ವಿಜಯಪುರ: ಬರ ಮುಕ್ತ ಭಾರತ ನಿರ್ಮಾಣಕ್ಕಾಗಿ ಜಲ ಸಾಕ್ಷರತೆಗಾಗಿ ರಾಷ್ಟ್ರೀಯ ಜಲ ಬಿರಾದರಿ ಸಂಘಟನೆಯಿಂದ ಗೋವಾ-ಗುವಾಹತಿ ಜಲಸಾಕ್ಷರತೆ ಯಾತ್ರೆ ಬುಧವಾರ ವಿಜಯಪುರಕ್ಕೆ ಆಗಮಿಸಿದಾಗ ಅದ್ಧೂರಿ ಸ್ವಾಗತ ನೀಡಲಾಯಿತು.
ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಜಲಯಾತ್ರೆ ಹಾಗೂ ಜಲ ಸಾಕ್ಷರತಾ ಯಾತ್ರಾರ್ಥಿಗಳು ಜಲ ಸಂರಕ್ಷಣೆ ಮಹತ್ವ ಹೇಳುವ ಬರ ಮುಕ್ತ ಭಾರತ ನಿರ್ಮಾಣದ ಜಾಗೃತಿ ಯಾತ್ರೆಯ ಕಾರ್ಯ ಚಟುವಟಿಕೆ ತಿಳಿಸುವ ಕರಪತ್ರ ವಿತರಿಸಿದರು. ಜಲ ಸಾಕ್ಷರತಾ ಯಾತ್ರಾರ್ಥಿಗಳು ಜಲ ಕೀ ರಕ್ಷಾ ಪ್ರಕೃತಿ ಕೀ ರಕ್ಷಾ…’ ಜಲ ಹೈ ತೋ ಬಲ ಹೈ… , “ಜಲ ಹೀ ಜೀವನ ಹೈ…, “ಜಲ ಹೀ ಜೀವನ ಹೈ…’, ಎಂಬಿತ್ಯಾದಿ ಘೋಷಣೆ ಕೂಗಿ ಸ್ವಾಗತಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸ್ವಾಗತಿಸಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು. ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಲ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು.
ಈ ಯಾತ್ರೆಯು ಸೊಲ್ಲಾಪುರ ಮಾರ್ಗವಾಗಿ ಮಹಾರಾಷ್ಟ್ರ, ನಂತರ ಜಾರ್ಖಂಡ, ಛತ್ತಿಸಗಡ, ಓರಿಸ್ಸಾ, ಪಶ್ಚಿಮ ಬಂಗಾಳ ರಾಜ್ಯಗಳ ಮೂಲಕ ಹಾಯ್ದು ಕೊನೆಗೆ ಆಸ್ಸಾಂ ರಾಜ್ಯದ ರಾಜಧಾನಿ ಗುವಾಹತಿಗೆ ತಲುಪಲಿದೆ ಎಂದು ಯಾತ್ರೆ ನೇತೃತ್ವ ವಹಿಸಿರುವ ಕೃಷಿ ತಜ್ಞ ಡಾ| ರಾಜೇಂದ್ರ ಪೋದ್ದಾರ ಹೇಳಿದರು.
ಬರ ಮುಕ್ತ ಭಾರತ ನಿರ್ಮಾಣಕ್ಕಾಗಿ ಜಲಗಾಂಧಿ ಡಾ| ರಾಜೇಂದ್ರಸಿಂಗ್ ನೇತೃತ್ವದಲ್ಲಿ ಜಲ ಸಾಕ್ಷರತೆ ಯಾತ್ರೆ ಕೈಗೊಳ್ಳಲಾಗಿದೆ. ಕಳೆದ ಮೇ ತಿಂಗಳಿಂದ ಮೊದಲ ಹಂತವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ, ಎರಡನೇ ಹಂತದ ಯಾತ್ರೆ ಗೋವಾದಿಂದ ಗುವಾಹತಿ ಯಾತ್ರೆಯೂ ಪ್ರಾರಂಭಗೊಂಡಿದೆ. ಈ ಎಲ್ಲ ಯಾತ್ರೆಗಳ ಸಮಾರೋಪ ವಿಜಯಪುರದಲ್ಲಿ ನಡೆಯಲಿದೆ. ರಾಷ್ಟ್ರೀಯ ನಾಯಕ ಅಣ್ಣಾ ಹಜಾರೆ, ಜಲತಜ್ಞ ಡಾ| ರಾಜೇಂದ್ರಸಿಂಗ್ ಸೇರಿದಂತೆ ಜಲ ಸಂರಕ್ಷಣೆ ಪರಿಣಿತಿ ಹೊದಿರುವ ದೇಶದ ಖ್ಯಾತನಾಮರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ| ರಾಜೇಂದ್ರ ಪೋದ್ದಾರ ಹೇಳಿದರು.
ವಿಜಯಪುರ ಜಲ ಬಿರಾದಾರಿ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್, ಡಾ| ರಿಯಾಜ್ ಫಾರೂಕಿ, ವಿಶ್ವನಾಥ ಭಾವಿ, ಲಕ್ಷ್ಮೀ ದೇಸಾಯಿ, ಎಂ.ಕೆ. ಮನಗೊಂಡ, ಪ್ರಕಾಶ ಕುಂಬಾರ, ಟಿ.ಎಸ್. ಪಠಾಣ, ಮುನ್ನಾ ಭಕ್ಷಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.