ್ತಿರುವ ವ್ಯೂಹಾತ್ಮಕ ಪಾಲುದಾರರಾದ ಭಾರತ, ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ತೈವಾನ್ ಅನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅಮೆರಿಕ ಹೇಳಿದೆ.
ಗಡಿ ಭಾಗದಲ್ಲಿ ಹೆಚ್ಚಿದ ಚೀನಾ ಚಟುವಟಿಕೆ: ಗಡಿ ಭಾಗದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ತಗ್ಗುವುದು ಚೀನಾಕ್ಕೆ ಬೇಕಿಲ್ಲ ಎನ್ನುವಂಥ ಬೆಳವಣಿಗೆಗಳು ಕಾಣಿಸುತ್ತಿವೆ. ಕಳೆದ 30 ದಿನದಲ್ಲಿ ಚೀನಾ ಆಕ್ರಮಿತ ಅಕ್ಸಾಯ್ ಚಿನ್‌ನಲ್ಲಿ ಪಿಎಲ್‌ಎ ಪಡೆಗಳ ನಿಯೋಜನೆ, ರಸ್ತೆ ಅಭಿವೃದ್ಧಿ ಕಾರ್ಯ ಹೆಚ್ಚಿದೆ. ಭಾರತೀಯ ರಾಷ್ಟ್ರೀಯ ಭದ್ರತಾ ಪರಿಣತರ ಪ್ರಕಾರ, ಚೀನಾದ ಸೇನೆ ಅಕ್ಸಾಯ್ ಚಿನ್‌ನ ಡೆಪ್ಸಾಂಗ್ ಬಲ್ಜ್ ಪ್ರದೇಶ ಮತ್ತು ಡಿಬಿಒ ಸೆಕ್ಟರ್‌ನಲ್ಲಿ ವ್ಯೂಹಾತ್ಮಕ ರಸ್ತೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡಿದೆ. ಇದಷ್ಟೇ ಅಲ್ಲದೇ ಡಿಬಿಒ ಸೆಕ್ಟರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸುತ್ತಿದೆ.