Advertisement
ಇತಿಹಾಸದಿಂದ ನಾವು ಪಾಠ ಕಲಿಯುವುದಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ನಾವು ತಡಬಡಾಯಿಸಿದ್ದೆವು. ಅವತ್ತು ಡ್ರಾ ತೃಪ್ತಿ ಸಿಕ್ಕಿತ್ತು. ನ್ಯೂಜಿಲೆಂಡ್ ಎದುರಿನ ಪ್ರಥಮ ಟೆಸ್ಟ್‌ನಲ್ಲೂ 197 ರನ್‌ನಿಂದ ಗೆಲ್ಲುವ ಮುನ್ನ ಕನಿಷ್ಠ “ಸ್ಪರ್ಧೆ ನಡೆದಿತ್ತು. ಭಾರತದ ಮೊದಲ ಇನ್ನಿಂಗ್ಸ್ ಸ್ಕೋರ್ ಅವತ್ತು 318. ಭಾರತ ಭಾರತೀಯ ನೆಲದಲ್ಲಾಡುವ ಸರಣಿಯ ಮೊದಲ ಟೆಸ್ಟ್‌ನಲ್ಲಿ ತಿಣುಕಾಡುವುದು ಸಂಪ್ರದಾಯದಂತೆ ನಡೆದುಬಂದಿದೆ. ಈ ಕುರಿತು ಎಚ್ಚರಿಕೆ ಹೊಂದುವ ಬದಲು ಖುದ್ದು ಬಿಸಿಸಿಐ ಮೂರೇ ದಿನದಲ್ಲಿ ಮುಕ್ತಾಯವಾಗುವ “ಡಾಕ್ಟರ್x ಪಿಚ್ ನಿರ್ಮಾಣಕ್ಕೆ ಆದೇಶ ನೀಡಿದ್ದು ಬೂಮರ್‍ಯಾಂಗ್ ಆಗಿದೆ.
ಪುಣೆ ಪಿಚ್‌ಗೆ ಟೆಸ್ಟ್ ಆರಂಭಕ್ಕೆ ಮುನ್ನ ನಾಲ್ಕು ದಿನಗಳಿಂದ ಒಂದು ಹನಿ ನೀರು ಹನಿಸಿರಲಿಲ್ಲ. ಮೊದಲ ದಿನದಿಂದಲೆ ಪಿಚ್ ಸ್ಪಿನ್ನರ್‌ಗೆ 40 ರಿಂದ 50 ಡಿಗ್ರಿ ಸ್ವರೂಪದಲ್ಲಿ ತಿರುಗುವಂತಾಗಬೇಕು ಎಂದು ಕೊಳ್ಳುವುದು ಅತಿರೇಕ. ಇಂಗ್ಲೆಂಡ್ ವಿರುದ್ಧ, ಇತ್ತೀಚೆಗೆ ಬಾಂಗ್ಲಾ ಎದುರು ಭಾರತ ಮೊದಲ ಇನ್ನಿಂಗ್ಸ್‌ನ 400 ಪ್ಲಸ್ ಸ್ಕೋರ್‌ಗಳಿಂದ ವಿಚಲಿತವಾಗಿರಲಿಲ್ಲ. ಪಿಚ್ ಆತ್ಮವಿಶ್ವಾಸವನ್ನು ಕೊಟ್ಟಿತ್ತು. ಪುಣೆ ಪಿಚ್ ಮೊದಲ ಘಂಟೆಯಲ್ಲಿಯೇ ತಿರುವು ಕಾಣತೊಡಗಿದಾಗ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಭಾರತ ತಾನಾಗಿರಲಿಲ್ಲ. ಕಾಂಗರೂಗಳೇನೂ ರನ್ ಮಹಲ್‌ನ್ನೇನೂ ಕಟ್ಟಿರಲಿಲ್ಲ. ಭಯ ಮನಸ್ಸಿನಲ್ಲಿ ಮನೆ ಮಾಡಿದಾಗ ಆಟ ಪೇಚಾಟವೇ. ಭಾರತದ ಬ್ಯಾಟಿಂಗ್ ಬಗ್ಗೆ ಶೋಕ, ಆಕ್ರೋಶ ಎರಡೂ ವ್ಯರ್ಥ. ಟೆಸ್ಟ್ 5 ದಿನಗಳ ಆಟದ ನಂತರವೇ ಫಲಿತಾಂಶ ಕೊಡುವಂತಿರಬೇಕು. ಮೊದಲ ಎರಡು ದಿನ ಬ್ಯಾಟ್ಸ್ ಮನ್ ತಾಕತ್ತು ತೋರುವಾಗ ಬೌಲರ್‌ಗೆ ಸವಾಲು. ಮುಂದಿನ ಮೂರು ದಿನ ಕ್ರೀಸ್‌ನಲ್ಲಿ ಬಾಳುವುದೇ ಬ್ಯಾಟ್ಸ್ ಮನ್ ಸಾಧನೆ. ಸುಮಾರು 450 ಓವರ್ ಬಾಳಬೇಕಾದ ಪಿಚ್‌ನಲ್ಲಿ 266 ಓವರ್‌ಗಳ ಒಳಗೆ ಫಲಿತಾಂಶ ಬಂದರೆ ಅದು, ಲೈವ್ ಘಂಟೆಗಳ ಅಂದಾಜಲ್ಲಿ ನೇರಪ್ರಸಾರದ ಹಕ್ಕು ಪಡೆದ ಕ್ರೀಡಾ ಚಾನೆಲ್ ನಷ್ಟವನ್ನು ಹೊರತುಪಡಿಸಿ ಆಟಕ್ಕೆ ಮಾಡುವ ಅನ್ಯಾಯ. ಎರಡನೇ ದಿನಕ್ಕೆ 24 ವಿಕೆಟ್ ಉರುಳಿತ್ತು. ಈ ಹಂತದಲ್ಲಿ ಭಾರತೀಯ ಸ್ಪಿನ್ನರ್ ಬಗ್ಗೆ ಒಂದು ಅನುಮಾನ ಕಾಡುತ್ತದೆ. ಮೊದಲ ದಿನದ ಪಿಚ್ ಅಷ್ಟಿಷ್ಟು ಬ್ಯಾಟಿಂಗ್‌ಗೆ ನೆರವಾಗುತ್ತದೆ ಎಂದುಕೊಂಡರೂ ಎರಡನೆ ದಿನದ ಕೊನೆಯ ಭಾಗದಲ್ಲಿ ಇಬ್ಬರು ಸ್ಪಿನ್ನರ್‌ಗಳಿಂದಲೇ ಬೌಲಿಂಗ್ ದಾಳಿ ಆರಂಭಿಸಿದ ಭಾರತ ರನ್ ನಿಯಂತ್ರಿಸಲಿಲ್ಲ. ವಿಕೆಟ್ ಗೊಂಚಲನ್ನೂ ಪಡೆಯಲಿಲ್ಲ. ಒಂದೊಮ್ಮೆ ಭಾರತೀಯ ಸ್ಪಿನ್ನರ್ ಇಂತಹ ಪಿಚ್‌ನಲ್ಲಿ ಎದುರಿಸಲೇ ಆಗದು ಎಂತಿದ್ದರೆ ಕಾಂಗರೂ ಪಡೆ 50 ಪ್ಲಸ್ ರನ್ನಿಗೆ ಇನಿಂಗ್ಸ್ ಮುಗಿಸಬೇಕಿತ್ತು. ಅಶ್ವಿನ್, ಜಡೇಜಾರನ್ನು ಆಸೀಸ್ ಚೆನ್ನಾಗಿ ಎದುರಿಸಿದರು ಎಂಬುದಕ್ಕಿಂತ ಇವರು ಒಳ್ಳೆಯ ಎಸೆತಗಳ ಜೊತೆಗೆ ದೊಡ್ಡ ಸಂಖ್ಯೆಯ ಲಾಲಿಪಾಪ್‌ಗ್ಳನ್ನು ಕೂಡ ದೇಣಿಗೆಯಾಗಿತ್ತರು ಎಂಬುದೇ ನಿಜ. ಇದು ಮೊದಲ ಇನ್ನಿಂಗ್ಸ್‌ನಂತೆ ದ್ವಿತೀಯ ಸರದಿಗೂ ಅನ್ವಯ. ಹಾಗಾಗಿ ಭಾರತದ ಬ್ಯಾಟಿಂಗ್‌ನಂತೆ ಬೌಲಿಂಗ್ ಕುರಿತು ಶೋಕ, ಆಕ್ರೋಶ ಎರಡೂ ವ್ಯರ್ಥ.
Related Articles
Advertisement
ಭಾರತ ಇನ್ನು ಮುಂದೆ ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ ಜೊತೆಗೆ ಡಿಆರ್‌ಎಸ್ ಕೋಚ್‌ನೂ° ನೇಮಕ ಮಾಡಿಕೊಳ್ಳಬೇಕು ಎಂಬುದು ಇತ್ತೀಚೆಗೆ ಹರಿದಾಡುತ್ತಿರುವ ಜೋಕ್. ಫೀಲ್ಡಿಂಗ್ ಮಾಡುವಾಗ ಡಿಸಿಷನ್ ರಿವ್ಯೂ ಸಿಸ್ಟಮ್‌ನ ಲಭ್ಯ ನಾಲ್ಕು ಅವಕಾಶಗಳನ್ನು ಬಳಸಿಕೊಂಡು ಅಷ್ಟನ್ನೂ ವ್ಯರ್ಥಗೊಳಿಸಿಕೊಂಡಿತು ಎಂಬುದರ ಜೊತೆಗೆ ಅವುಗಳ ಟೈಮಿಂಗ್ ಕೂಡ ಮುಖ್ಯ. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ಜಯಂತ್ ಯಾದವ್‌ರ ಎರಡು ಓವರ್‌ಗಳಲ್ಲಿ ಸತತ ಎರಡು ಬಾರಿ ರಿವ್ಯೂ ಬಳಸಿ ಕೈಕಚ್ಚಿಸಿಕೊಂಡಿದ್ದು, 56ನೇ ಓವರ್‌ನಲ್ಲಿ ನಾಯಕ ಸ್ಟೀವ್ ಸ್ಮಿತ್ ಔಟಾಗಿದ್ದಾರೆ ಎಂಬುದು ಗೊತ್ತಾಗಿಯೂ ಉಗುಳು ನುಂಗುವಂತಾಗಿತ್ತು. ಇಂತಹ ತಪ್ಪಿಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೊಡುಗೆ ದೊಡ್ಡದು! ಎಲ್‌ಬಿಡಬ್ಲ್ಯು ತೀರ್ಮಾನ ಪ್ರಶ್ನಿಸುವಾಗ ವಿಕೆಟ್ ಕೀಪರ್ ಅತ್ಯುತ್ತಮವಾಗಿ ನಿರ್ಣಯಿಸುವ ಸ್ಥಾನದಲ್ಲಿರುತ್ತಾನೆ. ಆದರೆ ಸಹಾ ಅದರಲ್ಲೇ ವಿಫಲರಾದರು. ಈ ಸ್ಟೀವ್ ಸ್ಮಿತ್ ಕೊನೆಗೆ ಶತಕವನ್ನೇ ಬಾರಿಸಿದರು. ಭಾರತದ ಓಪನರ್‌ಗಳು ತಮ್ಮ ವಿರುದ್ಧದ ಎಲ್‌ಬಿಡಬ್ಲ್ಯು ತೀರ್ಪಿನ ವಿರುದ್ಧ ಡಿಆರ್‌ಎಸ್‌ಗೆ ಸಂಜ್ಞೆ ಮಾಡಿ ಗಾಯದ ಮೇಲೆ ಬರೆ ಎಳೆದರು. ಒಟ್ಟು 7ರ ಪೈಕಿ ಒಂದರಲ್ಲಿ ಮಾತ್ರ ಭಾರತ ಯಶ ಪಡೆದರೆ ಆಸ್ಟ್ರೇಲಿಯಾ 7ರಲ್ಲಿ 3 ಬಾರಿ ಸಫಲವಾಯಿತು. ಬ್ಯಾಟಿಂಗ್ ಸಂದರ್ಭದ ಕೊನೆಯ ಹಂತದಲ್ಲಿ ಇರುವ ಅವಕಾಶ ಬಳಸಿಕೊಳ್ಳುವ ತಂತ್ರವಾಗಿಯಷ್ಟೇ ಕೆಲವು ಡಿಆರ್‌ಎಸ್‌ನ್ನು ಅದು ಬಳಸಿಕೊಂಡಿತು. ಈ ಪದ್ಧತಿಯ ಬಗ್ಗೆ ತನ್ನ ಎಂದಿನ ನಕಾರಾತ್ಮಕ ವರ್ತನೆಯನ್ನು ಭಾರತ ಬಿಡದಿದ್ದರೆ ಶೋಕ, ಆಕ್ರೋಶ ಎರಡೂ ವ್ಯರ್ಥ.
ಮಾ.ವೆಂ.ಸ.ಪ್ರಸಾದ್