Advertisement

ಅಕಾಲಿಕ ಮಳೆಗೆ ಕೊಳೆಯುತ್ತಿದೆ ದ್ರಾಕ್ಷಿ ಬೆಳೆ; ವಿಜಯಪುರ ಜಿಲ್ಲೆ ಅನ್ನದಾತರು ಕಂಗಾಲು

05:54 PM Mar 18, 2023 | Nagendra Trasi |

ವಿಜಯಪುರ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿರುಗಾಳಿ, ಸಿಡಿಲು, ತುಂತುರು ಮಳೆಯಂಥ ವಾತಾವರಣದಲ್ಲಿ ಏರುಪೇರು ಕಂಡು ಬಂದಿದೆ. ಈ ಪ್ರಕೃತಿ ವೈಪರೀತ್ಯಕ್ಕೆ ಜಿಲ್ಲೆಯಲ್ಲಿ ಕಟಾವಿನ ಹಂತದಲ್ಲಿರುವ ದ್ರಾಕ್ಷಿ ಬೆಳೆಗಾರರು ಕಂಗಾಲಾಗಾಗಿದ್ದಾರೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಸುಮಾರು 70 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಇದ್ದು ಶೇ.20ರಷ್ಟು ಮಾತ್ರ ಕಟಾವಾಗಿದೆ. ಉಳಿದಂತೆ ಒಣದ್ರಾಕ್ಷಿ ಮಾಡಲು ಶೇ.60ರಷ್ಟು ದ್ರಾಕ್ಷಿ ಘಟಕದಲ್ಲಿದೆ. ಪರಿಣಾಮ ವಾತಾವರಣದ ವೈಪರೀತ್ಯದಿಂದ ರೈತರಿಗೆ ಒಣದ್ರಾಕ್ಷಿ ಗುಣಮಟ್ಟ ಕುಸಿತದ ಭೀತಿ ಎದುರಾಗಿದೆ.

ದ್ರಾಕ್ಷಿ ಬೆಳೆಯನ್ನೇ ಅಧಿ ಕವಾಗಿ ಬೆಳೆಯುವ ತಿಕೋಟಾ, ಬಬಲೇಶ್ವರ ಭಾಗದ ಹುಬನೂರು, ಕಳ್ಳಕವಟಗಿ, ಸೋಮದೇವರಹಿಟ್ಟಿ, ಮಲಕನದೇವರಹಟ್ಟಿ, ಬಿಜ್ಜರಗಿ, ಬಾಬಾನಗರ ಸೇರಿದಂತೆ ಇತರೆ ಪ್ರದೇಶದಲ್ಲಿ ಇದೀಗ ಒಣದ್ರಾಕ್ಷಿ ಮಾಡಲು ಹಸಿದ್ರಾಕ್ಷಿಯನ್ನು ಸಂಸ್ಕರಿಸುವ ಪ್ರಕ್ರಿಯೆ ನಡೆದಿದೆ.

ಈ ಹಂತದಲ್ಲಿ ತುಂತುರು ಮಳೆ ಹಾಗೂ ತಂಪು ವಾತಾವರಣದಿಂದ ಘಟಕದಲ್ಲಿನ ದ್ರಾಕ್ಷಿ ರಕ್ಷಿಸಲು ರೈತರು ಪ್ಲಾಸ್ಟಿಕ್‌ ಹೊದಿಕೆ ಹಾಕುವ ಪ್ರಯತ್ನ ನಡೆಸಿದ್ದು, ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಲ್ಲಿದ್ದಾರೆ.

ಕಟಾವಿನ ಹಂತದಲ್ಲಿ ತೋಟದ ಬಳ್ಳಿಯಲ್ಲಿರುವ ದ್ರಾಕ್ಷಿಯ ಸಕ್ಕರೆ ಅಂಶದ ಮೂಲಗುಣ ಕುಸಿತವಾಗಿ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ. ಈ ಹಂತದಲ್ಲಿ ಬಿಸಿಲಿನ ತಾಪದ ಬದಲಾಗಿ ಏಕಾಏಕಿ ತಂಪು ಹಾಗೂ ತುಂತುರು ಮಳೆ ಸುರಿದಿರುವುದು ಒಣದ್ರಾಕ್ಷಿ ಮಾಡುವ ರೈತರನ್ನು ಹೈರಾಣಾಗುವಂತೆ ಮಾಡಿದೆ. ಇಷ್ಟಾದರೂ ಜಿಲ್ಲೆಯ ಅಧಿಕಾರಿಗಳು ದ್ರಾಕ್ಷಿ ಬೆಳೆ ಹಾನಿ ಸಮೀಕ್ಷೆಗೆ ಮುಂಗಾಗಿಲ್ಲ ಎಂಬ ಅಸಮಾಧಾನ ಕೇಳಿ ಬಂದಿದೆ.

Advertisement

ವಾತಾವರಣದಲ್ಲಿನ ಏರುಪೇರಿನಿಂದ ಒಣದ್ರಾಕ್ಷಿ ಘಟಕದಲ್ಲಿರುವ ದ್ರಾಕ್ಷಿ ಸಕ್ಕರೆ ಅಂಶದಲ್ಲಿ ಕುಸಿತವಾಗಲಿದ್ದು, ಒಣದ್ರಾಕ್ಷಿಯೂ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೇ ಅಧಿ ಕ ತಂಪು ಆವರಿಸಿ, ದ್ರಾಕ್ಷಿ ಕೊಳೆಯಲು ಆರಂಭಿಸುತ್ತದೆ. ಇದರಿಂದ ಒಣದ್ರಾಕ್ಷಿ ಗುಣಮಟ್ಟ ಕಳೆದುಕೊಳ್ಳಲಿದೆ. ಒಣದ್ರಾಕ್ಷಿ ಘಟಕದ ಮೌಲ್ಯವರ್ಧನೆ ಹಂತದಲ್ಲಿ ವಾತಾವರಣದ ವೈಪರೀತ್ಯಕ್ಕೆ ಸಿಲುಕಿದೆ. ಇದರಿಂದ ಗುಣಮಟ್ಟ ಕಳೆದುಕೊಂಡು ಬೆಲೆಯಲ್ಲೂ ಶೇ.70-80 ಬೆಲೆ ಕುಸಿತವಾಗಲಿದೆ ಎಂಬ ಆತಂಕ ರೈತರನ್ನು ಕಾಡಲಾರಂಭಿಸಿದೆ.

ಇನ್ನು ಕಟಾವಿನ ಹಂತದಲ್ಲಿ ಬಳ್ಳಿಯಲ್ಲೇ ದ್ರಾಕ್ಷಿ ಉಳಿದಿದ್ದರೂ ದ್ರಾಕ್ಷಿಯಲ್ಲಿನ ಸಕ್ಕರೆ ಅಂಶ ಸೋರಿ ಹಾಳಾಗುತ್ತದೆ. ಉಳಿಕೆ ದ್ರಾಕ್ಷಿ ಬಳ್ಳಿಯಲ್ಲೇ ಕೊಳೆಯಲು ಆರಂಭಿಸುತ್ತದೆ. ಇದರಿಂದ ಕೀಟ-ರೋಗಗಳು ಕಾಣಿಸಿಕೊಂಡು ದ್ರಾಕ್ಷಿಬೆಳೆ ಹಾಳಾಗಲಿದೆ ಎಂಬ ಆತಂಕ ರೈತರನ್ನು ಕಂಗಾಲಾಗಿಸಿದೆ.

ದ್ರಾಕ್ಷಿ ಬೆಳೆಗಾರರು ಬೆಳೆ ವಿಮೆ ಮಾಡಿಸಿದರೂ ಹಲವು ಸಂದರ್ಭಗಳಲ್ಲಿ ವಿಮಾ ಕಂಪನಿಗಳು ನಷ್ಟವಾದ ಬೆಳೆಗೆ ವಿಮೆ ನೀಡುವಲ್ಲಿ ನೆಪಗಳನ್ನು ಹೇಳಲಾರಂಭಿಸುತ್ತವೆ. ವಿಮೆ ಮಾಡಿಸಿದ ರೈತರಿಗೆ ಸರ್ಕಾರ ಬೆಳೆ ಹಾನಿ ನೀಡುವುದಿಲ್ಲ. ಹೀಗಾಗಿ ರೈತರಿಗೆ ವಿಮೆ ಕಂಪನಿಗಳ ಮೇಲೂ ವಿಶ್ವಾಸ ಇಲ್ಲದಂತಾಗಿದೆ. ಸರ್ಕಾರವೂ ನಮ್ಮ ನೆರವಿಗೆ ಬರುತ್ತಿಲ್ಲ ಎಂದು ಬಾಧಿತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಕಳೆದ ವರ್ಷ ಅತಿವೃಷ್ಟಿಯಾದಾಗ ಬೆಳಗಾವಿ ಹಾಗೂ ಬಾಗಲಕೋಟೆ ರೈತರಿಗೆ ಬೆಳೆ ವಿಮೆ ಹಣವೂ ಪಾವತಿಯಾಗಿದೆ. ಅಲ್ಲದೇ ಸರ್ಕಾರ ಪ್ರತಿ ಹೆಕ್ಟೇರ್‌ಗೆ 28 ಸಾವಿರ ರೂ. ಪರಿಹಾರವನ್ನೂ ನೀಡಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿಬೆಳೆ ಹಾನಿಯಾದ ರೈತರಿಗೆ ಸರ್ಕಾರದ ಪರಿಹಾರವೂ ಬರಲಿಲ್ಲ, ವಿಮೆ ಕಂಪನಿಗಳೂ ಬಹುತೇಕ ರೈತರಿಗೆ ವಿಮೆ ನೀಡಲಿಲ್ಲ ಎಂಬ ಸಿಡುಕು ಹೊರ ಹಾಕುತ್ತಿದ್ದಾರೆ ರೈತರು.

ದೇಶದಲ್ಲೇ ಅತಿ ಹೆಚ್ಚು ಹಾಗೂ ಗರಿಷ್ಠ ಗುಣಮಟ್ಟದ ದ್ರಾಕ್ಷಿ ಬೆಳೆಯುವಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು ಪ್ರಮುಖ ವಾಣಿಜ್ಯ ತೋಟಗಾರಿಕೆ ಬೆಳೆ ಎನಿಸಿದೆ. ಪ್ರಕೃತಿ ವೈಪರೀತ್ಯ ಕಂಡು ಬಂದಾಗ ಲಕ್ಷಾಂತರ ರೂ. ನಷ್ಟವಾಗುತ್ತದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ಬರುತ್ತಿಲ್ಲ ಎಂಬ ಅಳಲು ಅನ್ನದಾತನದ್ದು.

ಜಿಲ್ಲೆಯಲ್ಲಿ ಬೆಳೆದ ಬಹುತೇಕ ದ್ರಾಕ್ಷಿ ಒಣದ್ರಾಕ್ಷಿ ಮಾಡುವ ಘಟಕದಲ್ಲಿ ಸಿಲುಕಿದ್ದು, ಹಸಿದ್ರಾಕ್ಷಿಯೂ ಗುಣಮಟ್ಟ ಕಳೆದುಕೊಂಡು ನಷ್ಟವಾಗಲಿದೆ. ಅಧಿಕಾರಿಗಳು ಸಮೀಕ್ಷೆಗೆ ಮುಂದಾಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರ ನಮ್ಮ ನೆರವಿಗೆ ಬರುತ್ತಿಲ್ಲ. ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ವಿಮೆ ಹಾಗೂ ಸರ್ಕಾರದ ಪರಿಹಾರ
ದೊರೆತರೂ ನಮ್ಮ ಜಿಲ್ಲೆಯ ಬಾಧಿ ತ ಯಾವೊಬ್ಬ ರೈತನಿಗೂ ನ್ಯಾಯ ಸಿಕ್ಕಿಲ್ಲ.
ಎಸ್‌.ಎನ್‌. ಬಾಗಲಕೋಟ, ದ್ರಾಕ್ಷಿ ಬೆಳಗಾರ,
ಸೋಮದೇವರಹಟ್ಟಿ, ತಾ| ತಿಕೋಟಾ

ಸರ್ಕಾರ ರೂಪಿಸಿರುವ ಎನ್‌ಡಿಆರ್‌ ಎಫ್‌ ಮಾನಂದಡ ಆಧಾರದಲ್ಲಿ ಬೆಳೆ ಹಾನಿ ಸಮೀಕ್ಷೆ ಹಾಗೂ ಹಾನಿಯ ವರದಿ ಸಿದ್ಧಪಡಿಸಲಾಗುತ್ತದೆ. ಅಕಾಲಿಕ ಮಳೆಯಿಂದಾದ ದ್ರಾಕ್ಷಿ ಬೆಳೆ ಹಾನಿ ಕುರಿತು ರೈತರು ಮಾಹಿತಿ ನೀಡಿದರೆ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತೇವೆ.
ಎಸ್‌.ಎಂ. ಬರಗಿಮಠ, ಉಪ
ನಿರ್ದೇಶಕರು, ತೋಟಗಾರಿಕೆ ಇಲಾಖೆ, ವಿಜಯಪುರ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next