Advertisement
ಯಾಕೆಂದರೆ, ಲಕ್ಷಾಂತರ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಕಾರ್ಮಿಕರಿಗೆ ಪುನರ್‌ವಸತಿ ಕಲ್ಪಿಸುವುದು, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಜವಾಬ್ದಾರಿಗಳು ಈಗ ಆಯಾ ರಾಜ್ಯ ಸರ್ಕಾರಗಳ ಮೇಲಿದೆ. ಹಾಗೊಂದು ವೇಳೆ ತವರಿನಲ್ಲಿಯೇ ಇರಲು ಆ ಕಾರ್ಮಿಕರು ನಿರ್ಧರಿಸಿದರೆ ಮತ್ತು ಅದನ್ನು ನಿಭಾಯಿಸುವಲ್ಲಿ ಸರ್ಕಾರಗಳು ವಿಫಲವಾದರೆ, ಮುಂಬರುವ ದಿನಗಳಲ್ಲಿ ಸ್ಥಳೀಯಮಟ್ಟದಲ್ಲಿ ನಿರುದ್ಯೋಗದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಲಿದೆ.
Related Articles
Advertisement
ಇಷ್ಟೊಂದು ಪ್ರಮಾಣದಲ್ಲಿರುವ ಕಾರ್ಮಿಕರು ವಾಪಸ್ ಹೋದಾಗ, ಸಹಜವಾಗಿ ಆಯಾ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿಸಿ ಸೌಲಭ್ಯಗಳನ್ನು ಕಲ್ಪಿಸುವುದು ಸವಾಲಾಗಲಿದೆ’ ಎಂದು ಎಐಟಿಯುಸಿ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಶಿವಣ್ಣ ತಿಳಿಸುತ್ತಾರೆ. ಈ ಮೊದಲೇ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಇತ್ತು. ಇಂತಹದ್ದರಲ್ಲಿ ಲಾಕ್‌ಡೌನ್‌ನಿಂದ ಆರ್ಥಿಕತೆ ಸಂಪೂರ್ಣ ನೆಲಕಚ್ಚುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಇದ್ದವರಿಗೇ ಉದ್ಯೋಗ ಸಿಗುತ್ತಿಲ್ಲ. ಹೀಗಿರುವಾಗ ವಲಸಿಗರಿಗೆ ಉದ್ಯೋಗ ಸೃಷ್ಟಿ ಸವಾಲಿನ ಕೆಲಸ ಎಂದೂ ಅವರು ತಿಳಿಸುತ್ತಾರೆ.
ಪ್ಯಾಕೇಜ್ ಕೊಟ್ಟರೂ ನಿಲ್ಲದ ವಲಸೆ: ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರೂ, ಸಾವಿರಾರು ಕಾರ್ಮಿಕರ ವಲಸೆ ಮುಂದುವರಿದಿದೆ. ಪ್ರತಿ ದಿನ ಶ್ರಮಿಕ್ ರೈಲಿನಲ್ಲಿ ಕಾರ್ಮಿಕರು ಸರದಿಯಲ್ಲಿ ನಿಂತು ತವರಿಗೆ ತೆರಳುತ್ತಿದ್ದಾರೆ. ರಿಯಲ್ ಎಸ್ಟೇಟ್, ನಮ್ಮ ಮೆಟ್ರೋ ಯೋಜನೆ, ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಹತ್ತುಹಲವು ಪ್ರಮುಖ ಯೋಜನೆಗಳು ಶೇ. 60ರಿಂದ 70ರಷ್ಟು ಹೊರರಾಜ್ಯದ ಕೌಶಲ್ಯಯುತ ಕಾರ್ಮಿಕರನ್ನು ಅವಲಂಬಿಸಿದೆ. ಅವರೆಲ್ಲರ ವಲಸೆ ರಾಜ್ಯದಲ್ಲಿನ ಅಭಿವೃದಿ ಚಟುವಟಿಕೆಗಳ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮೂಲಸೌಕರ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಾರ್ಮಿಕರ ಕರೆ ತರುವುದು ಹೀಗೆ.. ಯಾವೊಂದು ಅಭಿವೃದಿ ಯೋಜನೆಗಳ ನಿರ್ಮಾಣದ ಗುತ್ತಿಗೆ ಪಡೆದವರ ಕೆಳಗೆ ಕೆಲವರು ಕಾರ್ಮಿಕ ಗುತ್ತಿಗೆದಾರರು ಇರುತ್ತಾರೆ. ಇವರಿಂದಲೇ ಕಾರ್ಮಿಕರ ಪೂರೈಕೆ ಆಗುತ್ತದೆ. ಈ ಉಪ ಗುತ್ತಿಗೆದಾರರು ಉತ್ತರ ಭಾರತದ ಕೆಲವು ಊರುಗಳಿಗೆ ತೆರಳಿ (ಕಾರ್ಮಿಕರ ಲಭ್ಯತೆ ಬಗ್ಗೆ ಮೊದಲೇ ಮಾಹಿತಿ ಇರುತ್ತದೆ), ಅಲ್ಲಿ ಮುಖಂಡರು ಮತ್ತು ಪೋಷಕರೊಂದಿಗೆ ಮಾತುಕತೆ ನಡೆಸಿ ತಲಾ ಊರುಗಳಿಂದ 20-30 ಕಾರ್ಮಿಕರನ್ನು ಕರೆತರುತ್ತಾರೆ. ಇದರಲ್ಲಿ ಮುಂಗಡವಾಗಿ ಒಂದೆರಡು ತಿಂಗಳ ವೇತನ ಪಾವತಿಸಿ ಕರೆತರುವ ಪ್ರಕರಣಗಳು ಹೆಚ್ಚಿರುತ್ತವೆ. ಹೀಗೆ ಕರೆತಂದವರಿಗೆ ಶಿಬಿರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅಲ್ಲಿ ದಿನಗೂಲಿ ಅಲ್ಲ; ಗುತ್ತಿಗೆ ಆಧಾರದಲ್ಲಿ ವೇತನ ಪಾವತಿಸಲಾಗುತ್ತದೆ. ಉದಾಹರಣೆಗೆ ಇಂತಿಷ್ಟು ಕಾಂಕ್ರೀಟ್ ಹಾಕಿದರೆ, ಅದಕ್ಕೆ ತಕ್ಕಂತೆ ವೇತನ ಪಾವತಿ ಆಗುತ್ತದೆ. ಸಾಮಾನ್ಯವಾಗಿ ಒಂದೆರಡು ತಿಂಗಳ ವೇತನ ತಮ್ಮಲ್ಲಿಯೇ ಇರುವಂತೆ ಗುತ್ತಿಗೆದಾರರು ನೋಡಿ ಕೊಳ್ಳುತ್ತಾರೆ. ಊರಿಗೆ ಹಬ್ಬ-ಹರಿದಿನಗಳಲ್ಲಿ ಹೋಗುವಾಗ ಕೊಟ್ಟುಕಳುಹಿಸುತ್ತಾರೆ. ಉತ್ತರ ಭಾರತ ಅಥವಾ ನೆರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಿಂದ ವಲಸೆ ಹೋಗುವವರ ಸಂಖ್ಯೆ ತುಂಬಾ ಕಡಿಮೆ. ಹೆಚ್ಚೆಂದರೆ ಗೋವಾ ಮತ್ತು ಮಂಗಳೂರು, ಕೆಲವರು ಮುಂಬೈಗೆ ಹೋಗುತ್ತಾರೆ. ಆರ್ಥಿಕವಾಗಿ ತುಸು ಸದೃಢವಾಗಿರುವವರು ದುಬೈಗೆ ತೆರಳುವುದೂ ಉಂಟು ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸುತ್ತಾರೆ.
ಕಡಿತಗೊಳಿಸುವ ಬೆದರಿಕೆ: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ, ಸಂಬಳವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಕೆಲ ಕಾರ್ಮಿಕರಿಗೆ ಒಂದೂವರೆ ತಿಂಗಳ ವೇತನ ನೀಡಲಾಗಿದೆ. ಆದರೆ, ಬೆನ್ನಲ್ಲೇ ಗುತ್ತಿಗೆದಾರರು, ಮುಂದಿನ ದಿನಗಳಲ್ಲಿ ಈಗ ನೀಡಿರುವ ಮುಂಗಡ ವೇತನವನ್ನು ಮುಂದಿನ ದಿನಗಳಲ್ಲಿ ತಾವು ಕೆಲಸ ಮಾಡಿದ್ದರಲ್ಲಿ ಕಡಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದು ಕಾರ್ಮಿಕರಿಗೆ ಆತಂಕ ಉಂಟುಮಾಡಿದ್ದು, ವಲಸೆಗೆ ಉತ್ತೇಜನ ನೀಡಿದಂತಾಗಿದೆ ಎನ್ನಲಾಗಿದೆ.
* ವಿಜಯಕುಮಾರ್ ಚಂದರಗಿ