ಹೈದರಾಬಾದ್: ದಂತಪಂಕ್ತಿ ಸಂಯೋಜನೆ (Smile designing)ಯ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಕೊನೆಯುಸಿರೆಳೆದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ಕರ್ ಗೆ ಸಲ್ಲಿಕೆ ಆಗುತ್ತಾ ‘Laapataa Ladies’?: ನಿರ್ದೇಶಕಿ ಕಿರಣ್ ರಾವ್ ಸ್ಪಷ್ಟನೆ
ಫೆಬ್ರುವರಿ 16ರಂದು ಹೈದರಾಬಾದ್ ನ ಜುಬಿಲಿ ಹಿಲ್ಸ್ ನ ಎಫ್ ಎಂಎಸ್ ಇಂಟರ್ ನ್ಯಾಷನಲ್ ಡೆಂಟಲ್ ಕ್ಲಿನಿಕ್ ನಲ್ಲಿ 28ವರ್ಷದ ಲಕ್ಷ್ಮೀ ನಾರಾಯಣ ವಿಂಜಾಮ್ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ನನ್ನ ಮಗನಿಗೆ ಶಸ್ತ್ರಚಿಕಿತ್ಸೆ ವೇಳೆ ಅನಸ್ತೇಶಿಯಾ ಓವರ್ ಡೋಸ್ ನೀಡಿದ ಪರಿಣಾಮ ಸಾವನ್ನಪ್ಪಿರುವುದಾಗಿ ಲಕ್ಷ್ಮೀ ನಾರಾಯಣ ತಂದೆ ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗ ಪ್ರಜ್ಞೆ ತಪ್ಪಿರುವುದಾಗಿ ಆಸ್ಪತ್ರೆ ಸಿಬಂದಿಗಳು ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು ಎಂದು ರಾಮುಲು ವಿಂಜಾಮ್ ತಿಳಿಸಿದ್ದಾರೆ.
ನಾವು ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಿದ್ದು, ಈ ಸಂದರ್ಭದಲ್ಲಿ ಮಗ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಶಸ್ತ್ರಚಿಕಿತ್ಸೆ ಬಗ್ಗೆ ಮಗ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲವಾಗಿತ್ತು. ಆತನಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲವಾಗಿತ್ತು. ಮಗ ಸಾವಿಗೆ ವೈದ್ಯರೇ ಹೊಣೆ ಎಂದು ರಾಮುಲು ದೂರಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಲಕ್ಷ್ಮೀ ನಾರಾಯಣ್ ಗೆ ಕಳೆದ ವಾರವಷ್ಟೇ ನಿಶ್ಚಿತಾರ್ಥ ನಡೆದಿದ್ದು, ಮುಂದಿನ ತಿಂಗಳು ವಿವಾಹ ನಿಶ್ಚಯವಾಗಿತ್ತು ಎಂದು ತಂದೆ ರಾಮುಲು ತಿಳಿಸಿದ್ದಾರೆ.