ತಿ.ನರಸೀಪುರ: ಹಳೇ ಸಂತೆಮಾಳ ಮೈದಾನವನ್ನು ಸರ್ಕಾರಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಸಮುತ್ಛಯ(ಕ್ಯಾಂಪಸ್)ವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ಹೊರಳಹಳ್ಳಿ ಫಾರಂನಲ್ಲಿ ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಕಾಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಮನವಿ ಸ್ವೀಕರಿಸಿ ಮಾತನಾಡಿ, ಹಳೇ ಸಂತೆಮಾಳ ಮೈದಾನದಲ್ಲಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಆಗಿ ಅಭಿವೃದ್ಧಿಪಡಿಸಲು ಸರ್ಕಾರಿ ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುವುದು ಎಂದರು.
ಕೇಂದ್ರ ಪುರಸ್ಕೃತ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದ್ದರೆ, ಪದವಿ ಪೂರ್ವ ಕಾಲೇಜಿನಲ್ಲಿ 54 ಲಕ್ಷ ರೂ ವೆಚ್ಚದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಪಿಯು ಕಾಲೇಜಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚುವರಿಯಾಗಿ 1 ಕೋಟಿ ರೂಗಳ ಯೋಜನೆಯ ಪ್ರಸ್ತಾಪ ಅನುಮೋದನೆ ಹಂತದಲ್ಲಿದೆ.
ಕಾಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರತ್ನಮ್ಮ ಗೋಪಾಲರಾಜು, ಪ್ರಭಾರ ಪ್ರಾಂಶುಪಾಲ ಎಂ.ಸೋಮಣ್ಣ ಹಾಗೂ ಉಪನ್ಯಾಸಕ ಎಂ.ಶಿವಪ್ಪ ಕಾಪೌಂಡ್ ನಿರ್ಮಾಣಕ್ಕೆ ನೆರವು ನೀಡುವಂತೆ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.
ಯುವ ಮುಖಂಡ ಸುನೀಲ್ ಬೋಸ್, ಜಿಪಂ ಸದಸ್ಯರಾದ ಮಂಗಳ ಮಹದೇವಸ್ವಾಮಿ, ಟಿ.ಹೆಚ್.ಮಂಜುನಾಥನ್, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಉಪಾಧ್ಯಕ್ಷೆ ಸುಂದರಮ್ಮ, ಗ್ರಾಪಂ ಅಧ್ಯಕ್ಷೆ ಚೆನ್ನಮ್ಮ, ಉಪಾಧ್ಯಕ್ಷೆ ಮಂಜುಳ ಷಡಕ್ಷರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ವಜ್ರೆಗೌಡ, ತಾಪಂ ಸದಸ್ಯರಾದ ಆರ್.ಚಲುವರಾಜು, ರಾಮಲಿಂಗಯ್ಯ, ಕೆ.ಎಸ್.ಗಣೇಶ್, ಶಿವಮ್ಮ ಮಹದೇವ, ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ,
ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ಮೃಗಾಲಯ ಪ್ರಾಧಿಕಾರ ನಿರ್ದೇಶಕಿ ಲತಾ ಜಗದೀಶ್, ತಹಶೀಲ್ದಾರ್ ಬಿ.ಶಂಕರಯ್ಯ, ಕಾರ್ಯನಿರ್ವಹಕ ಅಧಿಕಾರಿ ಬಿ.ಎಸ್.ರಾಜು, ಲೋಕೋಪಯೋಗಿ ಎಇಇ ಆರ್.ವಿನಯ್‌ಕುಮಾರ್, ಜಿಪಂ ಎಇಇ ಎಸ್.ಸಿದ್ದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಿಡಿಪಿಒ ಬಿ.ಎನ್.ಬಸವರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.