ಹುಣಸೂರು: ಇತ್ತೀಚೆಗೆ ಸಿರಿಧಾನ್ಯಗಳಿಗೆ ಎಲ್ಲಡೆ ಬೇಡಿಕೆಯಿದ್ದು, ಶೂನ್ಯ ಬಂಡವಾಳದಲ್ಲಿ ರೈತರು ಸಿರಿಧಾನ್ಯಗಳನ್ನು ಬೆಳೆಯಿರಿ ಎಂದು ತಾಪಂ ಸದಸ್ಯ ಗಣಪತಿರಾವ್ ಇಂಡೋಲ್ಕರ್ ಸೂಚಿಸಿದರು. ಕೃಷಿ ಇಲಾಖೆ ಮತ್ತು ಶಿವಮೊಗ್ಗ ಕೃಷಿ ವಿದ್ಯಾಲಯದ ಸಹಯೋಗದೊಂದಿಗೆ ಏರ್ಪಡಿಸಿದ ಶೂನ್ಯ ಬಂಡವಾಳ ಮತ್ತು ನೈಸರ್ಗಿಕ ಕೃಷಿ ಯೋಜನೆಯಲ್ಲಿ ಕಾರ್ಯಕ್ರಮದಡಿ ತಾಲೂಕಿನ ಗಾವಡಗೆರೆ ಹೊಬಳಿಯ ಹುಲ್ಯಾಳು ಗ್ರಾಮದ ರೈತ ಪಂಡಿತಾರಾಧ್ಯರ ಜಮೀನಿನಲ್ಲಿ ಬೆಳೆದಿರುವ ಸಿರಿಧಾನ್ಯ ಬೆಳೆಯ ನವಣೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಸಿರಿಧಾನ್ಯ ಬೆಳೆಗೆ ಬೇಡಿಕೆ ಹೆಚ್ಚಿದೆ. ರೈತರೇ ನೇರವಾಗಿ ಮಾರುಕಟ್ಟೆ ಕಲ್ಪಿಸಿಕೊಳ್ಳಬಹುದಾಗಿದೆ. ಸಿರಿಧಾನ್ಯ ಬೆಳೆದು ಆರ್ಥಿಕಾಭಿವೃದ್ಧಿ ಹೊಂದಬೇಕು. ಇದಕ್ಕಾಗಿ ಕೃಷಿ ಇಲಾಖೆಯಲ್ಲಿ ಪ್ರೋತ್ಸಾಹ ಧನ ದೊರೆಯಲಿದೆ ಎಂದರು. ಶಿವಮೊಗ್ಗ ಕೃಷಿ ವಿವಿಯ ಕೃಷಿ ವಿಜ್ಞಾನಿ ಡಾ.ಪ್ರಶಾಂತ್ ಮಾತನಾಡಿ, ದೇಶಿಯ ಹಸುಗಳ ಸಗಣಿ ಗಂಜಲ, ಬೆಲ್ಲ, ದ್ವಿದಳ ದಾನ್ಯಗಳ ಹಿಟ್ಟು ಬಳಸಿ, ಜೀವಾಮೃತ ಹಾಗೂ ಬೀಜಾಮೃತದಿಂದ ಮಣ್ಣಿನ ಫಲವತ್ತತೆ ಕಾಪಾಡಬಹುದು.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ರೈತರ ಜಮೀನಿನಲ್ಲಿ ಕೈಗೊಂಡರೆ, ಪ್ರತಿ ಹಂತದಲ್ಲೂ ರೈತರಿಗೆ ಇಲಾಖೆ ಸಹಯೋಗದೊಂದಿಗೆ ತರಬೇತಿ ಸಿಗಲಿದೆ. ರೈತರು ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮತ್ತೂಬ್ಬ ವಿಜ್ಞಾನಿ ಡಾ.ಅಜಯ್ ಮಾತನಾಡಿ, ನೈಸರ್ಗಿಕ ಕೃಷಿ ಯೋಜನೆ ತತ್ವಗಳು, ಕೀಟ ರೋಗಬಾಧೆ ನಿಯಂತ್ರಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಗಾವಡಗೆರೆ ಹೊಬಳಿ ಕೃಷಿ ಅಧಿಕಾರಿ ಮಧುಲತಾ, ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಗಾವಡಗೆರೆ ಗ್ರಾಪಂ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ವಿವಿ ಸಹ ಸಂಶೋಧಕಿ ಡಾ.ದಿವ್ಯಾ, ಕೃಷಿ ಇಲಾಖೆ ಅಧಿಕಾರಿಗಳಾದ ಶ್ರೀಧರ್, ಶಶಿಕುಮಾರ್, ತೊಟಗಾರಿಕೆ ವಿವಿ ವಿದ್ಯಾರ್ಥಿಗಳು, ರೈತರು ಹಾಗೂ ಅನುವುಗಾರರು ಹಾಜರಿದ್ದರು.
ಹೆಕ್ಟೇರ್‌ಗೆ 10 ಸಾವಿರ ಸಹಾಯಧನ: ರಾಗಿ ಹೊರತು ಪಡಿಸಿ, ಉಳಿದ ಸಿರಿಧಾನ್ಯ ಬೆಳೆಗಳ ಪ್ರೋತ್ಸಾಹಕ್ಕಾಗಿ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 10 ಸಾವಿರ, ಎಕರೆಗೆ 4 ಸಾವಿರ ರೂ. ಪ್ರೋತ್ಸಾಹ ಧನ ಸಿಗಲಿದೆ. ಈ ಬಾರಿ ತಾಲೂಕಿನಲ್ಲಿ 57 ಹೆಕ್ಟೇರ್ (141 ಎಕರೆ) ಪ್ರದೇಶದಲ್ಲಿ ಸಿರಿಧಾನ್ಯ ಬೆಳೆ ಬೆಳೆದಿದೆ. ಮುಂದಿನ ಸಾಲಿನಲ್ಲಿ ರೈತರು ಇತರೆ ಬೆಳೆಗಳೊಂದಿಗೆ ಸಿರಿಧಾನ್ಯ ಬೆಳೆಯಬೇಕು ಎಂದು ಕೃಷಿ ಅಧಿಕಾರಿ ಮಧುಲತಾ ಮನವಿ ಮಾಡಿದರು.