ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಪ್ರತ್ಯಕ್ಷವಾದ ಮಿಡತೆಗಳು ಹಾನಿಕಾರಕವಲ್ಲ, ಇದೊಂದು ಅಳಿವಿನಂಚಿನಲ್ಲಿರುವ ಕೀಟವಾಗಿದ್ದು, ಸಂರಕ್ಷಣೆ ಅವಶ್ಯವಿರುತ್ತದೆ ಎಂದು ದ.ಕ. ಜಂಟಿ ಕೃಷಿ ನಿರ್ದೇಶಕರ ವರದಿಯಲ್ಲಿ ತಿಳಿಸಲಾಗಿದೆ. ಮೇ 30ರಂದು ಶಿರ್ಲಾಲು, ಕರಂಬಾರು ಪ್ರದೇಶದ ರಬ್ಬರ್ ತೋಟದಲ್ಲಿ ಮಿಡತೆಗಳು ಕಾಣಿಸಿಕೊಂಡಿದ್ದವು. ಮಿಡತೆಗಳನ್ನು ಸಂಗ್ರಹಿಸಿ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪಿಸಿಆರ್‌ಐ) ಕಾಸರಗೋಡು, ನ್ಯಾಷನಲ್ ಬ್ಯುರೋ ಆಫ್ ಅಗ್ರಿಕಲ್ಚರ್ ಇನ್‌ಸೆಕ್ಟ್ ರಿಸೋರ್ಸಸ್, ಬೆಂಗಳೂರು (ಎನ್‌ಬಿಎಐಆರ್) ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿಗೆ (ಜಿಕೆವಿಕೆ) ಕಳುಹಿಸಲಾಗಿತ್ತು.
ಅಲ್ಲಿನ ಕೀಟಶಾಸ್ತ್ರಜ್ಞರಿಂದ ಬಂದಿರುವ ವರದಿಯ ಪ್ರಕಾರ ಕೀಟವು ಒಲಾರ್ಚಸ್ ಮಿಲಿಯಾರಿಸ್ ಮಿಲಿಯಾರಿಸ್ ಸ್ಪಾಟೆಡ್ ಕಾಫಿ ಮಿಡತೆ ಎಂದು ಗುರುತಿಸಲ್ಪಟ್ಟಿದೆ. ಈ ಮಿಡತೆಗಳು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಅಳಿವಿನಂಚಿನಲ್ಲಿರುವ ಕೀಟವಾಗಿರುತ್ತವೆ (ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್‌ವೆಷನ್ ಆಫ್ ನೇಚರ್). ಈ ಕೀಟವು ಕಾಫಿ, ಬಾಳೆ, ಗೇರು, ಅಡಿಕೆ, ತೆಂಗು, ಏಲಕ್ಕಿ ಹಾಗೂ ಭತ್ತದ ಬೆಳೆಯ ಮೇಲೆ ಕಾಣಿಸುವ ಸಾಧ್ಯತೆಗಳಿದ್ದು, ಅಪಾಯಕಾರಿಯಾಗಿರುವುದಿಲ್ಲ. ಭೂಮಿಯ ಉಳುಮೆಯಿಂದ ಇವುಗಳು ಮೊಟ್ಟೆ ಹಂತದಲ್ಲಿ ನಿರ್ವಹಣೆ ಮಾಡಬಹುದಾಗಿರುತ್ತದೆ. ಕೀಟಬಾಧೆಯಿಂದ ಬೆಳೆ ನಾಶವಾದ ಸಂದರ್ಭ ಬೇವಿನ ಮೂಲದ ಕೀಟನಾಶಕಗಳನ್ನು ಅಥವಾ ಲ್ಯಾಂಬ್ಡಾ ಸೈಹಾಲೋಥ್ರಿನ್ 5 ಇಸಿ 1.5 ಮಿ.ಲೀ. ಪ್ರತಿ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬಹುದಾಗಿದೆ. ಇದೊಂದು ಅಳಿವಿನಂಚಿನಲ್ಲಿರುವ ಕೀಟವಾಗಿದ್ದು, ಸಂರಕ್ಷಣೆ ಅವಶ್ಯವಿದೆ ಎಂದು ದ.ಕ. ಜಂಟಿ ಕೃಷಿ ನಿರ್ದೇಶಕರ ವರದಿಯಲ್ಲಿ ತಿಳಿಸಲಾಗಿದೆ.
ವರದಿ ತಲುಪುತ್ತಿದ್ದಂತೆ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಿಡತೆ ನಿಯಂತ್ರಣಕ್ಕೆ ದ್ರಾವಣ ಸಿಂಪಡಿಸಿದ್ದು, ಕೃಷಿ ನಿಯಂತ್ರಣಕ್ಕೆ ಬಂದರಷ್ಟೆ ಕೃಷಿ ಉಳಿಸಬಹುದು ಎಂದು ಕರಂಬಾರಿನ ಕೃಷಿಕ ಅನಿಶ್ ತಿಳಿಸಿದ್ದಾರೆ.
ಮಿಡತೆ ಸೇರಿರುವ ಶಿರ್ಲಾಲು ಕೃಷಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಿಡತೆ ಜಾತಿಗಳನ್ನು ಜಿಕೆವಿಕೆಗೆ ಕಳುಹಿಸಿದ್ದು, ವರದಿ ಬಂದಿದೆ. ಕೃಷಿಗೆ ಇದರಿಂದ ಯಾವುದೇ ಹಾನಿಯಾಗದು. ಬೇವಿನ ದ್ರಾವಣ ಸಿಂಪಡಿಸುವಂತೆ ತಿಳಿಸಲಾಗಿದೆ.
ಡಾ| ಸೆಲ್ವಮಣಿ, ಜಿ.ಪಂ. ಸಿಇಒ