Advertisement

ಜಲ್ಲಿ ಬಿಕ್ಕಟ್ಟು; ಹಲವು ಕ್ಷೇತ್ರಗಳ ಇಕ್ಕಟ್ಟು!

09:44 PM Mar 31, 2021 | Team Udayavani |

ಕಾರ್ಕಳ: ಜಲ್ಲಿ  ಕೋರೆಗಳು ಚಟುವಟಿಕೆ ಸ್ಥಗಿತಗೊಳಿಸಿ ಕೆಲವು ದಿನಗಳೇ ಕಳೆದಿವೆ. ಜಲ್ಲಿ ಪೂರೈಕೆಯಾಗದೆ ಜಿಲ್ಲೆಯಲ್ಲಿ ಕಟ್ಟಡ, ರಸ್ತೆ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಮನೆ ಕಟ್ಟಲು ಉದ್ದೇಶಿಸಿದ್ದವರಿಗೆ  ಇದರಿಂದ ಸಮಸ್ಯೆಯಾಗಿದ್ದು, ಇದೇ ವೇಳೆ  ಕಾರ್ಮಿಕರು ಅತಂತ್ರರಾಗಿದ್ದಾರೆ.

Advertisement

ಜಿಲೆಟಿನ್‌ ಬಳಕೆ: ಬಿಗಿ ನಿಯಮ ಕಲ್ಲಿನ ಕೋರೆಗಳಲ್ಲಿ ಸ್ಫೋಟಕ್ಕೆ ಬಳಸುವ ಜಿಲೆಟಿನ್‌ ಕಡ್ಡಿಗಳ ಕುರಿತ ಬಿಗಿ ನಿಯಮಗಳೇ  ಸದ್ಯದ ಸ್ಥಿತಿಗೆ ಕಾರಣ. ಶಿವಮೊಗ್ಗ, ಮೈಸೂರಿನಲ್ಲಿ ಸ್ಫೋಟ ಸಂಭವಿಸಿದ ಬಳಿಕ ಸರಕಾರ ನಿಯಮ ಗಳನ್ನು ಬಿಗಿಗೊಳಿಸಿದ್ದು, ಕಟ್ಟುನಿಟ್ಟಿನ ಜಾರಿಯನ್ನು ಅನುಸರಿಸುತ್ತಿದೆ.

ಅದರಂತೆ ಜಿಲೆಟಿನ್‌ ಕಡ್ಡಿಗಳ ಖರೀದಿ, ದಾಸ್ತಾನಿಗೆ ಅನುಮತಿ ಪಡೆಯಬೇಕು. ಆದರೆ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಮಾಲಕರು ಹೇಳುತ್ತಿದ್ದು, ಇದನ್ನು ಪಾಲಿಸದಿದ್ದರೆ, ಕೋರೆಗಳಲ್ಲಿ ಸ್ಫೋಟಕ ಬಳಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಮ್ಮತಿಸುತ್ತಿಲ್ಲ.  ಇದರಿಂದ ಉಡುಪಿ ಜಿಲ್ಲೆಗಳಲ್ಲಿ ಮಾ. 10ರಿಂದ ಜಲ್ಲಿ ಪೂರೈಕೆಯಾಗುತ್ತಿಲ್ಲ. ನಿಯಮಗಳು ಕಡ್ಡಾಯ ವಾಗಿರುವುದರಿಂದ ಜಲ್ಲಿಯೂ ತಯಾ ರಾಗುತ್ತಿಲ್ಲ.

ಬಡವರು, ಕಾರ್ಮಿಕರು ಅತಂತ್ರ :

ಜಲ್ಲಿ  ಪೂರೈಕೆ ಸ್ಥಗಿತದಿಂದ  ನಿರ್ಮಾಣ ಕ್ಷೇತ್ರ ವಲ್ಲದೆ  ಇತರೆಲ್ಲ  ಕ್ಷೇತ್ರಕ್ಕೂ  ಏಟು ನೀಡಿದೆ.  ಕಬ್ಬಿಣ, ಸಿಮೆಂಟ್‌, ಇತರ ನಿರ್ಮಾಣ ಸಾಮಾಗ್ರಿ ಸರಕುಗಳ ಮೇಲೂ ಇದರಿಂದ ಪರಿಣಾಮ ಬೀರಿದೆ. ಒಂದಕ್ಕೊಂದು ಪೂರಕವಾಗಿ, ಇಡೀ ಉದ್ಯಮ ಕ್ಷೇತ್ರವೇ ನಲುಗಿದೆ. ನಿರ್ಮಾಣ ಕಾಮಗಾರಿ ನಡೆಸುವ ಕಾರ್ಮಿಕರು ಅತಂತ್ರ ಸ್ಥಿತಿಗೆ ತಲುಪಿದ್ದು ಜೀವನೋಪಾಯಕ್ಕೆ ಅನ್ಯ ದಾರಿಗಳಿಲ್ಲದೆ  ಕುಟುಂಬಗಳು ಬೀದಿಗೆ ಬಿದ್ದಿವೆ.

Advertisement

ಅಭಿವೃದ್ಧಿಗೂ ಹಿನ್ನಡೆ :

ಜಲ್ಲಿ ಕೊರತೆಯಿಂದ ಅಭಿವೃದ್ಧಿಯೂ ಕುಂಠಿತ ವಾಗಿದೆ. ಇದು ಸರಕಾರದ ಆರ್ಥಿಕತೆಗೂ ದೊಡ್ಡ ಹೊಡೆತವನ್ನೇ ನೀಡಿದೆ.  ಆರ್ಥಿಕ ವಾರ್ಷಿಕ ಕೊನೆಯಲ್ಲಿ ಕಾಮಗಾರಿಗಳು ನಡೆಯದೆ ಹಣಕಾಸಿನ ಯೋಜನೆಗಳು ಅನುಷ್ಠಾನಗೊಳ್ಳದೆ ಉಳಿದಿವೆ.

ಸಿಮೆಂಟ್‌ ಇನ್ನಿತರ  ಮೂಲಗಳಿಂದ  ಸರಕಾರಕ್ಕೆ ಜಿಎಸ್‌ಟಿ  ಬರುತ್ತಿದೆ. ನಿರ್ಮಾಣ ಕಾಮಗಾರಿಗಳು ನಿಂತ ಪರಿಣಾಮ ಸರಕಾರದ ಆದಾಯಕ್ಕೂ  ಹೊಡೆತ ಬಿದ್ದಿದೆ. ತೆರಿಗೆಯಲ್ಲೂ  ನಷ್ಟವಾಗುತ್ತಿದೆ.

ಕಳ್ಳ  ದಾರಿಯಲ್ಲಿ  ಜಲ್ಲಿ! : ದಾಸ್ತಾನು ಇದ್ದರೂ ಕೂಡ ಜಲ್ಲಿ ಪೂರೈಕೆಗೆ ಅವಕಾಶ ವಿರುವುದಿಲ್ಲ.  ಜಲ್ಲಿ  ಸಾಗಾಟ ಈಗ  ಸಾಧ್ಯವಾಗುತ್ತಿಲ್ಲ.  ಬಿಗಿ ಕಾನೂನು ಇರುವುದರಿಂದ ಸಾಗಾಟ ನಡೆಸಲು  ಲಾರಿಗಳ  ಮಾಲಕರು ಒಪ್ಪುತ್ತಿಲ್ಲ. ಕಳ್ಳ ದಾರಿಯಲ್ಲಿ ದುಪ್ಪಟ್ಟು ಮೊತ್ತಕ್ಕೆ  ಜಲ್ಲಿ ಮಾರಾಟವಾಗುತ್ತಿದ್ದು, ಉಳ್ಳವರು ಕಾನೂನಿನ ಕಣ್ತಪ್ಪಿಸಿ ದುಬಾರಿ ಹಣ ನೀಡಿ ಪಡೆಯುತ್ತಿದ್ದರೆ ಬಡವರು ಮಾತ್ರ ತಲೆ ಮೇಲೆ ಕೈ ಇಟ್ಟು ಕೊಂಡಿದ್ದಾರೆ.

ಜಲ್ಲಿ ಕೋರೆಯ  ಕೆಲಸ ಸ್ಥಗಿತಗೊಳಿಸಿದ್ದರಿಂದ ಅಭಿವೃದ್ಧಿ ಹಾಗೂ ನಿರ್ಮಾಣ  ಹಂತದ ಕೆಲಸಗಳಿಗೆ ತಡೆಯಾಗಿದೆ. ಸರಕಾರ ಅಫಿದವಿತ್‌ ನೀಡಿ ಚಾಲನೆ ಮಾಡುವಂತೆ ಹೇಳಿದೆ. ಇನ್ನೂ ಅಂತಿಮ  ನಿರ್ಧಾರವಾಗಿಲ್ಲ.

ರವೀಂದ್ರ ಶೆಟ್ಟಿ  ಬಜಗೋಳಿ, ಅಧ್ಯಕ್ಷರು ಕರಾವಳಿ ಸ್ಟೋನ್‌ ಆ್ಯಂಡ್‌ ಕ್ರಷರ್  ಓನರ್ ಅಸೋಸಿಯೇಶನ್‌ , ಉಡುಪಿ ಮತ್ತು ದ.ಕ.

ಅಭಿವೃದ್ಧಿಗೆ ಪೂರಕವಾಗಿ ಸರಕಾರದ ಕಾನೂನುಗಳಿಲ್ಲ. ಜನಪರವಾದ ನಿಯಮವನ್ನು ಜಾರಿಗೆ ತರುವಲ್ಲಿ ಜನಪ್ರತಿನಿಧಿಗಳು ಹಿಂದೆ  ಬಿದ್ದಿದ್ದಾರೆ. ಕೇವಲ ಜಲ್ಲಿ ಸಮಸ್ಯೆಯಷ್ಟೇ  ಅಲ್ಲ. ಮರಳು, ಖಾತೆ ಬದಲಾವಣೆ ಎಲ್ಲ ಹಂತಗಳಲ್ಲೂ  ಜನರು ತೊಂದರೆಗೀಡಾಗಿದ್ದಾರೆ. ಹಿತೇಶ್‌ ಶೆಟ್ಟಿಅಧ್ಯಕ್ಷ, ಸಿವಿಲ್‌ ಎಂಜಿನಿಯರ್‌ ಅಸೋಸಿಯೇಶನ್‌ , ಕಾರ್ಕಳ ತಾ|

Advertisement

Udayavani is now on Telegram. Click here to join our channel and stay updated with the latest news.

Next