Advertisement

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

06:53 PM Oct 22, 2024 | Team Udayavani |

ಉಡುಪಿ: ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ 122ಕ್ಕೂ ಅಧಿಕ ಜಾನುವಾರು ಪ್ರಾಣ ಕಳೆದುಕೊಂಡಿವೆ. ಜಾನುವಾರುಗಳ ಮೇಲೆ ಚಿರತೆಗಳ ನಿರಂತರ ಆಕ್ರಮಣವು ರೈತರಲ್ಲಿ ಆತಂಕ ಸೃಷ್ಟಿಸಿದೆ ಮತ್ತು ಜಾನುವಾರುಗಳನ್ನು ಕಾಪಾಡಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.

Advertisement

ಕಾಡುಪ್ರಾಣಿ ದಾಳಿಯಿಂದ ಮೃತ ಜಾನುವಾರುಗಳಿಗೆ ಅರಣ್ಯ ಇಲಾಖೆಯಿಂದ ನಿರ್ದಿಷ್ಟ ಮೊತ್ತದ ಪರಿಹಾರ ನೀಡಲಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ 19 ಲಕ್ಷ ರೂ. ಪರಿಹಾರ ರೈತರಿಗೆ ಒದಗಿಸಲಾಗಿದೆ.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಚಿರತೆ ದಾಳಿ ಪ್ರಕರಣ ನಿತ್ಯವೂ ಸುದ್ದಿಯಾಗುತ್ತಿವೆ. ಕೃಷಿ ಭೂಮಿಗಳಿಗೆ, ಕೊಟ್ಟಿಗೆ ಬಂದು ಜಾನುವಾರುಗಳನ್ನು ಎಳೆದು ಕೊಂಡು ಹೋಗುವ ಚಿರತೆಗಳು ರೈತರ ಆದಾಯದ ಮೂಲಕ್ಕೆ ಸಮಸ್ಯೆ ತಂದೊಡ್ಡಿದೆ. ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಜಾನುವಾರುಗಳನ್ನು ಸಂರಕ್ಷಿಸಲು ರಾತ್ರಿ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಚಿರತೆ ದಾಳಿಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಸೆರೆ ಸಿಕ್ಕ ಚಿರತಗೆಳನ್ನು ಹಿಡಿದು ಬೇರೆಡೆ ಬಿಡುವ ಕಾರ್ಯಾಚರಣೆ ಅರಣ್ಯ ಇಲಾಖೆ ನಡೆಸುತ್ತಿದೆ. ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಚಿರತೆಗೆ ಬೋನು ಇರಿಸಿದರೂ ಬೋನಿಗೆ ಬೀಳುವುದು ಕಡಿಮೆ. ಮಣಿಪಾಲ ಪರಿಸರದಲ್ಲಿ ಚಿರತೆ ಸಾಕಷ್ಟು ಆತಂಕ ಸೃಷ್ಟಿಸಿತ್ತು.

Advertisement

ಕುಂದಾಪುರ ಭಾಗದಲ್ಲಿ ಹೆಚ್ಚು ಚಿರತೆಯಿಂದಾಗಿ ಜಾನುವಾರು ಕಳೆದು ಕೊಂಡವರಿಗೆ ಅರಣ್ಯ ಇಲಾಖೆ ಪರಿಹಾರವನ್ನೂ ನೀಡುತ್ತಿದೆ. ಕುಂದಾಪುರ ವ್ಯಾಪ್ತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಕಾರಣ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ಅಧಿಕವಾಗಿವೆ. ಅರಣ್ಯದಂಚಿನ ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಡುಹಂದಿ, ಕಾಡು ಕೋಣ ಮತ್ತು ಚಿರತೆಗಳು ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ.

ಚಿರತೆಗಳು ಜನವಸತಿ ಪ್ರದೇಶಕ್ಕೆ ಬರಲು ಬೀದಿನಾಯಿ ಕಾರಣ?
ಇತ್ತೀಚಿನ ದಿನಗಳಲ್ಲಿ ಜನ ವಸತಿ ಪ್ರದೇಶಗಳಲ್ಲಿಯೂ ಚಿರತೆ ಕಾಣಿಸುತ್ತಿರಲು ಕಾರಣ ಬೀದಿನಾಯಿಗಳು. ಇದು ಬೆಂಗಳೂರು ಮತ್ತು ಮಣಿಪಾಲದಂತ ನಗರದಲ್ಲಿ ಈಗ ಸಾಮಾನ್ಯ ಎಂಬಂತಾಗಿದೆ ಎಂದು ವನ್ಯಜೀವಿ ತಜ್ಞ ಡಾ| ಉಲ್ಲಾಸ್‌ ಕಾರಂತ್‌ ಅಭಿಪ್ರಾಯಪಟ್ಟಿದ್ದಾರೆ. ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು, ಇವುಗಳ ಅವೈಜ್ಞಾನಿಕ ಪೋಷಣೆಯಿಂದಾಗಿ ಬೀದಿ ನಾಯಿಗಳ ಪ್ರಮಾಣ ಬೆಳೆಯುತ್ತಿದೆ. ಸುಲಭವಾಗಿ ಬೇಟೆಯಾಗುವುದರಿಂದ ಚಿರತೆಗಳು ನಾಯಿಗಳನ್ನು ಹುಡುಕಿಕೊಂಡು ಜನವಸತಿ ಪ್ರದೇಶಗಳ ಕಡೆಗೆ ಬರುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next