Advertisement
ಕೆಲವೊಂದು ಗ್ರಾ.ಪಂ.ಗಳಲ್ಲಿ ಬಿಜೆಪಿ–ಕಾಂಗ್ರೆಸ್ ಬೆಂಬಲಿತರ ಜತೆ ಎಸ್‌ಡಿಪಿಐ ಬೆಂಬಲಿತರು ಕೂಡ ಚುನಾವಣ ಕಣಕ್ಕಿಳಿದಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯೂ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸು ತ್ತಿರುವರಾದರೂ ಮತದಾರರನ್ನು ಸೆಳೆಯುವ ಬಗೆಗೆ ಕಾರ್ಯ ತಂತ್ರ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ. ಪ್ರತೀ ಗ್ರಾ.ಪಂ. ಕಚೇರಿಗಳ ಮುಂದೆ ಅಭ್ಯರ್ಥಿಗಳು ಆಯ್ಕೆ ಮಾಡಬಹು ದಾದ ಚಿಹ್ನೆಗಳ ವಿವರ ಹಾಕಲಾಗಿದೆ. ಯಾವ ಚಿಹ್ನೆ ಮತದಾರರ ಮನ ಗೆಲ್ಲಬಹುದು ಎಂಬ ಜಿಜ್ಞಾಸೆ ಅಭ್ಯರ್ಥಿಗಳಲ್ಲಿ ಆರಂಭವಾಗಿದೆ.
Related Articles
Advertisement
ಕಳೆದ ಅವಧಿಯಲ್ಲಿ ಸಜೀಪ ಮುನ್ನೂರು ಗ್ರಾ.ಪಂ.ನ 23 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 11, ಬಿಜೆಪಿ ಬೆಂಬಲಿತರು 9 ಹಾಗೂ ಎಸ್‌ಡಿಪಿಐ ಬೆಂಬಲಿತರು 3 ಕಡೆಗಳಲ್ಲಿ ಗೆದ್ದಿದ್ದರು. ಸಜೀಪಮೂಡ ಗ್ರಾ.ಪಂ.ನ 20 ಸ್ಥಾನಗಳ ಪೈಕಿ ಪ್ರಾರಂಭದಲ್ಲಿ 16 ಕಡೆ ಕಾಂಗ್ರೆಸ್ ಬೆಂಬಲಿತರು ಹಾಗೂ 4 ಕಡೆ ಬಿಜೆಪಿ ಬೆಂಬಲಿತರು ಗೆದ್ದಿದ್ದು, ಬಳಿಕ ಬದಲಾದ ಸನ್ನಿವೇಶದಲ್ಲಿ ಓರ್ವ ಸದಸ್ಯರು ಬಿಜೆಪಿ ಕಡೆ ವಾಲಿದ್ದರು.
ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಸಜೀಪ ಪಡು ಗ್ರಾ.ಪಂ.ನ 8 ಸ್ಥಾನಗಳ ಪೈಕಿ 5 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು, 3 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಇರಾ ಗ್ರಾ.ಪಂ.ನಲ್ಲಿ 19 ಸ್ಥಾನಗಳ ಪೈಕಿ 13ರಲ್ಲಿ ಕಾಂಗ್ರೆಸ್ ಬೆಂಬಲಿತರು, 6 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದಿದ್ದರು. ಮಂಚಿಯಲ್ಲಿ ಪ್ರಾರಂಭದಲ್ಲಿ 10 ಕಾಂಗ್ರೆಸ್ ಬೆಂಬಲಿತರು, 11 ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಆದರೆ ಬಳಿಕ ತೆರವಾದ ಬಿಜೆಪಿ ಬೆಂಬಲಿತರ ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು. ಆದರೆ ಕೊನೆಯವರೆಗೂ ಬಿಜೆಪಿ ಬೆಂಬಲಿತ ಅಧ್ಯಕ್ಷರು ಅಧಿಕಾರದಲ್ಲಿದ್ದರು. ವೀರಕಂಭ ಗ್ರಾ.ಪಂ.ನ 14 ಸ್ಥಾನಗಳ ಪೈಕಿ ಪ್ರಾರಂಭದಲ್ಲಿ 10 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹಾಗೂ 4 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಆದರೆ ಬಳಿಕ ಬಿಜೆಪಿ ಬೆಂಬಲಿತರೋರ್ವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು.
ಎಸ್‌ಡಿಪಿಐ ಅಧಿಕಾರ :
ಕಳೆದ ಅವಧಿಯಲ್ಲಿ ಬಂಟ್ವಾಳದ ಸಜೀಪ ನಡು ಗ್ರಾಮ ಪಂಚಾಯತ್ ಎಸ್‌ಡಿಪಿಐ ಬೆಂಬಲಿತರು ಅಧಿಕಾರ ನಡೆಸಿದ ಮೊದಲ ಗ್ರಾಮ ಪಂಚಾಯತ್ ಆಗಿತ್ತು. ಈ ಗ್ರಾಮ ಪಂಚಾಯತ್‌ನಲ್ಲಿ ಎಸ್‌ಡಿಪಿಐ ಬೆಂಬಲಿತರು 7, ಕಾಂಗ್ರೆಸ್ ಬೆಂಬಲಿತರು 5 ಹಾಗೂ ಬಿಜೆಪಿ ಬೆಂಬಲಿತರು 3 ಕಡೆ ಗೆದ್ದಿದ್ದರು. ಹೀಗಾಗಿ ಈ ಗ್ರಾ.ಪಂ.ನಲ್ಲಿ ಹೆಚ್ಚಿನ ಕಡೆ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಸಜೀಪಮುನ್ನೂರು ಗ್ರಾಮ ಪಂಚಾಯತ್‌ವ್ಯಾಪ್ತಿಯ ನಂದಾವರ ಅರಮನೆ ಹಿತ್ಲುವಿನಲ್ಲಿ ರವಿವಾರ ಮತದಾನ ಬಹಿಷ್ಕಾರದ ಬ್ಯಾನರ್ ಕಂಡುಬಂತು.
ಓಟು ಬಂತಣ್ಣಾ ಓಟು… :
“ಉದಯವಾಣಿ‘ಯ ತಂಡ ಗ್ರಾ.ಪಂ.ಗಳಲ್ಲಿ ಚುನಾವಣ ಸ್ಥಿತಿಗತಿಯ ಅವಲೋಕನಕ್ಕಾಗಿ ತೆರಳಿದ್ದ ವೇಳೆ ಮತ ಪ್ರಚಾರದ ಯಾವುದೇ ಲಕ್ಷಣಗಳು ಕಂಡುಬಾರದೇ ಇದ್ದರೂ ದ.ಕ.ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಮತದಾನ ಜಾಗೃತಿಯಲ್ಲಿ ತೊಡಗಿರುವುದು ಕಂಡುಬಂತು. ಮಂಚಿ–ಕುಕ್ಕಾಜೆ ಜಂಕ್ಷನ್‌ನಲ್ಲಿ ಬೀದಿನಾಟಕ–ಸಂಗೀತದ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿತ್ತು. ಈ ವೇಳೆ ಕುಡುಕನ ಪಾತ್ರಧಾರಿಯೊಬ್ಬ ಬಂದಾಗ ನಿಜವಾದ ಕುಡುಕನೇ ಬಂದಿದ್ದಾನೆ ಎಂದು ಸ್ಥಳೀಯರು ಆತನನ್ನು ಬದಿಗೆ ಹೋಗುವಂತೆ ಹೇಳಿದ ಘಟನೆಯೂ ನಡೆಯಿತು!