ಮಾರಿಮುತ್ತು ಖ್ಯಾತಿಯ ನಟಿ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಸಿನಿಮಾ ರಂಗಕ್ಕೆ ಎಂಟ್ರಿಯಾಗಿರುವ ಕುರಿತು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. “ಶಶಿಕಲಾ ಲವ್ವರ್ ಆಫ್ ಪುಟ್ಟರಾಜು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಜಯಶ್ರೀ, ಈಗ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಹೌದು, ಕನ್ನಡದಲ್ಲೇ ಒಳ್ಳೆಯ ಚಿತ್ರಗಳನ್ನು ಎದುರು ನೋಡುತ್ತಿದ್ದ ಜಯಶ್ರೀಗೆ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆ. ಆ ಚಿತ್ರಕ್ಕೆ “ಮೇರಾ ದೋಸ್ತ್’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ಮುರಳಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.
ತೆಲುಗಿನ ಈಟಿವಿಯಲ್ಲಿ ಒಂದು ದಶಕದ ಕಾಲ ಮನರಂಜನೆ ವಿಭಾಗದಲ್ಲಿ ಕೆಲಸ ಮಾಡಿದ್ದ ಮುರಳಿ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಇನ್ನು, ವಿಜಯ್ ಎಂಬ ಹೊಸ ಪ್ರತಿಭೆ ಈ ಚಿತ್ರದ ನಾಯಕ. ಚಿತ್ರದಲ್ಲಿ ನಾಯಕ, ನಾಯಕಿ ಹೊಸಬರಿದ್ದರೆ, ಉಳಿದಂತೆ ಪೋಷಕ ಪಾತ್ರಗಳಲ್ಲಿ ಅನುಭವಿ ಕಲಾವಿದರೇ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಜಯಶ್ರೀ ಮಾತು.
ಅಂದಹಾಗೆ, ಇದು ಗೆಳೆತನ ಮತ್ತು ಪ್ರೀತಿ ನಡುವಿನ ಕಥೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಇರುವ ಕಥೆ ಇದಾಗಿದ್ದು, ಜಯಶ್ರೀ ಅವರಿಗಿಲ್ಲಿ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆಯಂತೆ. ಒಂದು ಹಳ್ಳಿ ಹುಡುಗಿಯಾಗಿ, ಇನ್ನೊಂದು ಕಾಲೇಜು ಓದುವ ಮಾರ್ಡನ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
ಅದೊಂದು ರೀತಿ ಮನೆಯಲ್ಲಿ ಮುಗ್ಧವಾಗಿರುವ ಹುಡುಗಿ, ಹೊರಗೆ ಸಿಕ್ಕಾಪಟ್ಟೆ ತರೆಲ ಮಾಡುವ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ವೈದ್ಯರೊಬ್ಬರು ನಿರ್ಮಿಸುತ್ತಿದ್ದು, ಅವರಿಗೂ ಇದು ಮೊದಲ ಚಿತ್ರವಂತೆ. ಇನ್ನು, “ಮೇರಾ ದೋಸ್ತ್’ ಚಿತ್ರಕ್ಕೆ ಮೇ 6 ರಿಂದ ಚಿತ್ರೀಕರಣ ಶುರುವಾಗಲಿದೆ.
ಸುಮಾರು 30 ದಿನಗಳ ಕಾಲ ಮೂರು ಹಂತದಲ್ಲಿ ಹೈದರಾಬಾದ್ ನಗರ, ಹಳ್ಳಿ ಮತ್ತು ರಾಮೋಜಿ ಫಿಲ್ಮ್ಸಿಟಿ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡಲು ನಿರ್ಧರಿಸಿರುವ ಚಿತ್ರತಂಡದಲ್ಲಿ ನುರಿತ ತಂತ್ರಜ್ಞರು ಕೆಲಸ ಮಾಡಲಿದ್ದಾರಂತೆ. ಜಯಶ್ರೀ ಅವರಿಗೆ ತೆಲುಗು ಭಾಷೆ ಶೇ.40 ರಷ್ಟು ಗೊತ್ತಿದೆ.
ಸಲೀಸಾಗಿ ಮಾತನಾಡಲು ಬರದಿದ್ದರೂ, ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬಲ್ಲರಂತೆ. ತಮ್ಮ ಎರಡನೇ ಚಿತ್ರಕ್ಕೆ ತೆಲುಗಿನಿಂದ ಅವಕಾಶ ಬಂದಿರುವುದರಿಂದ ಅವರಿಗೆ ಸಹಜವಾಗಿಯೇ ಖುಷಿ ಇದೆ. ಹಾಗಂತ ಅವರು ಅಲ್ಲೇ ಇದ್ದು, ಸಿನಿಮಾಗಳನ್ನು ಮಾಡುತ್ತಾರಾ ಎಂಬ ಪ್ರಶ್ನೆಗೆ,
“ಖಂಡಿತ ಇಲ್ಲ ಎಂಬ ಉತ್ತರ ಬರುತ್ತದೆ. ಕನ್ನಡದಲ್ಲಿ ಒಂದೆರಡು ಮಾತುಕತೆ ನಡೆಯುತ್ತಿದ್ದು, ಈ ಚಿತ್ರ ಮುಗಿಸಿಕೊಂಡು ಪುನಃ ಕನ್ನಡದಲ್ಲೇ ಕೆಲಸ ಮಾಡ್ತೀನಿ. ಒಳ್ಳೆಯ ಅವಕಾಶ ಸಿಕ್ಕರೆ ಮಾತ್ರ ಯಾವ ಭಾಷೆ ಇದ್ದರೂ ಮಾಡ್ತೀನಿ’ ಎನ್ನುತ್ತಾರೆ ಜಯಶ್ರೀ.