Advertisement

ಗೇರುಬೀಜ ಹಾಡಿಯಲ್ಲಿ ಕೊರಗುತ್ತಿವೆ ಕುಟುಂಬಗಳು

01:15 PM Mar 08, 2018 | Harsha Rao |

ಕುಂದಾಪುರ: ಗೇರು ಹಾಡಿಯಲ್ಲಿ 12 ಅಡಿ ಗಿ10 ಅಡಿ ಅಳತೆಯ ಜೋಪಡಿ. ಅದರಲ್ಲಿ ಒಂದು ಸಂಸಾರ. ವಯಸ್ಸಿಗೆ ಬಂದ ಮಗಳನ್ನು ಆ ಜೋಪಡಿಯಲ್ಲಿ ಬಿಡಲಾಗದೆ ಬಂಧ‌ುಗಳ ಮನೆಯಲ್ಲಿ ನೆಲೆಯೂರಿದ ಕುಟುಂಬ. ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಮಾತಿನ ಮೇಲೆ ಭರವಸೆಯನ್ನೇ ಕಳೆದುಕೊಂಡ ಇವರು ಇರುವುದು ಹಟ್ಟಿಯಂಗಡಿ ಗ್ರಾ.ಪಂ. ವ್ಯಾಪ್ತಿಯ ಕನ್ಯಾನ ಗ್ರಾಮದ ಅಂಡಾರುಕಟ್ಟೆಯಲ್ಲಿ.

Advertisement

ಜಾಗವೂ ಇಲ್ಲ, ಮನೆಯೂ ಇಲ್ಲ
ಬಸವ ಬಾಬಿ ಹಾಗೂ ಶಶಿಕಲಾ ಪ್ರಶಾಂತ್‌ ಅವರಿಗೆ 40 ಸೆಂಟ್ಸ್‌ ಜಾಗ ನೀಡಲು ತಹಶೀಲ್ದಾರ್‌ ಸೂಚನೆಯಂತೆ 2015ರಲ್ಲಿ ಸರ್ವೆ ನಡೆಸಿ, ನಕ್ಷೆ ಯಾಗಿದೆ. ಇದೇ ಜಾಗದ ಉಳಿಕೆ ಭಾಗ ದೀಪಾ (1.2 ಎಕರೆ), ಶಾರದಾ (1 ಎ.), ಚಿಕ್ಕು (1 ಎ.) ಅವರಿಗೆ 8 ವರ್ಷಗಳ ಹಿಂದೆ ಮಂಜೂರಾಗಿದೆ. ಆದರೆ ಬಸವ ಹಾಗೂ ಶಶಿಕಲಾರಿಗೆ ಹಕ್ಕುಪತ್ರ ದೊರೆಯುತ್ತಿಲ್ಲ, ಆರ್‌ಟಿಸಿಯೂ ಇಲ್ಲ. ಹೀಗಾಗಿ ಸರಕಾರಿ ಮನೆ ಪಡೆಯಲು ಸಾಧ್ಯವಾಗಿಲ್ಲ. ಕೊರಗ ಕುಟುಂಬ ಗಳಿಗೆ ಹಕ್ಕುಪತ್ರ ಇಲ್ಲದಿದ್ದರೂ ಮನೆ ರಚನೆಗೆ ಅನುದಾನ ನೀಡಬಹುದು ಎಂದಿದ್ದರೂ ಇವರ ಪಾಲಿಗೆ ಅದು ಈಡೇರಿಲ್ಲ.

ಅತಂತ್ರ ಕುಟುಂಬ
ಬಸವ ಅವರದು ಕೂಲಿ ಕೆಲಸ. ಪೇಟೆ, ಶಾಲೆಗೆ ಹೋಗಬೇಕಾದರೆ ಬಸ್ಸಿಳಿದು 2 ಕಿ.ಮೀ. ನಡೆಯ ಬೇಕು. ಡಾಮರು ರಸ್ತೆಯಿದೆ, ಆದರೆ ಬಸ್ಸುಗಳ ಓಡಾಟವಿಲ್ಲ, ರಿಕ್ಷಾ, ಜೀಪು ಇಲ್ಲ. ಈ ಪುಟ್ಟ ಮನೆಯಲ್ಲಿ ಇರುಳು ಕಳೆಯಲಾಗದೆ ಸಂಬಂಧಿಕರ ಮನೆಯಲ್ಲಿ ಇದ್ದಾರೆ. “ನಮ್ಮದು ಸ್ವತಂತ್ರ ದೇಶದ ಅತಂತ್ರ ಸಂಸಾರ’ ಎಂದು ವಿಷಾದದಿಂದ ಹೇಳು ತ್ತಾರೆ ಬಸವ. ಸಮರ್ಪಕ ದಾಖಲೆ ಸಿಗದೆ, ಮನೆ ಕಟ್ಟಲಾಗದೆ ಪಕ್ಕದ ಜಾಗದ ಶಶಿಕಲಾ ಅವರು ಭಟ್ಕಳದಲ್ಲಿ ಭೂಮಾಲಕರ ಜಾಗದಲ್ಲಿ ವಾಸ್ತವ್ಯ ಹೂಡುವ ಸ್ಥಿತಿ ಬಂದಿದೆ. “ನಮಗೆಲ್ಲ ಜಾಗ ಬೇಕೆಂದರೂ ದೊರೆಯುವುದಿಲ್ಲ, ಕೆಲವರಿಗೆ ಬೇಡವೆಂದರೂ ಮನೆಗೆ ತಲುಪಿಸುತ್ತಾರೆ. ಇಂಥ ಅಧಿಕಾರಿಗಳಿಂದ ಪರಿಶಿಷ್ಟರ ಅಭಿವೃದ್ಧಿ ನಿರೀಕ್ಷಿಸ ಬಹುದೇ?’ ಎಂದು ಪ್ರಶ್ನಿಸುತ್ತಾರೆ ದೀಪಾ.

ಜೋಪಡಿಯಲ್ಲಿ 15 ಕುಟುಂಬಗಳು
ಕಾಳವಾರ ಪಂ.ನಲ್ಲಿ 1 ಎಕರೆ ಜಾಗವನ್ನು ಡಿಸಿ ಆಗಿದ್ದ ಡಾ| ವಿಶಾಲ್‌ ಕೊರಗರಿಗಾಗಿ ಮೀಸ ಲಿರಿಸಿದ್ದರು. ಅಲ್ಲಿ 15 ಕೊರಗ ಕುಟುಂಬಗಳು ಜೋಪಡಿ ವಾಸಿಗಳಾಗಿವೆ. ಆದರೆ ಈ ವರೆಗೂ ಹಕ್ಕುಪತ್ರ ಸಿಕ್ಕಿಲ್ಲ, ಮನೆ ಮಂಜೂರಾತಿ ಆಗಿಲ್ಲ.

ಧರಣಿ ನಡೆಸಿಯೂ ಪಹಣಿ ಇಲ್ಲ
ಕೊರಗರ ಸಮಸ್ಯೆ ನಿವಾರಣೆಗಾಗಿ ಉಡುಪಿ ಡಿಸಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆದಿತ್ತು. ಸಚಿವ ಪ್ರಮೋದ್‌ ಭೇಟಿ ನೀಡಿ ಭರವಸೆಗಳನ್ನು ನೀಡಿದ್ದರು. ಬ್ರಹ್ಮಾವರ, ಕಾರ್ಕಳ, ಉಡುಪಿ ಮೊದಲಾದೆಡೆ ಸಮಸ್ಯೆ ನಿವಾರಣೆಯೂ ಆಗಿದೆ. ಆದರೆ ಕುಂದಾಪುರದಲ್ಲಿ ಮಾತ್ರ ಸ್ಥಿತಿ ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ.

Advertisement

ಮನೆಗೆ ಅನುದಾನ ಬಂದಿಲ್ಲ
ಕುಂದಾಪುರದ ಅಂಬೇಡ್ಕರ್‌ ಕಾಲನಿಯಲ್ಲಿ 50-60 ವರ್ಷಗಳಿಂದ ವಾಸ್ತವ್ಯ ಇರುವ 22 ಕೊರಗ ಕುಟುಂಬಗಳಿವೆ. ಈ ಪೈಕಿ 16 ಮಂದಿಗೆ ಅಂಬೇಡ್ಕರ್‌ ನಿಗಮದಿಂದ ಮನೆ ಮಂಜೂರಾ ಗಿದೆ. ಮೊದಲ ಕಂತು ಅನುದಾನವಾಗಿ ತಲಾ 70 ಸಾವಿರ ರೂ. ಮಾತ್ರ ಬಂದಿದ್ದು, ಎರಡನೇ ಹಂತದ ಮನೆ ರಚನೆಯಾಗಿದ್ದರೂ ಅನುದಾನ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ನಾಗರಾಜ್‌. ಪುರಸಭಾ ಮುಖ್ಯಾಧಿಕಾರಿ ಉತ್ತಮ ಸ್ಪಂದನೆ ನೀಡಿದ್ದಾರೆ. ಇಲ್ಲಿ ಪ್ರಮೀಳಾ ಸುರೇಂದ್ರ, ಜ್ಯೋತಿ ದೀಪಕ್‌, ರಂಗ, ಕುಕ್ರ, ಅಕ್ಕಣ್ಣಿ, ಭಾಗೀರಥಿ, ಗೌರಿ ಮೊದಲಾದವರಿಗೆ ಹಕ್ಕುಪತ್ರ  ದೊರೆತಿಲ್ಲ. ಇತರರಿಗೆ ಹಕ್ಕುಪತ್ರ ಇದೆ; ಆರ್‌ಟಿಸಿ ಇಲ್ಲ. ಇನ್ನು 11 ಮನೆಯವರಿಗೆ ಜಾಗದ ಖಾತೆ ಬದಲಾವಣೆಯಾಗದೇ ಸ್ಥಳದ ದಾಖಲೆಯಿಲ್ಲ.

ಕುಂದಾಪುರ ತಾ.ನಲ್ಲಿ ಸುಮಾರು 3,500 ಮಂದಿ ಕೊರಗ ಜನಾಂಗದವರಿದ್ದು, ಸುಮಾರು 500 ಜನರಿಗೆ ಭೂಮಿಯ ಆವಶ್ಯಕತೆಯಿದೆ. ಬೈಕಾಡಿ, ಕೋಣಿ ಮೊದಲಾದೆಡೆ ಇಂದಿಗೂ ಇವರು ಒಕ್ಕಲುಗಳಾಗಿ ಬದುಕು ಸವೆಸುತ್ತಿದ್ದಾರೆ.

ಬಹಿಷ್ಕಾರಕ್ಕೆ ಸಿದ್ಧತೆ
ಕೊರಗರ ಸಮಸ್ಯೆ ನಿವಾರಣೆ ಆಗಿಲ್ಲ. ಸಚಿವರು, ಡಿಸಿ ಮಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮನೆ ನಿರ್ಮಾಣ ಅರ್ಧ ದಲ್ಲಿದೆ. ಅನುದಾನ ಇಲ್ಲ. ಹೀಗಾಗಿ ಈ ಬಾರಿ ಚುನಾವಣಾ ಬಹಿಷ್ಕಾರಕ್ಕೆ ಸಿದ್ಧರಾಗುತ್ತಿದ್ದೇವೆ.
– ನಾಗರಾಜ್‌, ಅಂಬೇಡ್ಕರ್‌ ಕಾಲನಿ ನಿವಾಸಿ

“ಗಮನ ಹರಿಸುತ್ತೇನೆ’
ಮನೆ ನಿರ್ಮಾಣದ ಎರಡನೇ ಕಂತು ಬಂದಿಲ್ಲ ಎನ್ನಲಾಗಿತ್ತು. ಈ ಬಗ್ಗೆ ಅಧಿಕಾರಿಗಳ ಬಳಿ ವಿಚಾರಿಸಿ ಮಾಹಿತಿ ಪಡೆಯುತ್ತೇನೆ. ಹಟ್ಟಿಯಂಗಡಿ ಸಮಸ್ಯೆ ಬಗ್ಗೆ ಗಮನಿಸುತ್ತೇನೆ.
 -ಪ್ರಿಯಾಂಕಾ ಮೇರಿ  ಫ್ರಾನ್ಸಿಸ್‌, ಜಿಲ್ಲಾಧಿಕಾರಿ, ಉಡುಪಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next