ಮಸ್ಕಿ: ತಾಲೂಕಿನ ಒಟ್ಟು 27 ಗ್ರಾಪಂಗಳಲ್ಲಿ 21 ಗ್ರಾಪಂಗಳಿಗೆ ಮಾತ್ರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, 16 ಬಿಜೆಪಿ, 5 ಗ್ರಾಪಂಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿದೆ!.
ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ಮುಂದಿರುವಾಗಲೇ ನಡೆದ ಗ್ರಾಪಂ ಚುನಾವಣೆ ಫಲಿತಾಂಶ ರಾಜಕೀಯ ಪಕ್ಷಗಳ ಬಲಾ-ಬಲ ವಿಶ್ಲೇಷಣೆಗೆ ದಾರಿಯಾಗಿದೆ. ಬಹು ಜಿದ್ದಿನಿಂದಲೇ ಅಖಾಡಕ್ಕೆ ಇಳಿದಿದ್ದ ಎರಡು ರಾಜಕೀಯ ಪಕ್ಷಗಳು ಕೂಡ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ತಮ್ಮ ಪಾರಮ್ಯ ಮೆರೆದಿದ್ದವು.
ಕೇವಲ ಸದಸ್ಯರ ಆಯ್ಕೆಯಲ್ಲಿ ಮಾತ್ರವಲ್ಲದೇ, ಅಧಿ ಕಾರ ಚುಕ್ಕಾಣಿ ಹಿಡಿಯುವ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲೂ ಪ್ರತಿಷ್ಠೆ ಪಣಕ್ಕೆ ಇಟ್ಟು ರಾಜಕೀಯ ದಾಳ ಉರುಳಿಸಿದ್ದರು. ಆದರೆ ಬಹುತೇಕ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಅ ಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಮುಂಚೂಣಿಯಲ್ಲಿದ್ದರೆ, ಕಾಂಗ್ರೆಸ್ ಮಾತ್ರ ಪಂಚಾಯಿತಿ ಸದಸ್ಯರ ಸಂಖ್ಯೆ ಎಣಿಕೆ ಮೂಲಕವೇ ತೃಪ್ತಿಪಟ್ಟುಕೊಂಡಿದೆ.
ಎಲ್ಲಿ ಯಾವುದು?: ತಾಲೂಕಿನ 27 ಗ್ರಾಪಂಗಳ ಪೈಕಿ 4 ಪಂಚಾಯಿತಿಗಳಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗಿತ್ತು. 23 ಗ್ರಾಪಂಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಇದರಲ್ಲಿ ಬಪೂ³ರು, ತಿಡಿಗೋಳ ಪಂಚಾಯಿತಿಗಳಿಗೆ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ತಡೆ ಬಿದ್ದಿದೆ. ಹೀಗಾಗಿ ಒಟ್ಟು 21 ಗ್ರಾಪಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಇದರಲ್ಲಿ ಸಂತೆಕಲ್ಲೂರು, ಸರ್ಜಾಪೂರ, ಮಟ್ಟೂರು, ಮಾರಲದಿನ್ನಿ, ಮೆದಕಿನಾಳ, ಕನ್ನಾಳ, ತಲೇಖಾನ್, ತೋರಣದಿನ್ನಿ, ಹಿರೇದಿನ್ನಿ, ಗುಡದೂರು, ಕಲ್ಮಂಗಿ, ಉಮಲೂಟಿ, ವಿರುಪಾಪುರ, ಗುಂಡಾ, ಉದಾºಳ,ಗೌಡನಭಾವಿಯಲ್ಲಿ ಬಿಜೆಪಿ ಬೆಂಬಲಿತರು ಚುಕ್ಕಾಣಿ ಹಿಡಿಯುವ ಮೂಲಕ ಬಿಜೆಪಿ ಬಲ ಹೆಚ್ಚಿಸಿದ್ದಾರೆ.
ಇಲ್ಲಿ ಕಾಂಗ್ರೆಸ್ ಪಾಲು: ಇನ್ನು ಉಳಿದ ಗುಂಜಳ್ಳಿ, ಕೋಳಬಾಳ, ಮಲ್ಲದಗುಡ್ಡ, ಹಾಲಾಪುರ, ಅಡವಿಭಾವಿತಾಂಡ ಗ್ರಾಪಂಗಳು ಕಾಂಗ್ರೆಸ್ ವಶವಾಗಿದ್ದು, ಇಷ್ಟರಲ್ಲಿ ಕೈ ಬೆಂಬಲಿತರು ಅಧಿ ಕಾರ ಚುಕ್ಕಾಣಿಯಲ್ಲಿದ್ದಾರೆ. ವಿಶೇಷವಾಗಿ ಮಲ್ಲದಗುಡ್ಡ ಗ್ರಾಪಂನಲ್ಲಿ ಅಧ್ಯಕ್ಷ ಬಿಜೆಪಿಬೆಂಬಲಿತರಾದರೆ, ಉಪಾಧ್ಯಕ್ಷರು ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಮೆದಕಿನಾಳ ಪಂಚಾಯಿತಿಯಲ್ಲೂ ಅಧ್ಯಕ್ಷೆ ಬಿಜೆಪಿ, ಉಪಾಧ್ಯಕ್ಷ ಕಾಂಗ್ರೆಸ್ ಪಾಲಾಗಿದೆ.
ಇದನ್ನೂ ಓದಿ:ನಾಮಪತ್ರ ಸಲ್ಲಿಸಿದ ಸದಸ್ಯ ಚುನಾವಣೆ ಸಭೆಗೆ ಗೈರು !
ಬಲಾಬಲ ವಿಶ್ಲೇಷಣೆ: ಮಸ್ಕಿ ಕ್ಷೇತ್ರಕ್ಕೆ ಬೈ ಎಲೆಕ್ಷನ್ ಬಾಕಿ ಇರುವ ಕಾರಣಕ್ಕೆ ಈ ಬಾರಿ ಪಂಚಾಯಿತಿ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸಹಜವಾಗಿಯೇ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಕೇವಲ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮಾತ್ರವಲ್ಲದೇ ಸ್ವತಃ ಎರಡು ಪಕ್ಷದ ನಾಯಕರೇ ಮುಂದಾಳತ್ವ ವಹಿಸಿ ಗ್ರಾಪಂ ಗದ್ದುಗೆ ಹಿಡಿಯಲು ರಾಜಕೀಯ ತಂತ್ರ ರೂಪಿಸಿದ್ದರು. ಸದಸ್ಯರ ಅಪಹರಣ, ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯುವುದು ಸೇರಿ ಹಲವು ತಂತ್ರಗಳ ಮೂಲಕವೇ ಅಧಿ ಕಾರ ಚುಕ್ಕಾಣಿಗೆ ಹಲವು ರೀತಿಯ ಕಸರತ್ತು ನಡೆಸಿದ್ದರು. ಇಲ್ಲಿನ ಗುಡದೂರು ಗ್ರಾಪಂ, ಗುಂಡಾ ಸೇರಿ ಹಲವು ಕಡೆಗಳಲ್ಲಿ ಅಧಿ ಕಾರ ಚುಕ್ಕಾಣಿಗೆ ಬೆಂಬಲಿಸಿದ ಸದಸ್ಯರಿಗೆ ಚಿನ್ನದ ಉಡುಗೋರೆಯೂ ನೀಡಲಾಗಿದೆ. ಈ ಮೂಲಕ ಸದ್ಯ ಗ್ರಾಪಂಗಳನ್ನು ಎರಡು ಪಕ್ಷದವರು ತಮ್ಮ ವಶಕ್ಕೆ ಪಡೆದಿದ್ದು, ಇದೇ ಆಧಾರದ ಮೇಲೆ ಈಗ ಬೈ ಎಲೆಕ್ಷನ್‌ಗೆ ಸಿದ್ಧತೆಗಳು ನಡೆದಿವೆ.
ಮಲ್ಲಿಕಾರ್ಜುನ ಚಿಲ್ಕರಾಗಿ