Advertisement
ತುಮಕೂರು: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಮೇಲೆ ಮೊದಲ ಬಾರಿಗೆ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾ ಶಿವರಾತ್ರಿಯ ಜಾತ್ರಾ ಸಂಭ್ರಮ ಮೇಳೈಸಿದೆ. ಪ್ರತಿ ವರ್ಷದಂತೆ ರಾಜ್ಯ ಮಟ್ಟದ ಭಾರೀ ಜಾನುವಾರು ಜಾತ್ರೆಗೆ ಸಾವಿರಾರು ಜಾನುವಾರುಗಳು ಆಗಮಿಸಿದ್ದು, ಪ್ರದರ್ಶನ, ವ್ಯಾಪರದಲ್ಲಿ ತೊಡಗಿದ್ದಾರೆ.
Related Articles
Advertisement
ಶ್ರೀಗಳು ಲಿಂಗೈಕ್ಯರಾಗಿ ನಡೆಯುತ್ತಿರುವ ಮೊದಲ ಜಾತ್ರೆಯನ್ನು ಶ್ರೀಗಳ ಆಶಯದಂತೆ ರೈತರಿಗೆ ಉತ್ತೇಜನ ನೀಡುವ ರೀತಿಯಲ್ಲಿಯೇ ಶ್ರೀ ಸಿದ್ಧಲಿಂಗ ಸ್ವಾಮಿಗಳು ಹಾಗೂ ಆಡಳಿತ ವರ್ಗ ಜಾತ್ರೆಗೆ ಬರುವ ರಾಸುಗಳಿಗೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ.
ಇಂದು ವಿದೇಶಿ ರಾಸುಗಳ ಭರಾಟೆಯಲ್ಲಿ ದೇಸೀಯ ತಳಿಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ನಮ್ಮ ದೇಸೀಯ ತಳಿಗಳನ್ನು ಉಳಿಸಬೇಕು. ಅವುಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕು ಎನ್ನುವ ಚರ್ಚೆಗಳು ಸಮಾಜದಲ್ಲಿ ನಡೆಯುತ್ತಿರುವಂತೆಯೇ ನಗರ ಸಮೀಪದಲ್ಲಿ ನಡೆಯುತ್ತಿರುವ ಈ ಎತ್ತುಗಳ ಪ್ರದರ್ಶನ ಮತ್ತು ಮಾರಾಟ ಎಲ್ಲರ ಗಮನ ಸೆಳೆಯುತ್ತಿದೆ.
ಎಲ್ಲೆಲ್ಲಿಂದ ರಾಸು ಬರುತ್ತೆ: ಈ ಎತ್ತಿನ ಜಾತ್ರೆಗೆ ನಾಡಿನ ವಿವಿಧ ಜಿಲ್ಲೆಗಳಾದ ರಾಮನಗರ, ಬೆಂಗಳೂರು ಗ್ರಾಮಾಂತರ, ಮದ್ದೂರು, ಮಂಡ್ಯ ಜಿಲ್ಲೆಗಳಲ್ಲದೆ ಅಕ್ಕಪಕ್ಕದ ರಾಜ್ಯಗಳಾದ ಆಂದ್ರ ಪ್ರದೇಶ, ತಮಿಳುನಾಡು ಮೊದಲಾದ ಕಡೆಗಳಿಂದಲೂ ಈ ಎತ್ತಿನ ಜಾತ್ರೆಯಲ್ಲಿ ಜನರು ಬರುವುದು ಈ ಹಿಂದಿನಿಂದಲೂ ರೂಢಿಯಲ್ಲಿದೆ. ಈ ಜಾತ್ರೆಯಲ್ಲಿ ರಾಸುಗಳನ್ನು ಕೊಳ್ಳಲು ಮತ್ತು ಮಾರಲು ಉತ್ತಮ ಅವಕಾಶವಿದ್ದು, ಇದಕ್ಕಾಗಿಯೇ ರೈತರು ತಾವು ಸಾಕಿದ ಜಾನುವಾರುಗಳನ್ನು ಮಾರಲು ಹಾಗೂ ಕೊಳ್ಳಲು ಆಗಮಿಸುತ್ತಾರೆ.
ಬಹು ದೂರದ ಊರುಗಳಾದ ಆಂದ್ರ ಗಡಿ ಭಾಗದ ಅಗಳಿ, ಗುಡಿಬಂಡೆ, ರಾಜ್ಯದ ದಾವಣಗೆರೆ, ಚಿತ್ರದುರ್ಗ, ಗದಗ, ಹರಿಹರ, ಬಿಜಾಪುರ, ಬಳ್ಳಾರಿ, ರಾಯಚೂರು, ರಾಮನಗರ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು ತಮ್ಮ ಜಾನುವಾರುಗಳೊಡನೆ ಆಗಮಿಸುವುದರಿಂದ ಇಡೀ ಮಠದ ಸುತ್ತಮುತ್ತ ಜಾನುವಾರುಗಳು ಕಂಡು ಬರುತ್ತಿವೆ.ಜಾನುವಾರುಗಳ ರಕ್ಷಣೆ ವ್ಯವಸ್ಥೆ: ಜಾನುವಾರುಗಳಿಗೆ ನೆರಳು, ಕುಡಿಯುವ ನೀರು, ಆಹಾರ,ಆರೋಗ್ಯ ತಪಾಸಣೆ ಹಾಗೂ ಸಂಜೆಯ ವೇಳೆ ರೈತರಿಗೆ ಮನರಂಜನೆ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಜಾತ್ರೆಗೆ ಬರುವ ಎಲ್ಲರಿಗೆ ಪ್ರಸಾದ ವ್ಯವಸ್ಥೆಯನ್ನು ಶ್ರೀಮಠ ಕಲ್ಪಿಸಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಮಠದ ಸುತ್ತ ಇರುವ ಈ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳನ್ನು ಕೊಳ್ಳುವುದು, ಮಾರುವುದು ಕಂಡು ಬರುತ್ತದೆ. 50 ಸಾವಿರದಿಂದ 10 ಲಕ್ಷ ಬೆಲೆಬಾಳುವ ರಾಸುಗಳು ಇಲ್ಲಿ ಸೇರುವುದೇ ವಿಶೇಷ. ಇದೆಲ್ಲದರ ಜೊತೆಗೆ ಸುರಕ್ಷತೆಯ ದೃಷ್ಠಿಯಿಂದ ಶ್ರೀ ಸಿದ್ಧಗಂಗಾ ಜಾತ್ರೆ ರೈತರಿಗೆ ಹೆಚ್ಚು ಅನುಕೂಲಕರವಾದ ಜಾತ್ರೆಯಾಗಿದೆ. ಪ್ರತೀ ವರ್ಷ ಬಹುಮಾನ: ಸೀಮೆ ಹಸುಗಳನ್ನು ಸಾಕಲು ಜನ ಮುಂದಾಗಿರುವ ಹಿನ್ನೆಲೆಯಲ್ಲಿ ನಮ್ಮ ನಾಟಿ ಹಸುಗಳು,ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಭಾಗದಲ್ಲಿ ಹಳ್ಳಿಕಾರ್ ತಳಿ ಬಹು ಅಪರೂಪದ ತಳಿ. ಈ ಸಂತತಿ ಉಳಿಯಬೇಕು, ನಾವು ಪ್ರತೀವರ್ಷ ನಮ್ಮ ತಂದೆ ಕಾಲದಿಂದಲೂ ಸಿದ್ಧಗಂಗಾ ಮಠದ ಜಾತ್ರೆಯಲ್ಲಿ ಎತ್ತುಗಳನ್ನು ಕಟ್ಟುತ್ತೇವೆ. ಇಲ್ಲಿ ಎತ್ತುಗಳನ್ನು ಮಾರಾಟ ಮಾಡಿ ಬೇರೆ ಎತ್ತುಗಳನ್ನು ಕೊಂಡುಕೊಳ್ಳುತ್ತೇವೆ. ನಾವು ಸಾಕಿದ ಎತ್ತುಗಳಿಗೆ ಪ್ರತೀ ವರ್ಷ ಬಹುಮಾನ ಬಂದಿದೆ. ನಾಲ್ಕು ವರ್ಷದ ಹಿಂದೆ ನಮ್ಮ ಎತ್ತುಗಳಿಗೆ 10 ಗ್ರಾಂ. ಚಿನ್ನವೂ ಬಂದಿತ್ತು. ನಮ್ಮ ರಾಜ್ಯದಲ್ಲೇ ಎತ್ತುಗಳ ದೊಡ್ಡ ಜಾತ್ರೆ. ಇಲ್ಲಿ ಎಲ್ಲ ರೀತಿ ರಕ್ಷಣೆ, ರೈತರಿಗೆ ಸೌಲಭ್ಯವನ್ನು ಸಿದ್ಧಗಂಗಾ ಶ್ರೀಗಳು ಒದಗಿಸಿದ್ದಾರೆ. ರೈತರಿಗೆ ಯಾವುದೇ ಭಯ ಇಲ್ಲಿಲ್ಲ ಎನ್ನುತ್ತಾರೆ ರೈತ ರಾಮಣ್ಣ, ಸಿದ್ದರಾಮಣ್ಣ ಅಗಳಿ. ಶ್ರೀಗಳಿಲ್ಲದ ಮೊದಲ ರಾಸು ಜಾತ್ರೆ: ಶ್ರೀಗಳಿಗೆ ಜಾನುವಾರು ಕಂಡರೆ ಬಹಳ ಪ್ರೀತಿ ಇತ್ತು. ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಉದ್ದೇಶದಿಂದ ಕೃಷಿ ವಸ್ತು ಪ್ರದರ್ಶನವನ್ನು ಮಾಡಿದ್ದರು. ಎತ್ತುಗಳನ್ನು ಸಾಕಲು ಹೆಚ್ಚು ಪ್ರೋತ್ಸಾಹ ಮಾಡುತ್ತಿದ್ದರು. ಅದನ್ನು ಈಗ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಮುಂದುವರಿಸುತ್ತಿದ್ದಾರೆ. ಶ್ರೀಗಳಿಲ್ಲದ ಮೊದಲ ಜಾತ್ರೆ ಇದಾಗಿದೆ. ಈ ವರ್ಷದ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರಾಸುಗಳು ಬಂದಿವೆ. 9 ಲಕ್ಷ ಮೇಲ್ಪಟ್ಟ ಬೆಲೆಬಾಳುವ ರಾಸುಗಳು ಈಗಾಗಲೇ ಬಂದಿವೆ. ಕಳೆದ ಮೂರು ದಿನಗಳಿಂದ ಹಲವು ರಾಸುಗಳು ಬರುತ್ತಿವೆ ಎಂದು ಸಿದ್ಧಗಂಗಾ ಮಠದ ರೇಣುಕಾರಾಧ್ಯ ತಿಳಿಸಿದರು. * ಚಿ.ನಿ. ಪುರುಷೋತ್ತಮ್