Advertisement

ಮೊಳಕೆಯೊಡೆಯದ ನೆಲಗಡಲೆ ಬೀಜ : ಆತಂಕದಲ್ಲಿ ಕರಾವಳಿ ಕೃಷಿಕರು

12:08 PM Jan 15, 2022 | Team Udayavani |

ತೆಕ್ಕಟ್ಟೆ : ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಬಾರಿ ಕರಾವಳಿ ರೈತರಿಗೆ ಕುಂದಾಪುರ ಕೃಷಿ ಇಲಾಖೆಯಿಂದ ಪೂರೈಕೆಯಾದ ನೆಲಗಡಲೆ ಬೀಜವನ್ನು ಈಗಾಗಲೇ ನೂರಾರು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದು, ಕೆಲವು ಪರಿಸರದಲ್ಲಿ ಬೀಜ ಬಿತ್ತನೆ ಮಾಡಿ ದಿನಗಳೇ ಕಳೆದರೂ ಮೊಳಕೆಯೊಡೆಯದಿರುವ ಬಗ್ಗೆ ಕರಾವಳಿಯ ನೆಲಗಡಲೆ ಕೃಷಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

ಕುಂದಾಪುರ ಕೃಷಿ ಇಲಾಖೆಯ ವತಿಯಿಂದ ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ರೈತರಿಗೆ ವಿತರಣೆಯಾದ ನೆಲಗಡಲೆ ಬೀಜವು ಇಲ್ಲಿನ ಕೊರವಡಿ, ಕೊಮೆ, ತೆಕ್ಕಟ್ಟೆ, ಗೋಪಾಡಿ, ಮಣೂರು ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ತಮ್ಮ ತಮ್ಮ ಕೃಷಿಭೂಮಿಯಲ್ಲಿ ಬಿತ್ತನೆ ಮಾಡಿದ್ದಾರೆ. ಬೀಜ ಬಿತ್ತನೆ ಮಾಡಿ ಹಲವು ದಿನಗಳಾದರೂ ಕೂಡ ಕೆಲವು ಬೀಜಗಳು ಮಾತ್ರ ಮೊಳಕೆ ಬಂದಿದೆ. ಕಳಪೆ ಗುಣಮಟ್ಟದ ಬೀಜದಿಂದಾಗಿ ಈ ಬಾರಿ ಸಮಸ್ಯೆಯಾಗಿರುವ ಬಗ್ಗೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರ ಸಂಘ ನಿ. ಇದರ ಅಧ್ಯಕ್ಷ ಶೇಖರ್‌ ಕಾಂಚನ್‌ ಕೊಮೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಣ್ಣಿನಲ್ಲಿ ಹೆಚ್ಚಿದ ತೇವಾಂಶ
ಈ ಬಾರಿ ಹಿಂಗಾರಿನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ನವೆಂಬರ್‌ ತಿಂಗಳ ಕೊನೆಯವರೆಗೂ ಮಳೆಯ ತೀವ್ರತೆ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಭೌಗೋಳಿಕವಾಗಿ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗದ ಪರಿಣಾಮ ಬಿತ್ತನೆ ಬೀಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಸೂಕ್ತ ಪರಿಹಾರ ಕಲ್ಪಿಸಿ
ಈ ಬಾರಿ ಕುಂದಾಪುರ ಕೃಷಿ ಇಲಾಖೆಯ ವತಿಯಿಂದ ವಿತರಿಸಲಾದ ನೆಲಗಡಲೆ ಬೀಜವನ್ನು ಸುಮಾರು 5 ಎಕರೆ ವಿಸ್ತೀರ್ಣದ ಕೃಷಿಭೂಮಿಯಲ್ಲಿ ಜನವರಿ 1 ರಂದು ಬಿತ್ತನೆ ಮಾಡಲಾಗಿದೆ. ಆದರೆ ಬೀಜ ಬಿತ್ತನೆ ಮಾಡಿ ದಿನಗಳೇ ಕಳೆದರೂ ಕೂಡ ಮೊಳಕೆ ಬಾರದೇ ಶೇ.20 ರಷ್ಟು ಗಿಡಗಳು ಮಾತ್ರ ಹುಟ್ಟಿದೆ. ಕಳೆದ ಬಾರಿ ಖಾಸಗಿಯವರಿಂದ ಬೀಜ ಖರೀದಿ ಮಾಡಲಾಗಿದ್ದು ಉತ್ತಮ ಇಳುವರಿ ಬಂದಿದೆ. ಈ ಬಾರಿ ಬೀಜದಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದ್ದು ಈ ಬಗ್ಗೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು.
– ವಾದಿರಾಜ ಹತ್ವಾರ್‌ ಬೆಟ್ಟಿನಮನೆ, ಹಿರಿಯ ಪ್ರಗತಿಪರ ಕೃಷಿಕರು

ವೈಜ್ಞಾನಿಕವಾಗಿ ಅಧ್ಯಯನ
ಇಲಾಖೆಯಿಂದ ರೈತರಿಗೆ ಪೂರೈಕೆಯಾದ ಬೀಜವನ್ನು ಮೊದಲು ಪ್ರಾಯೋಗಿಕವಾಗಿ ರೈತ ಕೇಂದ್ರದಲ್ಲಿ ಬಿತ್ತನೆ ಮಾಡಿದಾಗ ಶೇ.81ರಷ್ಟು ಮೊಳಕೆ ಬಂದಿದೆ. ಅಲ್ಲದೇ ಈಗಾಗಲೇ ಪೂರೈಕೆಯಾಗಿರುವ ಬೀಜವನ್ನು ಕೋಟ, ಮಣೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಬಿತ್ತನೆ ಮಾಡಲಾಗಿದ್ದು, ಗಿಡಗಳು ಹುಟ್ಟಿದೆ. ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಮಣ್ಣಿನಲ್ಲಿ ತೇವಾಂಶದ ಕೊರತೆಯೇ ಹೆಚ್ಚಾಗಿದೆಯೇ ಎನ್ನುವ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಲಾಗುವುದು. ರೈತರು ನೆಲಗಡಲೆ ಬೀಜ ಖರೀದಿಸಿದ ಚೀಲದ ಲೆಬಲ್‌ ಹಾಗೂ ಬಿಲ್‌ಗ‌ಳನ್ನು ಇಲಾಖೆಗೆ ನೀಡಿ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ರೂಪಾ ಜೆ. ಮಾಡ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next