Advertisement

ಅನುದಾನ ಮಂಜೂರಾದರೂ ನಡೆಯದ ಗ್ರಾ.ಪಂ. ಕಟ್ಟಡ ಕಾಮಗಾರಿ

12:31 PM Oct 18, 2020 | Suhan S |

ಕೋಟ, ಅ. 17: ಕೋಡಿ ಗ್ರಾ.ಪಂ.ನ ಆಡಳಿತ ಕಚೇರಿಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯ 15 ಲಕ್ಷ ರೂ. ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ 10 ಲಕ್ಷ ರೂ. ಹೆಚ್ಚುವರಿ ಅನುದಾನ ಸೇರಿದಂತೆ ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಚುವ ಯೋಜನೆ ರೂಪಿಸಲಾಗಿತ್ತು. ಕಾಮಗಾರಿಯ ಉಸ್ತುವಾರಿಯನ್ನು ಕೆ.ಆರ್‌.ಐ. ಡಿ.ಎಲ್‌. ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಅನುದಾನ ಮಂಜೂರಾಗಿ ಎರಡು ವರ್ಷ ಕಳೆದರೂ ಇದುವರೆಗೂ ಕಟ್ಟಡದ ತಳಪಾಯ ಕೂಡ ನಿರ್ಮಾಣವಾಗಿಲ್ಲ.

Advertisement

ಇದರಿಂದ ಗ್ರಾ.ಪಂ. ಕಚೇರಿ, ಗ್ರಾಮಲೆಕ್ಕಾಧಿಕಾರಿಗಳ ಕಚೇರಿ, ಗ್ರಂಥಾಲಯಗಳ ಕಾರ್ಯನಿರ್ವಹಣೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಶಾಲಾ ಕಟ್ಟಡದಲ್ಲಿ ಗ್ರಾ.ಪಂ. ಕಚೇರಿ :

ಹೊಸ ಕಟ್ಟಡ ನಿರ್ಮಿಸುವ  ಸಲುವಾಗಿ ಪಂಚಾ ಯತ್‌ನ ಹಳೆ ಕಟ್ಟಡವನ್ನು  2020 ಫೆಬ್ರವರಿಯಲ್ಲಿ ತೆರವುಗೊಳಿಸಲಾಗಿತ್ತು ಮತ್ತು ಸ್ಥಳೀಯ ಕೋಡಿ ಪ್ರೌಢಶಾಲೆಯ ಕಟ್ಟಡಕ್ಕೆ ಕಚೇರಿಯನ್ನು  ಸ್ಥಳಾಂತರಿಸ ಲಾಗಿತ್ತು. ಈಗ ಅದೇ ಸ್ಥಳದಲ್ಲಿ  ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ವಾಚನಾಲಯ, ಗ್ರಾ.ಪಂ. ಕಚೇರಿ ಕಾರ್ಯ ನಿರ್ವಹಿಸುತ್ತಿದೆ.

ಶೇ.60ರಷ್ಟು  ಹಣ ಬಿಡುಗಡೆ :

Advertisement

ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿ ಕೋಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಅಭಿವೃದ್ಧಿ, ಬೀದಿ ದೀಪ, ದೇಗುಲಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ 75 ಲಕ್ಷ ರೂ. ಮಂಜೂರಾಗಿತ್ತು. ಆದರೆ ಇದರಲ್ಲಿ ಶೇ. 60ರಷ್ಟು ಮಾತ್ರ ಅನುದಾನ ಬಿಡುಗಡೆಯಾಗಿದ್ದು ಅದನ್ನು ರಸ್ತೆ, ಬೀದಿದೀಪ ಮುಂತಾದ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ.

ಶೇ.40ರಷ್ಟು ಅನುದಾನ ಬಿಡುಗಡೆಯಾಗಲು ಬಾಕಿ ಇದ್ದು  ಮುಂಗಡವಾಗಿ ಕೈಗೊಂಡ ಕಾಮಗಾರಿಗಳಿಗೆ  ಐದಾರು ತಿಂಗಳು ಕಳೆದರೂ ಹಣ ಜಮೆ ಆಗಿಲ್ಲ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಹಣ ಲಭ್ಯವಿಲ್ಲ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಶಿಫಾರಸಿನ ಮೇರೆಗೆ ಮಂಜೂರಾದ 10 ಲಕ್ಷ ರೂ. ಅನುದಾನ ಬಳಸಿಕೊಂಡು ಅಷ್ಟೇ ಮೊತ್ತದಲ್ಲಿ ಕಟ್ಟಡ ನಿರ್ಮಿಸಿಕೊಡುತ್ತೇವೆ. ಮುಂದೆ ಹೆಚ್ಚುವರಿ ಮೊತ್ತ ಬಿಡುಗಡೆಯಾದರೆ ಕಾಮಗಾರಿ ಮುಂದುವರಿಸಲಾಗುವುದು ಎನ್ನುವುದು ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಆರ್‌.ಐ.ಡಿ.ಎಲ್‌. ಸಂಸ್ಥೆಯ ಎಂಜಿನಿಯರ್‌ ಹೇಳಿಕೆಯಾಗಿದೆ.

ಕಟ್ಟಡ ನೆಲಸಮಗೊಳಿಸಲು  ಹಾಗೂ ಸ್ಥಳ ಗುರುತಿಸಲು ವಿಳಂಬವಾದ್ದರಿಂದ ಆರಂಭದಲ್ಲಿ ಕಾಮಗಾರಿ ತಡವಾಗಿತ್ತು. ಆದರೆ ಇದೀಗ ಅನುದಾನದ ಕೊರತೆ ಇದೆ. ಗ್ರಾಮವಿಕಾಸ ಯೋಜನೆಯಲ್ಲಿ ಮುಂಗಡವಾಗಿ ಕೈಗೊಂಡ ಕಾಮಗಾರಿಗಳಿಗೆ ಹಣ ಪಾವತಿ ಆಗಿಲ್ಲ. ಹೀಗಾಗಿ ಹಣ ಬಿಡುಗಡೆಯಾಗದೆ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಲಭ್ಯ 10 ಲಕ್ಷ ರೂ. ಅನುದಾನದಲ್ಲಿ   ಶೀಘ್ರ ಕಾಮಗಾರಿ ಆರಂಭಿಸುತ್ತೇವೆ. -ದಿನೇಶ್‌, ಎಂಜಿನಿಯರ್‌, ಕೆ.ಆರ್‌.ಐ.ಡಿ.ಎಲ್‌.

ಗ್ರಾ.ಪಂ. ಕಟ್ಟಡ ಕಾಮಗಾರಿ ಈಗಾಗಲೇ ಸಾಕಷ್ಟು ವಿಳಂಬವಾದ ಕುರಿತು ಗ್ರಾಮಸ್ಥರ ಅಸಮಾಧಾನವಿದೆ. ಈ ಹಿಂದೆ ಯೋಜನೆ ರೂಪಿಸಿದಂತೆ 25 ಲಕ್ಷ ರೂ. ವೆಚ್ಚದ ಕಟ್ಟಡ ನಿರ್ಮಿಸಬೇಕು. ಗ್ರಾಮವಿಕಾಸ  ಅನುದಾನ ಕೆಲಸ ಮುಗಿದ ಮೇಲೆ ಹಣ ಪಾವತಿಯಾಗುತ್ತದೆ. ವ್ಯವಸ್ಥಿತವಾಗಿ, ಆದಷ್ಟು ಶೀಘ್ರದಲ್ಲಿ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದು  ಈ ಬಗ್ಗೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ.  -ಬೆನ್ನಿ ಕ್ವಾಡ್ರಸ್‌, ಪಿ.ಡಿ.ಒ. ಕೋಡಿ ಗ್ರಾ.ಪಂ.

 

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next