ಕುಣಿಗಲ್: ಗ್ರಾಪಂ ಚುನಾವಣೆಯ ಸದಾಚಾರ ನೀತಿ, ಕಾನೂನು ಉಲ್ಲಂಘನೆ ಮಾಡಿ 11.75 ಲಕ್ಷ ರೂ.ಗೆಸದಸ್ಯತ್ವ ಹರಾಜು ಪ್ರಕ್ರಿಯೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಗಡಿಪಾರುಗೆ ಶಿಫಾರಸು ಮಾಡಲಾಗಿದೆ ಎಂದು ಡಿವೈಎಸ್‌ಪಿ ಜಗದೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.22 ರಂದು ತಾಲೂಕಿನ 36 ಗ್ರಾಪಂಗೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಗ್ರಾಮಸ್ಥರಿಗೆ ಹಾಗೂ ತಮ್ಮ ಪ್ರತಿ ಸ್ಪರ್ಧಿಗಳಿಗೆ ಆಮಿಷವೊಡ್ಡಿ ಹರಾಜು ಮೂಲಕ ಆಯ್ಕೆ ಆಗಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬೆಟ್ಟಹಳ್ಳಿ, ಚೌಡನಕುಪ್ಪೆ,ಅಂಗರಹಳ್ಳಿ ಗ್ರಾಮದಲ್ಲಿ ಪರಿಶೀಲಿಸಲಾಗಿ ಇಲ್ಲಿ ಯಾವುದೇ ಹರಾಜು ಪ್ರಕ್ರಿಯೆ ನಡೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರು.
ಕಾಡಮತ್ತಿಕೆರೆಯ ಬಿಸಿಎಂ ಎ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಲಕ್ಷ್ಮಮ್ಮ ಹೆಸರಿಗೆ ಹರಾಜು ನಡೆದಿರುವ ಬಗ್ಗೆವಿಡಿಯೋ ದಾಖಲೆ ಸಿಕ್ಕಿರುವ ಕಾರಣ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ ಜಯರಾಮ್, (38), ರಂಗನಾಥ್ (45), ನಾಗರಾಜು (40),ಮಂಜುನಾಥ್ (42) ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು ಗಡಿಪಾರುಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ಶಾಂತಿಯುತ ಚುನಾವಣೆಗಾಗಿ ಅಗತ್ಯ ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. 13 ಮೊಬೆ„ಲ್ ವಾಹನಗಳನ್ನು ನಿಗದಿತ ಮತಗಟ್ಟೆಗಳ ಸುತ್ತಲು ಸಂಚರಿಸಲಿವೆ. 4 ಮಂದಿ ಸಿಪಿಐ, ಓರ್ವ ಡಿವೈಎಸ್‌ಪಿ, 420 ಮಂದಿ ಪೇದೆಗಳು, 2 ಡಿಆರ್, 2ಕೆಎಸ್‌ಆರ್‌ಪಿ ವಾಹನಗಳನ್ನು ಚುನಾವಣೆಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದರು.
ಚುನಾವಣಾಧಿಕಾರಿಯಾದ ತಹಶೀಲ್ದಾರ್ ವಿ.ಆರ್.ವಿಶ್ವನಾಥ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 36 ಗ್ರಾಪಂಗಳಿಂದ 496 ಗ್ರಾಪಂ ಸ್ಥಾನಗಳು ಆಯ್ಕೆಗೊಳ್ಳಬೇಕಾಗಿದೆ. ಈ ಸಂಬಂಧ ಒಟ್ಟು 1962ನಾಮಪತ್ರ ಸಲ್ಲಿಯಾಗಿದ್ದು, 754 ಮಂದಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. 1208 ಮಂದಿ ಕಣದಲ್ಲಿ ಇದ್ದು ಈ ಪೈಕಿ37 ಮಂದಿ ಅವಿರೋಧವಾಗಿಆಯ್ಕೆಯಾಗಿದ್ದಾರೆ. ಆದರೆ ಚುನಾವಣೆ ಆಯೋಗದ ಆದೇಶದ ಮೇರೆಗೆ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಕಾರಣ ಗ್ರಾಪಂ ಸ್ಥಾನಗಳು ಹರಾಜು ಆಗಿರುವ ಬಗ್ಗೆ ಮಾಧಮ್ಯಗಳಲ್ಲಿ ವರದಿ ಬಂದಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿರುವ ಕ್ಷೇತ್ರಗಳಲ್ಲಿ ತನಿಖಾ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.
ತನಿಖಾ ತಂಡ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಹಾಗೇನಾದರೂ ಭಯದ ವಾತಾವರಣ ನಿರ್ಮಿಮಿಸಿ ಹಾಗೂ ಹಣ ಆಮಿಷ ನೀಡಿ ಅವಿರೋಧವಾಗಿ ಆಯ್ಕೆಯಾಗಿದ್ದರೇ ತಂಡ ನೀಡಿದ ವರದಿಯನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ನಂತರವೇ ಅವಿರೋಧ ಅಯ್ಕೆಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ತಾಪಂ ಇಒ ಜೋಸೆಫ್ ಇತರರು ಇದ್ದರು.