Advertisement

ಗ್ರಾಪಂ ಕಣದಲ್ಲಿ ಪ್ರಚಾರದ ಅಬ್ಬರ

02:31 PM Dec 17, 2020 | Adarsha |

ಕೊಪ್ಪಳ: ಗ್ರಾಪಂ ಚುನಾವಣೆಯಲ್ಲಿ ಭರ್ಜರಿ ಪೈಪೋಟಿ ನಡೆದಿದ್ದು, ಅಭ್ಯರ್ಥಿಗಳು ಜಿದ್ದಿಗೆ ಬಿದ್ದವರಂತೆ ಪ್ರಚಾರಕ್ಕಿಳಿದಿದ್ದಾರೆ. ಅದರಲ್ಲೂ ಮತದಾರರಿಗೆ ಸರಳವಾಗಿ ಗುರುತು ಸಿಗುವಂತಹ ರೈತಾಪಿ ವರ್ಗಕ್ಕೆ ಸಂಬಂಧಿ  ಸಿದ, ಗೃಹ ಬಳಕೆ ವಸ್ತಗಳ ಚಿಹ್ನೆಯನ್ನೇ ಪಡೆದು ಮತಬೇಟೆಗೆ ಇಳಿದಿದ್ದಾರೆ. ಕೆಲವೆಡೆ ಯುವಕರ ಗುಂಪಿಗೆ ಚಿಕನ್‌, ಮಟನ್‌ ಪೂರೈಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.

Advertisement

ಹೌದು. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಹಿಂದಿನ ಎಲ್ಲ ಚುನಾವಣೆಗಳನ್ನೂ ಮೀರಿಸುವಂತೆ ಪೈಪೋಟಿ ಏರ್ಪಟ್ಟಿದೆ. ಕೋವಿಡ್‌ -19 ಭಯವನ್ನೇ ಮರೆತು ಅಭ್ಯರ್ಥಿಗಳು ಕುಟುಂಬ ಸದಸ್ಯರ ಜೊತೆಗೆ ಮನೆ ಮನೆಗೆ ಸುತ್ತಾಡಿ ಮತಯಾಚಿಸುತ್ತಿದ್ದಾರೆ. ಇನ್ನೂ ರಾಷ್ಟ್ರೀಯ ಪಕ್ಷಗಳ ನಾಯಕರು ಈ ಬಾರಿ ಗ್ರಾಪಂ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ತಮ್ಮ ಬೆಂಬಲಿಗರ ಗೆಲುವಿಗೆ ವಿವಿಧ ತಂತ್ರಗಾರಿಕೆ ಮಾಡುತ್ತಿದ್ದಾರೆ.

ಒಂದೇ ಸ್ಥಾನಕ್ಕೆ ನಾಲ್ಕೈದು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೆ, ಹಿರಿಯರ ಸಮ್ಮುಖದಲ್ಲಿ ಕುಳಿತು ನಾಲ್ವರನ್ನು ಪ್ರಚಾರದಲ್ಲಿ ತೊಡಗದಂತೆ ಆಂತರಿಕ ಸೂಚನೆ ನೀಡಿ, ಗೆಲ್ಲುವ ಅಭ್ಯರ್ಥಿಯ ಪರ ನಿಂತು ಚುನಾವಣೆ ಮಾಡಬೇಕೆಂದು ಮುಖಂಡರು ಸಲಹೆ ನೀಡುತ್ತಿದ್ದಾರೆ ಎನ್ನುವ ಮಾತುಗಳು ಗ್ರಾಮದ ಹಂತದಲ್ಲಿ ಕೇಳಿ ಬಂದಿವೆ.

ತರಹೇವಾರಿ ಚಿಹ್ನೆಗಳು:

ಈಗಾಗಲೇ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಚಿಹ್ನೆಯನ್ನು ನೀಡಿದ್ದಾರೆ. ಹಳ್ಳಿ ಜನ ಸಹಜವಾಗಿಯೇ ಗ್ರಾಮೀಣ ಭಾಗದಲ್ಲಿ ರೈತಾಪಿ ವಲಯಕ್ಕೆ ಸಂಬಂಧಿ ಸಿದ ಹಾಗೂ ಗೃಹ ಬಳಕೆ ವಸ್ತುಗಳ ಚಿಹ್ನೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪಂಪ್‌ ಸೆಟ್‌, ಟ್ರಾಕ್ಟರ್‌, ಟಿಲ್ಲರ್‌, ಕುಕ್ಕರ್‌, ಸಿಲಿಂಡರ್‌, ರಾಟಿ, ಹಣ್ಣಿನ ಬುಟ್ಟಿ ಸೇರಿದಂತೆ ನಿತ್ಯ ಬಳಕೆ ವಸ್ತುಗಳಿರುವ ಚಿಹ್ನೆಗಳಿಗೆ ಅಭ್ಯರ್ಥಿಗಳು ಆದ್ಯತೆ ನೀಡಿದ್ದಾರೆ.

Advertisement

ಚಿಕನ್‌-ಮಟನ್‌ ಆಫರ್‌:

ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗುವ ಯುವಕರ ಗುಂಪಿಗೆ ಚಿಕನ್‌, ಮಟನ್‌ ಆಫರ್‌ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಚುನಾವಣೆಯಲ್ಲಿ ಆಮಿಷಗಳಿಗೆ ಕಡಿಮೆ ಇಲ್ಲ. ಬೇಡವೆಂದರೂ ಮನೆ ಮನೆಗೂ ಚಿಕಿನ್‌, ಮಟನ್‌ ಆಫರ್‌ ಗಳು ಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಿನಲ್ಲಿ ಹಳ್ಳಿಯಲ್ಲಿ ಜಿದ್ದಿಗೆ ಬಿದ್ದವರು ಎಂಬಂತೆ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಣ್ಣಪುಟ್ಟ ಜಾತಿ ಸಮುದಾಯದ ಮತಗಳ ಕ್ರೋಢೀಕರಣಕ್ಕೂ ರಣತಂತ್ರ ಹೆಣೆದು ಮುಖಂಡರ ಮನವೊಲಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ.

ಇದನ್ನೂ ಓದಿ:ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ದ

2ನೇ ಹಂತ: 76 ಗ್ರಾಪಂಗಳಿಗೆ 1551 ಮಂದಿ ನಾಮಪತ್ರ ಸಲ್ಲಿಕೆ

2ನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯ 76 ಗ್ರಾಪಂಗಲ್ಲಿ ಬುಧವಾರ ಮಧ್ಯಾಹ್ನದವರೆಗೆ 1551 ನಾಮಪತ್ರಗಳು ಸಲ್ಲಿಕೆಯಾಗಿವೆ. ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ ಹಾಗೂ ಕುಷ್ಟಗಿ ತಾಲೂಕುಗಳ 76 ಗ್ರಾಮ ಪಂಚಾಯಿತಿಗಳ 1,375 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಗಂಗಾವತಿ ತಾಲೂಕಿನ 18 ಗ್ರಾಮ ಪಂಚಾಯಿತಿಗಳ 347 ಸ್ಥಾನಗಳಿಗೆ 399 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾರಟಗಿ ತಾಲೂಕಿನ 11 ಗ್ರಾಪಂಗಳ 207 ಸ್ಥಾನಗಳಿಗೆ 226 ಅಭ್ಯರ್ಥಿಗಳು, ಕನಕಗಿರಿ ತಾಲೂಕಿನ  36 ಗ್ರಾಪಂಗಳ 625 ಸ್ಥಾನಗಳಿಗೆ 744 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಎಡಿಸಿ ಎಂಪಿ ಮಾರುತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಮತಯಾಚನೆ

ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಸಾಂಪ್ರದಾಯಿಕ ಪ್ರಚಾರದೊಂದಿಗೆ ಡಿಜಿಟಲ್‌ ಪ್ರಚಾರ ಕೂಡ ಸದ್ದು ಮಾಡುತ್ತಿದೆ. ಅಭ್ಯರ್ಥಿಗಳ ಬೆಂಬಲಿಗರು ವಿವಿಧ ವೀಡಿಯೋ ಸೇರಿಸಿ, ಅಭ್ಯರ್ಥಿ ಪೋಟೋಗೆ ಸಿನಿಮಾ ಟ್ಯೂನ್‌ಗಳನ್ನು ಸಂಯೋಜಿಸಿ ಮತ ಕೇಳುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಸ್ವತಃ ಚುನಾವಣಾ ಆಯೋಗವೇ ಕೋವಿಡ್‌ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಬಹುದು ಎಂದು ಸೂಚಿಸಿದೆ.

ಹೀಗಾಗಿ ವಿವಿಧ ವಾರ್ಡ್‌ಗೆ ಅಭ್ಯರ್ಥಿಗಳ ಮಾದರಿ ಮತಪತ್ರ ತಯಾರಿಸಿ, ಕೈ ಮುಗಿದಿರುವ, ಮತದಾರನ ಕಾಲು ಬೀಳುವಂತ, ತಾನು ಅಭಿವೃದ್ಧಿ ಕೆಲಸ ಮಾಡಿದಂತಹ ಪೋಟೋಗಳನ್ನು ಸಂಯೋಜಿಸಿ ಅದಕ್ಕೊಂದು ಟ್ಯೂನ್‌ ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಇನ್ನೂ ಅಭ್ಯರ್ಥಿಗಳ ಪರ ಪ್ರಚಾಕ್ಕಿಳಿದ ಯುವಕರು, ಹುಡುಗರ ಗುಂಪುಗಳ ಮೊಬೈಲ್‌ ವಾಟ್ಸ್‌ ಆ್ಯಪ್‌ ಡಿಪಿ, ಸ್ಟೇಟಸ್‌ನಲ್ಲೂ ಅಭ್ಯರ್ಥಿಗಳಿಗೆ ಬೆಂಬಲಿಸುವ ಸಂದೇಶ ಹಾಕುತ್ತಿದ್ದಾರೆ.

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next