ಸ್ಯಾಂಡಲ್‌ವುಡ್‌ನಲ್ಲಿ ಪ್ರತಿ ಶುಕ್ರವಾರ ಹೊಸ ಸಿನಿಮಾಗಳ ಮೂಲಕ ಹತ್ತಾರು ಹೊಸ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಚಿತ್ರ ಜಗತ್ತಿಗೆ ಪರಿಚಯವಾಗುತ್ತಿರುತ್ತಾರೆ. ಆದರೆ ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಆತಂಕ ನೂರಾರು ಸಿನಿಮಾಗಳ ಬಿಡುಗಡೆಗೇ ಬ್ರೇಕ್ ಹಾಕಿರುವಾಗ, ಹೊಸ ಕನಸುಗಳನ್ನು ಇಟ್ಟುಕೊಂಡು ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿರುವವರ ಸಂಖ್ಯೆಯೂ ಹಿಂದೆಂದಿಗಿಂತಲೂ ತುಂಬ ಕಡಿಮೆಯಾಗಿದೆ. ಇವೆಲ್ಲದರ ನಡುವೆ ಈ ವಾರ “ಗ್ರೂಫಿ’ ಚಿತ್ರದ ಮೂಲಕ ನವನಟ ಆರ್ಯನ್, ನಾಯಕಿ ಪದ್ಮಶ್ರೀ ಜೈನ್ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ. ತಮ್ಮ ಸಿನಿಮಾ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕರು.
“ಗ್ರೂಫಿ’ ಮೆಂಬರ್ ತಮ್ಮ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ. ಈ ಹಿಂದೆ “ವೇಷಧಾರಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ನಟ ಆರ್ಯನ್‌ಗೆ, “ಗ್ರೂಫಿ’ ನಾಯಕನಾಗಿ ಎರಡನೇ ಚಿತ್ರ. ಸುಮಾರು ಎರಡು ವರ್ಷದ ಬಳಿಕ “ಗ್ರೂಫಿ’ ಮೂಲಕ ಮತ್ತೂಂದು ಹೊಸಥರದ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವುದಕ್ಕೆ ಆರ್ಯನ್ ತುಂಬ ಎಕ್ಸೈಟ್ ಆಗಿದ್ದಾರೆ.
“ಲಾಕ್‌ಡೌನ್ ನಂತರ ನಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಖುಷಿಯಾಗ್ತಿದೆ. “ಗ್ರೂಫಿ’ ಸಿನಿಮಾದಲ್ಲಿ ನನ್ನದು ಹುಡುಕಾಟವಿರುವಂಥ ಪೋಟೂಜರ್ನಲಿಸ್ಟ್ ಕ್ಯಾರೆಕ್ಟರ್. ಫಸ್ಟ್ ಟೈಮ್ ಇಂಥದ್ದೊಂದು ಕ್ಯಾರೆಕ್ಟರ್ ಸಿಕ್ಕಿದೆ. ಒಂದು ಜರ್ನಿ, ಸಸ್ಪೆನ್ಸ್-ಥ್ರಿಲ್ಲರ್ ಸ್ಟೋರಿ, ಒಂದಷ್ಟು ಟ್ವಿಸ್ಟ್ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಸಿನಿಮಾದಲ್ಲಿದೆ. ಬಹುತೇಕ ಹೊಸಬರ ಸೇರಿಕೊಂಡು ಈ ಸಿನಿಮಾ ಮಾಡಿದ್ದೇವೆ. “ಗ್ರೂಫಿ’ ಆಡಿಯನ್ಸ್‌ಗೂ ಇಷ್ಟವಾಗುವ ನಂಬಿಕೆ ಇದೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ ಆರ್ಯನ್.
ಇನ್ನು “ಗ್ರೂಫಿ’ ಚಿತ್ರದಲ್ಲಿ ಪದ್ಮಶ್ರೀ ಸಿ.ಜೈನ್ ನಾಯಕಿಯಾಗಿ ಅಭಿನಯಿಸಿದ್ದಾರೆ. “”ಗ್ರೂಫಿ’ ಇಂದಿನ ಜನರೇಶನ್ ಸಿನಿಮಾ. ಸೆಲ್ಫಿ ತೆಗೆದುಕೊಳ್ಳು ಹೋಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚು. ಒಂದು ಸೆಲ್ಫಿಗಾಗಿ ಜೀವವನ್ನು ಪಣಕ್ಕಿಡುವುದು ಎಷ್ಟು ಸರಿ ಅನ್ನೋ ಸೀರಿಯಸ್ ವಿಷಯ ಇದರಲ್ಲಿದೆ. ಸೆಲ್ಫಿ ಮನಸ್ಥಿತಿ ಇರೋರಿಗೆ ಇದರಲ್ಲೊಂದು ಒಳ್ಳೆಯ ಮೆಸೇಜ್. ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಸಿನಿಮಾದ ಬಗ್ಗೆ ನಮಗೂ ತುಂಬ ನಿರೀಕ್ಷೆ ಇದೆ’ ಎನ್ನುವುದು ಪದ್ಮಶ್ರೀ ಜೈನ್ ಮಾತು.
ಇದನ್ನೂ ಓದಿ:ಸತ್ಯಮಂಗಳದಲ್ಲಿ ಶಿವಣ್ಣ: ಮಮ್ಮಿ ಲೋಹಿತ್ ನಿರ್ದೇಶನ-ಬೈರಾಗಿ ಕೃಷ್ಣ ಸಾರ್ಥಕ್ ನಿರ್ಮಾಣ
“ಲಿಯಾ ಗ್ಲೋಬಲ್ ಮೀಡಿಯಾ’ ಬ್ಯಾನರ್‌ನಲ್ಲಿ ಕೆ.ಜಿ ಸ್ವಾಮಿ ನಿರ್ಮಿಸಿದ “ಗ್ರೂಫಿ’ ಚಿತ್ರಕ್ಕೆ ಡಿ. ರವಿ ಅರ್ಜುನ್, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ನಡೆದ ನೈಜಘಟನೆಗೆ ಚಿತ್ರತಂಡ ಸಿನಿಮಾ ಟಚ್ ಕೊಟ್ಟು ತೆರೆಗೆ ತರುತ್ತಿದೆ. ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಆರ್ಯನ್, ಪದ್ಮಶ್ರೀ ಜೈನ್ ಅವರೊಂದಿಗೆ ಗಗನ್, ಉಮಾಮಯೂರಿ, ಸಂದ್ಯಾ, ಪ್ರಜ್ವಲ್, ಶ್ರೀಧರ್, ಹನುಮಂತೇ ಗೌಡ, ಸಂಗೀತಾ, ರಘು ಪಾಂಡೇಶ್ವರ್, ರಜನಿಕಾಂತ್ ಮೊದಲಾದವರು ಇತರ ಪ್ರಮುಖಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಒಟ್ಟಾರೆ ತನ್ನಟೈಟಲ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿರುವ “ಗ್ರೂಫಿ’ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಜಿ.ಎಸ್.ಕಾರ್ತಿಕ ಸುಧನ್