ಬೆಂಗಳೂರು: ಕಾರ್ಯಭಾರದ ಕೊರತೆಯಿರುವ ಅನುದಾನಿತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಿಯೋಜಿಸಲು ಅವಕಾಶ ಇಲ್ಲವೆಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಈ ಆದೇಶದ ಬಗ್ಗೆ ಪಿಯು ಉಪನ್ಯಾಸಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಸರ್ಕಾರ 2018ರಲ್ಲಿ ಹೊರಡಿಸಿದ್ದ ಆದೇಶದ ಪ್ರಕಾರ ಅತಿ ವಿಶೇಷ ಸಂದರ್ಭದಲ್ಲಿ ಹಾಗೂ ಸಮೀಪದಲ್ಲಿ ಯಾವುದೇ ಪದವಿ ಪೂರ್ವ ಕಾಲೇಜಿನಲ್ಲಿ ಸಂಬಂಧಿಸಿದ ವಿಷಯದ ಉಪನ್ಯಾಸಕರ ಹುದ್ದೆ ಖಾಲಿಯಿಲ್ಲದಿದ್ದರೆ ಅಥವಾ ಲಭ್ಯವಿರದಿದ್ದರೆ ಮಾತ್ರ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಬಂಧಿಸಿದ ಉಪನ್ಯಾಸಕರ ಹುದ್ದೆ ಖಾಲಿಯಿದ್ದರೆ ವಾರದಲ್ಲಿ ಮೂರು ದಿನ ಮಾತ್ರ ನಿಯೋಜಿಸಲು ಅವಕಾಶ ಕಲ್ಪಿಸಲಾಗಿತ್ತು.
ಆದರೆ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಂಜೂರಾಗಿರುವ ಹುದ್ದೆಗಳು ಸರ್ಕಾರದ ಹುದ್ದೆಗಳಲ್ಲ. ಈ ಹುದ್ದೆಗಳ ಸಿಬ್ಬಂದಿ ನೇಮಕಾತಿ ಪ್ರಾಧಿಕಾರವು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯೇ ಆಗಿರುತ್ತದೆ. ಈ ಸಿಬ್ಬಂದಿಗಳನ್ನು ಸರ್ಕಾರದ ಇಲಾಖೆಗಳ ಹುದ್ದೆಗಳಿಗೆ ಎದುರಾಗಿ ನಿಯೋಜಿಸಲು ಅವಕಾಶವಿಲ್ಲ. ಅದ್ದರಿಂದ ಖಾಸಗಿ ಪಪೂ ಕಾಲೇಜಿನ ಹುದ್ದೆ ಖಾಲಿಯಿದ್ದರೆ ಇನ್ನೊಂದು ಖಾಸಗಿ ಕಾಲೇಜಿನ ಹುದ್ದೆಯಿಂದ ಸರಿದೂಗಿಸಬಹುದೇ ಹೊರತು ಸರ್ಕಾರಿ ಕಾಲೇಜಿನ ಹುದ್ದೆಯಿಂದಲ್ಲ ಎಂದು ಹಣಕಾಸು ಇಲಾಖೆ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
ಆದರೆ ಸರ್ಕಾರದ ಈ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಉಪನ್ಯಾಸಕ ಸಂಘದ ಕಾರ್ಯಾಧ್ಯಕ್ಷ ವೆಂಕಟೇಶ್ ಅವರು, ಸರ್ಕಾರದ ಈ ನಡೆಯಿಂದ ಕಾರ್ಯಭಾರವಿಲ್ಲದ ಅನುದಾನಿತ ಕಾಲೇಜಿನ ಶಿಕ್ಷಕರು ವಾರದಲ್ಲಿ ಮೂರು ದಿನ 80-85 ಕಿಮೀ ಸಂಚರಿಸಿ ಇನ್ನೊಂದು ಕಾಲೇಜಿಗೆ ಹೋಗಿ ಪಾಠ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎನ್‌ಸಿಇಆರ್‌ಟಿ ಪಠ್ಯ ಕ್ರಮವನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತದೆ. ಅದರ ಪ್ರಕಾರ ವಿದ್ಯಾರ್ಥಿ – ಉಪನ್ಯಾಸಕರ ಅನುಪಾತ 40:1 ಇರಬೇಕು. ಆದರೆ ನಮ್ಮಲ್ಲಿ ಪ್ರ್ಯಾಕ್ಟಿಕಲ್ ಇಲ್ಲದ ವಿಷಯಗಳಲ್ಲಿ 320:1, ಪ್ರ್ಯಾಕ್ಟಿಕಲ್ ಇರುವ ವಿಷಯಗಳಲ್ಲಿ 160:1 ಇದೆ. ಸರ್ಕಾರ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವುದರ ಜೊತೆಗೆ ಸರ್ಕಾರಿ ಉಪನ್ಯಾಸಕರ ಹುದ್ದೆ ತುಂಬಲು ಯತ್ನಿಸಬೇಕು. ಸರ್ಕಾರದ ಈ ನಿಯಮದಿಂದಾಗಿ ಉಪನ್ಯಾಸಕರ ಕೊರತೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.