ಸಾಗರ: ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯ್ತಿಯಲ್ಲಿ ಗರಿಷ್ಠ ಸಂಖ್ಯೆಯ ಬಿಜೆಪಿ ಬೆಂಬಲಿತ ಸದಸ್ಯರಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ ಘಟನೆ ಬುಧವಾರ ನಡೆದಿದ್ದು, ತಮ್ಮೊಳಗೆ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಮಾಡಲು ಹೋದರೆ ಎಲ್ಲಾ ಎಂಟು ಜನ ಬಿಜೆಪಿ ಅನುಯಾಯಿಗಳೂ ಬಿಜೆಪಿಗೇ ಮತ ಹಾಕಿರುವುದಾಗಿ ಪ್ರಮಾಣ ಮಾಡುವ ಮೂಲಕ ಪಕ್ಷದ ನಾಯಕರನ್ನು ಹಾಗೂ ದೇವರನ್ನು ಗೊಂದಲದಲ್ಲಿ ಬೀಳಿಸಿದ ಪ್ರಸಂಗ ನಡೆದಿದೆ.
13 ಸದಸ್ಯರಿರುವ ಗ್ರಾಪಂನಲ್ಲಿ 8ಜನ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 5 ಜನ ಕಾಂಗ್ರೆಸ್ ಸದಸ್ಯರಿದ್ದರು. ಬುಧವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಭಾವತಿ ಲೋಕೇಶ್ 7 ಮತ ಪಡೆದರು. 8 ಜನ ಬಿಜೆಪಿ ಸದಸ್ಯರು ಇದ್ದರೂ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಮೀನಾಕ್ಷಿ ಲಿಂಗಪ್ಪ ಕೇವಲ ಆರು ಮತ ಪಡೆದು ಮುಖಭಂಗಕ್ಕೊಳಗಾದರು.
ಕಳೆದ ಅವಧಿಯಲ್ಲಿ ಬಿಜೆಪಿಯ 8 ಜನ ಸದಸ್ಯರು ಒಟ್ಟಾಗಿ ಅಧಿಕಾರ ಹಂಚಿಕೆ ಮಾಡಿಕೊಳ್ಳಲು ದೇವರಲ್ಲಿ ಆಣೆ ಪ್ರಮಾಣ ಮಾಡಿಕೊಂಡಿದ್ದರು. ಈ ಬಾರಿಯೂ ದೇವಸ್ಥಾನದಲ್ಲಿ ನಡೆದ ಅಧಿಕಾರ ಹಂಚಿಕೆ ಒಪ್ಪಂದದ ತೀರ್ಮಾನದಂತೆ ಒಟ್ಟಾಗಿ ಚುನಾವಣೆಯಲ್ಲಿ ಮೀನಾಕ್ಷಿಯವರನ್ನು ಬೆಂಬಲಿಸಬೇಕು, ಒಗ್ಗಟ್ಟಿಗೆ ಮುಕ್ಕಾಗಬಾರದು ಎಂದು ತೀರ್ಮಾನಿಸಿ ಮಂಗಳವಾರ ರಾತ್ರಿ ಶಿವಮೊಗ್ಗ ಲಾಡ್ಜ್ ಒಂದರಲ್ಲಿ ತಂಗಿದ್ದರು. ಬುಧವಾರ ಬೆಳಿಗ್ಗೆ ವಾಹನದ ಮೂಲಕ ನೇರವಾಗಿ ಆಗಮಿಸಿದ ಸದಸ್ಯರು ಮತದಾನ ಮಾಡಿದ್ದರು. ಆದರೆ ಚುನಾವಣಾ ಫಲಿತಾಂಶ ಪ್ರಕಟವಾದಾಗ ಘೋಷಿತವಾದ ಮೀನಾಕ್ಷಿಯವರ ಸೋಲು ಬಿಜೆಪಿಗೆ ಶಾಕ್ ತಂದಿತ್ತು.
ತಕ್ಷಣ ಗೊಂದಲಗಳಾಗಿ, ಯಾರು ಇಬ್ಬರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಜಿಜ್ಞಾಸೆ ಕಾಡಿದ್ದರಿಂದ ಆ ಇಬ್ಬರು ಸದಸ್ಯರು ಯಾರು ಎಂದು ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿ ಬಿಜೆಪಿ ಗುಂಪು ಬಂದಿಳಿದ ವಾಹನವನ್ನೇ ಏರಿ ಹಿಂದಿನ ಬಾರಿ ಅಧಿಕಾರ ಹಂಚಿಕೆಯ ವೇಳೆ ಒಡಂಬಡಿಕೆ ಮಾಡಿಕೊಂಡಿದ್ದ ದೇವಸ್ಥಾನಕ್ಕೆ ತೆರಳಿದೆ. ಈ ವೇಳೆ ಎಲ್ಲಾ 8 ಜನ ಸದಸ್ಯರು ಮೀನಾಕ್ಷಿಯವರಿಗೇ ಮತ ಹಾಕಿದ್ದೇವೆ ಎಂದು ಪ್ರಮಾಣ ಮಾಡಿದ್ದಾರೆ. ಈಗ ಯಾರು ಮೋಸ ಮಾಡಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿ ಬಿಜೆಪಿಗೆ ತೀವ್ರ ಗೊಂದಲ ಉಂಟಾಗಿದೆ.
ಉಪಾಧ್ಯಕ್ಷರಾಗಿ ರೇಣುಕಾ ಸುರೇಶ್ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರಾದ ಎಚ್. ಗಿರೀಶ್, ಇಸಾಕ್, ಹನುಮಂತ, ಮರಾಠಿ ಪರಶುರಾಮ್, ಗೀತಾ, ಯಶೋಧಾ, ರೇವಪ್ಪ, ಚೈತ್ರಾ ಟಾಕಪ್ಪ, ಉಷಾ, ಮಧು, ಸುಭಾಷ್ ಚಂದ್ರ ಮತದಾನದಲ್ಲಿ ಪಾಲ್ಗೊಂಡಿದ್ದರು. ಪಿಡಿಒ ಮೋಹನ್ ಇದ್ದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಸನ್ನ ಕುಮಾರ್ ಚುನಾವಣೆ ಪ್ರಕ್ರಿಯೆ ನಡೆಸಿದರು.
ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು: ಅಧಿಕಾರ ನಡೆಸಲು ಸಂಖ್ಯಾಬಲ ಇಲ್ಲದಿದ್ದರೂ ಚುನಾವಣಾ ತಂತ್ರಗಾರಿಕೆಯಲ್ಲಿ ಯಶಸ್ಸು ಸಾಧಿಸಿದ ಕಾಂಗ್ರೆಸ್ ಕಾರ್ಯಕರ್ತರು ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸನ್ಮಾನ ನೆರವೇರಿಸಿದರು. ತ್ಯಾಗರ್ತಿಯ ಮಾರಿಕಾಂಬ ದೇವಸ್ಥಾನದ ಬಳಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ತಾಪಂ ಮಾಜಿ ಸದಸ್ಯ ಸೋಮಶೇಖರ್ ಲಾವಿಗ್ಗೆರೆ, ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು, ಟಿ.ಕೆ. ಹನುಮಂತಪ್ಪ, ಕೆ.ಬಿ. ಹೊಳಿಯಪ್ಪ, ನಿಂಗಪ್ಪ ಬೆಳಂದೂರು, ಪ್ರತಾಪ್, ಮಂಜುನಾಥ್ ಬರೂರು, ಖಂಡೋಜಪ್ಪ, ಪುಟ್ಟಪ್ಪ ಇನ್ನಿತರರು ಇದ್ದರು.